ಸಾವಿರ ಸಂದೇಶ ನೀಡಲಿರುವ ಚಿತ್ರಕಲೆ

0
8

ದಾವಣಗೆರೆ:

       ಒಂದು ಚಿತ್ರಕ್ಕೆ ಸಾವಿರ ಸಂದೇಶ ನೀಡುವ ಶಕ್ತಿ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.

        ನಗರದ ಡಯಟ್‍ನಲ್ಲಿ ಬುಧವಾರ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದಿಂದ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರಕಲೆಯ ಮೂಲಕ ಹಲವಾರು ವಿಷಯಗಳನ್ನು ವಿಶ್ಲೇಷಣೆ ಮಾಡಲು ಸಾಧ್ಯ ಎಂಬುದನ್ನು ಪ್ರಾಚೀನ ಕಾಲದಿಂದಲೂ ನೋಡಿಕೊಂಡು ಬಂದಿದ್ದೇವೆ. ಹೀಗಾಗಿ ಚಿತ್ರಕಲೆ ವಿಶೇಷ ಸಾಧನವಾಗಿದ್ದು, ಒಂದು ಚಿತ್ರದ ಮೂಲಕ ಸಾವಿರ ಸಂದೇಶ ನೀಡಬಹುದಾಗಿದೆ ಎಂದರು.

         ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೆಕ್ಕಿ ತೆಗೆಯಲು ಸಹ ಚಿತ್ರಕಲೆ ಸಹಕಾರಿಯಾಗಿದೆ. ಆದರೆ, ಚಿತ್ರಕಲೆಯು ಬರೀ ಪಠ್ಯವಾಗಿದ್ದು, ಇದು ಪರೀಕ್ಷೆಗೆ ಇಲ್ಲ ಎಂಬ ಭಾವನೆ ಹೆಚ್ಚಿನವರಲ್ಲಿ ಮನೆ ಮಾಡಿರುವುದು ತಪ್ಪು ಗ್ರಹಿಕೆಯಾಗಿದೆ ಎಂದ ಅವರು ಚಿತ್ರಕಲಾ ಶಿಕ್ಷರು ಆಲ್‍ರೌಂಡರ್‍ಗಳಾಗಿದ್ದು, ಎಲ್ಲಾ ವಿಷಯಗಳಲ್ಲೂ ಮುಂದಿರುತ್ತಾರೆ ಎಂದು ತಿಳಿಸಿದರು.

          ಜೀವಶಾಸ್ತ್ರ ವಿಷಯದಲ್ಲಿ ಕಣ್ಣು, ಮೂಗು, ಅನ್ನನಾಳ ಸೇರಿದಂತೆ ಇತರೆ ಚಿತ್ರಗಳನ್ನು ಬರೆಯುವುದನ್ನು ಮಕ್ಕಳಿಗೆ ಸರಿಯಾಗಿ ಮನನ ಮಾಡಿಕೊಟ್ಟರೆ, ಆ ಮಗುವು ಚಿತ್ರ ಬರೆಯುವುದರ ಮೇಲೆಯೇ ಸುಮಾರು 22 ಅಂಕಗಳನ್ನು ಗಳಿಸಲಿದೆ. ಅಲ್ಲದೇ, ಸಮಾಜವಿಜ್ಞಾನದಲ್ಲಿ ಸುಂದರವಾಗಿ ಭಾರತದ ಭೂಪಟ ಬರೆದರೆ ನಾಲ್ಕು ಅಂಕಗಳನ್ನು ಅನಾಯಾಸವಾಗಿ ಪಡೆಯಬಹುದು. ಹೀಗೆ ಚಿತ್ರಕಲೆಯೂ ಎಲ್ಲಾ ವಿಷಯಗಳಿಗೆ ಸಂಬಂಧಪಟ್ಟದ್ದಾಗಿದ್ದು, ಇತರೆ ವಿಷಯ ಬೋಧಿಸುವ ಆರು ಶಿಕ್ಷಕರನ್ನು ಸಹ ಚಿತ್ರಕಲಾ ಶಿಕ್ಷಕರು ಲೀಡ್ ಮಾಡುವ ಗುಣ ಹೊಂದಿರುತ್ತಾರೆ ಎಂದು ಹೇಳಿದರು.

        ಹೊಸತನವನ್ನು ಕಂಡುಕೊಂಡಿರುವ ಚಿತ್ರಕಲಾ ಶಿಕ್ಷಕರು, ಉತಮವಾದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಚಿತ್ರಕಲೆಯ ಮುಖೇನ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಆಯುಕ್ತರ ಕಚೇರಿಯ ನಿವೃತ್ತ ನಿರ್ದೇಶಕ ಎನ್.ಎಸ್.ಕುಮಾರ್ ಮಾತನಾಡಿ, ಚಿತ್ರಕಲೆಯು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯು ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಚಿತ್ರಕಲಾ ಶಿಕ್ಷಕರು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

         ಚಿತ್ರಕಲಾ ಶಿಕ್ಷಕರು ರಚಿಸುವ ಕಲಾಕೃತಿಗಳು ಕೊನೆಯ ವರೆಗೂ ಮಾತನಾಡಲಿವೆ. ಹೀಗಾಗಿ ನೀವು ಸಾರ್ವಜನಿಕರ ಸ್ಮøತಿಪಟಲದಿಂದ ದೂರವಾಗಲು ಸಾಧ್ಯವೇ ಇಲ್ಲ. ಹೀಗಾಗಿ ಸಿಗುವ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.

        ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರಾದ ನಾಗಭೂಷಣ ಆರ್, ಚನ್ನಬಸಪ್ಪ ಸೂಗೂರು ಅವರುಗಳಿಗೆ 2018-19ನೇ ಸಾಲಿನ ಜಿಲ್ಲಾ ಚಿತ್ರಕಲಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜಯ ಗುಳ್ಳೆದಗುಡ್ಡ, ಶಾಂತಯ್ಯ ಪರಡಿಮಠ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ 48 ಜನ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

         ಡಯಟ್ ಕಾಲೇಜಿನ ಪ್ರಾಂಶುಪಾಲ ಲಿಂಗರಾಜು ಹೆಚ್.ಕೆ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಹೆಚ್.ವಿಜಯಕುಮಾರ್, ಶಿಕ್ಷಣಾಧಿಕಾರಿ ನಿರಂಜನಮೂರ್ತಿ, ಬಿಇಒ ಬಿ.ಸಿ.ಸಿದ್ಧಪ್ಪ, ಕೊಟ್ರೇಶ್ ಜಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಸೋಮಣ್ಣ ಚಿತ್ರಗಾರ, ಮಲ್ಬಾರ್ ಗೋಲ್ಡ್‍ನ ಅಮ್ಜದ್ ವಿ.ಕೆ. ಮತ್ತಿತರರು ಉಪಸ್ಥಿತರಿದ್ದರು. ಅಚುತಾನಂದ್ ಬಿ ಪ್ರಾರ್ಥಿಸಿದರು. ನಾಗರಾಜ್ ಟಿ ಭಾನುವಳ್ಳಿ ಸ್ವಾಗತಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here