`ಉದ್ದಿಮೆ ಪರವಾನಗಿ’ ಶುಲ್ಕ 2.12 ಕೋಟಿ ಬಾಕಿ

ತುಮಕೂರು

     ತುಮಕೂರು ನಗರದಲ್ಲಿರುವ ವಿವಿಧ ಉದ್ಯಮಗಳಿಂದ `ಉದ್ದಿಮೆ ಪರವಾನಗಿ’ (ಟ್ರೇಡ್ ಲೈಸೆನ್ಸ್) ಶುಲ್ಕವಾಗಿ ಪ್ರಸಕ್ತ ಸಾಲಿನಲ್ಲಿ 2 ಕೋಟಿ 12 ಲಕ್ಷ ರೂ. ಬಾಕಿ ಉಳಿದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತ ಭೂಪಾಲನ್ ಅವರು, `ಉದ್ದಿಮೆ ಪರವಾನಗಿ’ ಶುಲ್ಕದ ಸಮರ್ಪಕ ಹಾಗೂ ಪರಿಣಾಮಕಾರಿ ಸಂಗ್ರಹಕ್ಕಾಗಿ ನಗರಾದ್ಯಂತ ಇರುವ ವಾಣಿಜ್ಯ ಮಳಿಗೆಗಳ ಬಗ್ಗೆ ಸಮಗ್ರವಾಗಿ ಹೊಸ ಸಮೀಕ್ಷೆ ನಡೆಸಲು ಕ್ರಮ ಕೈಗೊಂಡಿದ್ದಾರೆ.

        ಆಯುಕ್ತರ ಸೂಚನೆ ಮೇರೆಗೆ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರುಗಳು (ಹೆಲ್ತ್ ಇನ್ಸ್‍ಪೆಕ್ಟರ್‍ಗಳು) ಪ್ರತಿ ವಾರ್ಡ್ ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭಿಸಿದ್ದಾರೆ. ಸಮೀಕ್ಷೆಗಾಗಿ ಒಂದು ನಮೂನೆ ಸಿದ್ಧಪಡಿಸಲಾಗಿದೆ. ಅಂಗಡಿ ಮಾಲೀಕರಷ್ಟೇ ಅಲ್ಲದೆ ಆಯಾ ಕಟ್ಟಡದ ಮಾಲೀಕರ ವಿವರವೂ ಸಂಗ್ರಹವಾಗಲಿದೆ.

        ಉದ್ದಿಮೆ ಪರವಾನಗಿ ಜೊತೆಯಲ್ಲೇ ಆಸ್ತಿ ತೆರಿಗೆ ಸಂಗ್ರಹದ ಬಗ್ಗೆಯೂ ನಿಗಾ ಇಡುವುದು ಸುಲಭವಾಗುವಂತೆ ಈ ಮಾಹಿತಿಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ನಗರದಲ್ಲಿ ಒಟ್ಟು 35 ವಾರ್ಡ್‍ಗಳಿದ್ದು, ಪ್ರತಿಯೊಂದು ವಾರ್ಡ್‍ನಲ್ಲಿರುವ ಪ್ರತಿಯೊಂದು “ಅಂಗಡಿ-ಮಳಿಗೆಗಳ ಹೆಸರು, ಅಂಗಡಿಯ ವಿಳಾಸ, ಉದ್ದಿಮೆದಾರರ ಹೆಸರು, ಮೊಬೈಲ್ ಸಂಖ್ಯೆ, ಸ್ವಂತ ಕಟ್ಟಡವೇ ಅಥವಾ ಬಾಡಿಗೆ ಕಟ್ಟಡವೇ?, ಬಾಡಿಗೆಯಾಗಿದ್ದಲ್ಲಿ ಕಟ್ಟಡ ಮಾಲೀಕರ ಹೆಸರು, ವಿಳಾಸ, ಮನೆ ಸಂಖ್ಯೆ- ಪಿ.ಐ.ಡಿ., ಆರ್.ಆರ್. ಸಂಖ್ಯೆ, ಯಾವ ವರ್ಷಕ್ಕೆ ಪರವಾನಗಿ ಪಡೆಯಲಾಗಿದೆ?” ಎಂಬ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಲು ಆರೋಗ್ಯ ನಿರೀಕ್ಷಕರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

2.12 ಕೋಟಿ ರೂ. ಬಾಕಿ

       `ಉದ್ದಿಮೆ ಪರವಾನಗಿ’ ಶುಲ್ಕಕ್ಕೆ ಸಂಬಂಧಿಸಿದಂತೆ ಈ ವರ್ಷದ ಸಂಗ್ರಹದ ಬೇಡಿಕೆ 1 ಕೋಟಿ 67 ಲಕ್ಷ ರೂ. ಆಗಿದೆ. ಹಿಂದಿನ ಬಾಕಿ 1 ಕೋಟಿ 29 ಲಕ್ಷ ರೂ. ಇದೆ. ಇವೆರಡೂ ಸೇರಿ ಒಟ್ಟಾರೆ 2 ಕೋಟಿ 96 ಲಕ್ಷ ರೂ. ಆಗಲಿದ್ದು, ಪ್ರಸಕ್ತ ವರ್ಷ 84 ಲಕ್ಷ ರೂ. ಸಂಗ್ರಹವಾಗಿದೆ. ಈ ಸಂಗ್ರಹದ ಬಳಿಕವೂ 2 ಕೋಟಿ 12 ಲಕ್ಷ ರೂ. ಇನ್ನೂ ಬಾಕಿ ಉಳಿದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

7,198 ಉದ್ದಿಮೆಗಳು

       ತುಮಕೂರು ಮಹಾನಗರ ಪಾಲಿಕೆ ದಾಖಲಾತಿ ಪ್ರಕಾರ ಪ್ರಸ್ತುತ ತುಮಕೂರು ನಗರದಲ್ಲಿ ಒಟ್ಟು 7,198 ಅಂಗಡಿ/ಉದ್ದಿಮೆಗಳಿವೆ. ಆದರೆ ಇವುಗಳಲ್ಲಿ ಅನೇಕ ಮಳಿಗೆಗಳು ಮುಚ್ಚಲ್ಪಟ್ಟಿರಬಹುದು. ಹಾಲಿ ಇರುವ ಮತ್ತು ಮುಚ್ಚಲ್ಪಟ್ಟಿರುವ ಮಳಿಗೆಗಳು `ಉದ್ದಿಮೆ ಪರವಾನಗಿ’ ಶುಲ್ಕವನ್ನು ಬಾಕಿ ಉಳಿಸಿಕೊಂಡಿರಬಹುದು. ಇನ್ನು ಹೊಸದಾಗಿ ಅನೇಕ ಮಳಿಗೆಗಳು ನಗರದಲ್ಲಿ ಆರಂಭವಾಗಿರಬಹುದು. ಇವುಗಳಲ್ಲಿ ಅನೇಕ ಮಳಿಗೆಗಳು `ಉದ್ದಿಮೆ ಪರವಾನಗಿ’ ಹೊಂದಿಲ್ಲದಿರಬಹುದು ಅಥವಾ ಶುಲ್ಕ ಬಾಕಿ ಇರಿಸಿಕೊಂಡಿರಬಹುದು. ಆದ್ದರಿಂದ ಹೊಸದಾಗಿ ಸಮೀಕ್ಷೆ ನಡೆಸಿ, ನಿಖರ ಮಾಹಿತಿ ಸಂಗ್ರಹಿಸಿ ಬರುವ ಏಪ್ರಿಲ್‍ನಿಂದ ಆರಂಭವಾಗುವ ಹೊಸ ಆರ್ಥಿಕ ವರ್ಷದಿಂದ `ಉದ್ದಿಮೆ ಪರವಾನಗಿ’ ಶುಲ್ಕ ಸಂಗ್ರಹಕ್ಕೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ.

         ಯಾವುದೇ ಉದ್ದಿಮೆ ಇದ್ದರೂ ಅವುಗಳು ಎಷ್ಟು ತಿಂಗಳು/ ವರ್ಷಗಳಿಂದ ಉದ್ದಿಮೆ ನಡೆಸುತ್ತಿದೆಯೆಂಬುದನ್ನು ವಿದ್ಯುತ್ ಬಿಲ್ ಮೂಲಕ ಹಾಗೂ ಆಯಾ ಕಟ್ಟಡದ ಆಸ್ತಿ ತೆರಿಗೆ ಪಾವತಿ ಮಾಹಿತಿಯ ಮೂಲಕ ತಿಳಿದುಕೊಂಡು, ಅದನ್ನು ಆಧರಿಸಿ `ಉದ್ದಿಮೆ ಪರವಾನಗಿ’ ಶುಲ್ಕ ಸಂಗ್ರಹಿಸಲು ಸಹ ಯೋಜಿಸಲಾಗಿದೆ. ಈಗ ಆರಂಭಿಸಿರುವ ಸಮೀಕ್ಷೆ ಮುಗಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಮೂಲಗಳು ಹೇಳುತ್ತಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap