ತಿಪಟೂರು
ವಿಶೇಷ ವರದಿ: ರಂಗನಾಥ್ ಪಾರ್ಥಸಾರಥಿ
ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯಿಂದ ಈಶಾನ್ಯರಾಜ್ಯಗಳು, ದೆಹಲಿಯಲ್ಲಿ ಒಂದು ರೀತಿಯ ಗಲಭೆ ಪ್ರಾರಂಭವಾದರೆ ಇತ್ತ ನಮ್ಮ ತಿಪಟೂರಿನಲ್ಲಿ ಆಧಾರ್ ಕಾರ್ಡ್‍ಗಾಗಿ ಜನರು ದಂಗೆ ಏಳುವುದೊಂದು ಬಾಕಿ ಇದೆ.ನಗರದ ಕರ್ನಾಟಕ ಬ್ಯಾಂಕ್‍ನ ಕೇಂದ್ರಕಚೇರಿಯಲ್ಲಿ ವಾರಕ್ಕೊಂದು ಬಾರಿ ಅಂದರೆ ದಿನಕ್ಕೆ 30 ಟೋಕನ್‍ನಂತೆ ವಾರದ 6 ದಿನಕ್ಕೆ 180 ಟೋಕನ್ ವಿತರಿಸುತ್ತಾರೆ. ಅದಕ್ಕಾಗಿ ಇಂದು ಹೆಚ್ಚು ಜನರು ಬಂದಿದ್ದರು. ಬ್ಯಾಂಕ್ ಮುಂದೆ ಬೆಳಗ್ಗೆ 5 ಗಂಟೆಗೆ 59 ಜನರಿದ್ದು ಬೆಳಗಾಗುತ್ತ 10 ಗಂಟೆಯ ಹೊತ್ತಿಗೆ ಸುಮಾರು 300 ಜನರು ಬಂದಿದ್ದರಿಂದ ಕೊನೆಗೆ ಬಂದವರಿಗೆ ಟೋಕನ್ ಸಿಕ್ಕು ಮೊದಲೇ ಬಂದವರಿಗೆ ಏನೂ ಸಿಗದೆ ಕೆಲವು ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ರಾಜ್ಯದಲ್ಲಿ ನಡೆಯುತ್ತಿರುವ ರೇಷನ್ ಕಾರ್ಡ್‍ಗಳ ಅಪ್‍ಡೇಟ್‍ಗಾಗಿ ಬೆರಳಚ್ಚು ಬರದೇ ಇರುವ ಆಧಾರ್ ಕಾರ್ಡ್‍ನವರು ಮತ್ತೆ ಬೆರಳಚ್ಚು ನವೀಕರಿಸಲು ಮತ್ತು ಆಧಾರ್ ಕಾರ್ಡ್‍ನಲ್ಲಿ ಇರುವ ತಪ್ಪುಗಳನ್ನು ಸರಿಪಡಿಸಲು ಜನರು ಚಳಿ, ಮಳೆ ಕತ್ತಲನ್ನು ಲೆಕ್ಕಿಸದೆ ನಮ್ಮ ಆಧಾರ್ ಕಾರ್ಡ್ ಸರಿಯಾದರೆ ಸಾಕೆಂದು ತಾಲ್ಲೂಕಿನ ನಾಡಕಚೇರಿಗಳಲ್ಲಿ ಹಾಗೂ ನಗರದ ಕರ್ನಾಟಕ ಬ್ಯಾಂಕ್ ಹತ್ತಿರ ಬೆಳಗಿನ ಜಾವ 3-4 ಗಂಟೆಗೆ ಮಕ್ಕಳು ಮರಿಯನ್ನು ಕರೆದುಕೊಂಡು ಬಂದು ಹೆಣಗಾಡುತ್ತಿರುವ ದೃಶ್ಯ ಎಂತಹವರಿಗೂ ಮರುಕವನ್ನುಟ್ಟಿಸುವಂತಿದೆ.
ಆಧಾರ್‍ನವರೇ ಮಾಡಿದ ತಪ್ಪಿಗೆ ಹೆಣಗುತ್ತಿರುವ ಸಾರ್ವಜನಿಕರು:
ಒಂದು ಬಾರಿ ಆಧಾರ್ ಕಾರ್ಡ್ ಮಾಡಿದವರು ಸರಿಯಾಗಿ ಮಾಡಿದ್ದರೆ ನಮಗೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಆದರೆ ಆಗ ಬೇಕಾಬಿಟ್ಟಿ ಯಾವುದೋ ಮಾಡಿ ಯಾವುದೋ ಮೊಬೈಲ್ ನಂಬರ್, ಈಮೇಲ್ ಐಡಿ, ವಿಳಾಸ, ಜನ್ಮದಿನಾಂಕವನ್ನು ಹೇಗೆ ಬೇಕೋ ಹಾಗೆ ಹಾಕಿ ಮಾಡಿದ್ದರಿಂದ ಇಂದು ಕೋಟ್ಯಂತರ ಜನರು ಹೆಣಗಾಡುತ್ತಿದ್ದಾರೆ.
ಆಧಾರ್‍ಕಾರ್ಡ್ ಇದ್ದು ಮುಖ್ಯವಾಗಿ ಕನ್ನಡದಲ್ಲಿ ಹೆಸರಿಲ್ಲ ಎಂದರೆ ರೇಷನ್‍ಕಾರ್ಡ್‍ನವರು ತೆಗೆದುಕೊಳ್ಳುವುದಿಲ್ಲ ಎಂದು ಚಿಕ್ಕಚಿಕ್ಕ ಮಕ್ಕಳನ್ನು ಹೊತ್ತುಕೊಂಡು ಚಳಿಯಲ್ಲಿ ಕುಳಿತಿರುವ ಹೆಂಗಸರು, ಮುದುಕ ಮುದುಕಿಯರು, ಶಾಲಾ ಕಾಲೇಜನ್ನು ಬಿಟ್ಟುಬಂದ ಮಕ್ಕಳು ಎಲ್ಲರೂ ನೋಡಲು ಸಿಗುತ್ತಾರೆ. ಇವರಲ್ಲಿ ಹೊಸಕಾರ್ಡ್‍ಗಿಂತ ತಿದ್ದುಪಡಿಯೇ ಹೆಚ್ಚಾಗಿದೆ.
ಅನ್ನಭಾಗ್ಯಕ್ಕೂ ಬರೆ :
ಇನ್ನು ರೇಷನ್ ಕಾರ್ಡ್ ಅಪ್‍ಡೇಟ್ ಕಾರ್ಯವು ನಡೆಯುತ್ತಿದ್ದು ಇದರಲ್ಲಿ ತಿಪಟೂರು ತಾಲ್ಲೂಕಿನಲ್ಲೇ ಹೆಚ್ಚೆಂದರೆ ಸುಮಾರು 10,000 ಸಾವಿರ ಮಕ್ಕಳ ಆಧಾರ್ ತೊಂದರೆಯಲ್ಲಿದ್ದು 70,000 ಕ್ವಿಂಟಾಲ್ ತಿಂಗಳೊಂದಕ್ಕೆ ಸಿಗುತ್ತಿಲ್ಲ. ಇದು ಕೇವಲ ತಿಪಟೂರು ತಾಲ್ಲೂಕಿನಲ್ಲಾದರೆ ರಾಜ್ಯದಲ್ಲಿನ ಮಕ್ಕಳ ಗತಿಯೇನು ಮತ್ತು ಇದರಿಂದ ಸರ್ಕಾರಕ್ಕೆ ಎಷ್ಟು ಅಕ್ಕಿ ಉಳಿತಾಯವಾಗುತ್ತಿದೆ. ಇದು ಸರ್ಕಾರಕ್ಕೆ ತಿಳಿದಿಲ್ಲವೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನವ್ಯ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿ
ಈಗಲಾದರು ಜಿಲ್ಲಾಡಳಿತ ಶಾಲಾ ಮಕ್ಕಳಿಗೆ ಶಾಲೆಗಳಿಗೆ, ಇಲ್ಲ ಕ್ಲಸ್ಟರ್ ಮಟ್ಟಕ್ಕೆ ಹೋಗಿ ಆಧಾರ್ ಕಾರ್ಡ್‍ಗಳನ್ನು ನವೀಕರಿಸಿಕೊಟ್ಟರೆ ತುಂಬಾ ಒಳ್ಳೆಯದು. ಇಲ್ಲದಿದ್ದರೆ ಮಕ್ಕಳು ಶಾಲೆಯನ್ನು ಬಿಟ್ಟು ಬೆಳಗಿನ ಜಾವ ಆಧಾರ್‍ಕಾರ್ಡ್‍ಗೆ ಬಂದು ಆರೋಗ್ಯ ಕೈಕೊಟ್ಟು ಶಾಲೆಯನ್ನು ತಪ್ಪಿಸಿಕೊಳ್ಳುತ್ತಾರೆ. ಇದರಿಂದ ವಿದ್ಯಾಭ್ಯಾಸಕ್ಕೂ ಹಿನ್ನಡೆಯಾಗುತ್ತದೆ.
ಮಹೇಶ್ ಹಳೇಪಾಳ್ಯ
ಬೆಳಗಿನ ಜಾವದಿಂದ ರಾತ್ರಿಯಾದರು ಆಧಾರ್ ಕಾರ್ಡ್ ಮಾಡುವವರು ಸರ್ವರ್ ತೊಂದರೆ ಎನ್ನುತ್ತಾರೆ. ಇತ್ತ ನ್ಯಾಯಬೆಲೆ ಅಂಗಡಿಯಲ್ಲಿ ನಿಮ್ಮ ಬೆರಳಚ್ಚು ಸರಿಯಾಗಿ ಬರುತ್ತಿಲ್ಲವೆಂದು ರೇಷನ್ ಕೊಡದೆ ಕಳುಹಿಸುತ್ತಾರೆ. ಹೀಗಾದರೆ ನಾವು ಎಲ್ಲಿಗೆ ಹೋಗಬೇಕು, ಇತ್ತ ಅಕ್ಕಿಗಾಗಿ ನಾವು ಒಂದು ದಿನದ ಕೂಲಿ ಬಿಡಬೇಕಾದ ಪರಿಸ್ಥಿತಿಗೆ ಬಂದಿದೆ.
ಆರತಿ ತಹಸೀಲ್ದಾರ್ ತಿಪಟೂರು
ತಾಲ್ಲೂಕಿನಲ್ಲಿ ಎಲ್ಲಾ ನಾಡಕಚೇರಿಗಳಲ್ಲು ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತಿದೆ, ರೇಷನ್ ಕಾರ್ಡ್ ನವೀಕರಿಸಲು ಮುಂದಿನ ತಿಂಗಳು ಕಾಲಾವಕಾಶವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ