ಧ್ಯಾನಾಸಕ್ತ ಅಧ್ಯಯನದಿಂದ ಉತ್ತಮ ಕಾವ್ಯಾಜ್ಞಿಯಾಗಲು ಸಾಧ್ಯ: ಚೆನ್ನಬಸವಣ್ಣ

ಬಳ್ಳಾರಿ

      ಏಕಕಾಲದಲ್ಲಿ ಅಕ್ಷರ ವಂಚಿತ ಸಮುದಾಯಗಳು ತೆರೆದುಕೊಂಡಿದ್ದೆ ಕಾವ್ಯ ಜಗತ್ತು ಬೆಳೆಯಲು ಕಾರಣ. ಕಾವ್ಯಾಭ್ಯಾಸ ಮಾಡಲು ತಾಳ್ಮೆ ಬೇಕು. ಧ್ಯಾನಾಸಕ್ತರಾಗಿ ಅಧ್ಯಯನ ಮಾಡಿದರೆ ಮಾತ್ರ ಒಬ್ಬ ಉತ್ತಮ ಕಾವ್ಯಾಜ್ಞಿ ಆಗಲು ಸಾಧ್ಯ ಎಂದು ಲೋಹಿಯಾ ಪ್ರಕಾಶನದ ಸಿ.ಚೆನ್ನಬಸವಣ್ಣ ಅವರು ಹೇಳಿದರು.

         ನಗರದ ಕೊಟ್ಟೂರು ಶಿಕ್ಷಕರ ಶಿಕ್ಷಣ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕವಿಗೋಷ್ಟಿ ಉದ್ಘಾಟಿಸಿ ಅವರು ಮಾತನಾಡಿದರು.

         ಕನ್ನಡ ಕಾವ್ಯ ಪರಂಪರೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಪಂಪ, ರನ್ನ ಸೇರಿದಂತೆ ಅವರ ಸಮಕಾಲೀನರು ಸರ್ವಕಾಲಿಕರು. ಎಲ್ಲಾ ಕವಿಗಳನ್ನು ಒಂದೇ ಮಾನದಂಡದಿಂದ ನೋಡಬಾರದು. ಕುವೆಂಪು ಒಬ್ಬ ದಾರ್ಶನಿಕ, ಪ್ರಗತಿಶೀಲ, ಕ್ರಾಂತಿಕಾರಿ ಬಂಡಾಯ ಕವಿಯಾಗಿದ್ದಾರೆ. ಯಾರೂ ದಲಿತ ಕವಿಯಾಗಲು ಸಾಧ್ಯವಿಲ್ಲ. ದಲಿತ ಪರ ಕಾಳಜಿ ಮಾಡಬಹುದು. ಅವರು ಕಂಡ ನೋವನ್ನು ಅವರೇ ವ್ತಕ್ತಪಡಿಸಿದರೆ ಮಾತ್ರ ಅದು ಸಾಧ್ಯ ಎಂದರು.

        ನಮ್ಮ ಭಾವನೆಗಳನ್ನು ಭಾಷೆಯ ಮೂಲಕ ಅರ್ಥಪೂರ್ಣವಾಗಿ ಅಭಿವ್ಯಕ್ತಪಡಿಸುವ ಮಾಧ್ಯಮವೇ ಕಾವ್ಯ ಪ್ರಕಾರವಾಗಿದೆ ಎಂದರು.
ಕವಿಗಳೆಲ್ಲಾ ಪದ್ಯ ರಚಕರೆ. ಕಾವ್ಯ ಲೋಕದ ಇತಿಹಾಸವನ್ನು ನೋಡಿದಾಗ ನುಡಿದು ಕಟ್ಟುವ ಪ್ರಕ್ರಿಯೆಯೆ ಸಾಹಿತ್ಯವಾಗಿದೆ. ಕವಿಗಳು ಅಭಿವ್ಯಕ್ತಿಗೊಳಿಸುವ ಪದ್ಯಗಳು ಭಾವಪೂರ್ಣ ಮತ್ತು ಅರ್ಥಪೂರ್ಣ ಪದಗಳಿಂದ ಕೂಡಿರುತ್ತದೆ ಎಂದು ಹೇಳಿದರು.

       ಮೋಹನ್ ದಾಸ್ ಕರಮ ಚಂದ ಗಾಂಧಿ ಗಾಂಧೀಜಿಯಾಗಿದ್ದು, ಸತ್ಯಹರಿಶ್ಚಂದ್ರ ನಾಟಕದ ಪ್ರೇರಣೆಯಿಂದ. ಕಾವ್ಯ ಎಂದರೆ ಬಹಿರ್ವಾಣಿಯಲ್ಲ. ವಾಚನ ಮಾಡುವುದು ಕೇವಕ ವಾಣಿ ಆದರೆ, ಕಾವ್ಯ ಅಂತರ್ವಾಣಿ ಮತ್ತು ಆತ್ಮವಾಣಿಯಾಗಿ ಹೊಮ್ಮಬೇಕು. ಇದರಲ್ಲಿ ಕವಿ ತಾನು ಕಂಡಭಾವನೆಗಳನ್ನು ಸತ್ವಯುತವಾಗಿ ಕಾವ್ಯದ ಮೂಲಕ ಹೊರಹಾಕಬೇಕು ಎಂದರು.

        ಸತ್ಯ ಸೌಂದರ್ಯ ಜೀವನ ಮತ್ರು ಆತ್ಮ ಇವು ಕವಿತೆಯ ಪಂಚಮುಖಗಳು ಎಂದು ವಿಶ್ಲೇಷಿಸಲಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, 21 ನೇ ಶತಮಾನದ ಕಾವ್ಯ ಎಲ್ಲಾ ಅಕ್ಷರ ವಂಚಿತ ಸಮುದಾಯಗಳು ಅಕ್ಷರಲೋಕಕ್ಕೆ ಪ್ರವೇಶ ಮಾಡುತ್ತಿರುವ ಸಂದರ್ಭ ಮತ್ತು ಅವರ ಸಾಹಿತ್ಯ ಕೃಷಿಯನ್ನು ನೋಡಬಹುದು. ಕಾವ್ಯ ಪರಂಪರೆ ಸಮೃದ್ಧವಾಗಿದೆ. ಕಾವ್ಯ ಅಂತರಂಗದ ಪಿಸುಮಾತು ಇದಕ್ಕೆ ಎಲ್ಲೆಗಳಿಲ್ಲ ಎಂದರು.ಸಾಹಿತಿ ಎ.ವೃಷಭೇಂದ್ರ ಚಾರ್ ಅಧ್ಯಕ್ಷತೆ ವಹಿಸಿದ್ದರು.

        ಸಾಹಿತಿಗಳಾದ ಕೂಡ್ಲಿಗಿಯ ಜಿ.ಟಿ.ಸಂಗಮ್, ಎನ್.ಎಂ.ವಾಮದೇವಯ್ಯ, ಎ.ಯರ್ರಿಸ್ವಾಮಿ, ಹೊಸಪೇಟೆಯ ದಯಾನಂದ ಕಿನ್ನಾಳ, ಜಿ.ವಿ.ಸುಬ್ಬರಾವ್, ಕುರುಗೋಡಿನ ಎಂ.ಬಿ.ಹುಲಿಗೇಶ್, ಎಂ.ಎಲ್.ಮಂಗಳ, ಹಗರಿಬೊಮ್ಮನಹಳ್ಳಿಯ ನಾಗರಾಜ ತಂಬ್ರಹಳ್ಳಿ, ಶೈಲಾ ಪಿ ಆಡೂರು ಶೆಟ್ಟರ್, ಹಡಗಲಿಯ ಪುಟ್ಟಪ್ಪ ತಂಬೂರಿ, ಹಾಲಪ್ಪ ಚಿಗಟೇರಿ, ಸಿರುಗುಪ್ಪದ ಬಿ.ಮಂಜಣ್ಣ, ಸಂಡೂರಿನ ವೀಣಾ ಮಹೇಶ್, ಕೊಟ್ಟೂರಿನ ಸಿದ್ದು ದೇವರಮನಿ ಕವಿಗೋಷ್ಟಿಯಲ್ಲಿ ಭಾಗವಹಿಸಿ ಕವನ ವಾಚಿಸಿದರು.

       ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಎ.ಸತೀಶ್ ಹಿರೇಮಠ್,ಎನ್.ಡಿ.ವೆಂಕಮ್ಮ, ಚಂದ್ರಶೇಖರ ಆಚಾರ್ಯ ಮತ್ತಿತರರು ಇದ್ದರು. ಕೆ.ದೊಡ್ಡಬಸವ ಗವಾಯಿಗಳಿಂದ ನಡೆದ ಸಂಗೀತ ಕಾರ್ಯಕ್ರಮ ಗಮನಸೆಳೆಯಿತು.ಅಮಾತಿ ಬಸವರಾಜ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link