ಬೆಂಗಳೂರು
ಹಣ, ಅಧಿಕಾರದ ಆಮಿಷದ ಮೇಲೆ ರಚನೆಯಾಗಿರುವ ಬಿಜೆಪಿ ಸರ್ಕಾರದ ನಿಜವಾದ ಉದ್ದೇಶವೇನು? ಜನರಿಗೆ ಸ್ಪಂದಿಸುವುದೋ ಅಥವಾ ಕೇವಲ ಅಧಿಕಾರಕ್ಕಾಗಿ ಶಾಸಕರ ಖರೀದಿ ಮಾಡುವುದೋ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯ ಬಳಿಕ ಮತ್ತೆ ಮೈತ್ರಿ ರಚನೆ ಬಗ್ಗೆ ತೀರ್ಮಾನಿಸಬೇಕಾಗಿದ್ದು ಕೆಪಿಸಿಸಿ ಅಲ್ಲ, ಎಲ್ಲಾ ನಿರ್ಣಯಗಳು ಎಐಸಿಸಿ ನಾಯಕರಿಗೆ ಬಿಟ್ಟಿದ್ದು. ಮಧ್ಯಂತರ ಚುನಾವಣೆಗೆ ಹೋಗಲು ಯಾರೂ ಸಿದ್ಧವಿಲ್ಲ. ಮಹಾರಾಷ್ಟ್ರದಂತೆ ಇಲ್ಲೂ ಬೆಳವಣಿಗೆಗಳಾಗಬಹುದು ಎಂದರು.
ರಾಜ್ಯದ ಆಡಳಿತವನ್ನು ತೀರ್ಮಾನಿಸುವ ಗಂಭೀರವಾದ ಪ್ರಾಮುಖ್ಯತೆ ಇರುವ ಚುನಾವಣೆ ಇದು. ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಯಡಿಯೂರಪ್ಪ ಸರ್ಕಾರ ರಚಿಸಿದ್ದಾರೆ. ಅನರ್ಹರ ರಾಜೀನಾಮೆಯಿಂದ ಎದುರಾಗಿರುವ ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಬೇಕು ಎಂದರು.
ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕೋಟಿ ತೆರಿಗೆ ಸಂಗ್ರಹವಾಗಬೇಕಿತ್ತು. ಆದರೆ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಜಿಡಿಪಿ ಕುಸಿದಿದ್ದು ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ದುರಾಡಳಿತ ಇರುವ ಅಸಮರ್ಥ ಸರ್ಕಾರ ಈ ರಾಜ್ಯಕ್ಕೆ ಬೇಕೆ? ಎಂದು ಪ್ರಶ್ನಿಸಿದರು.
ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಾಲಮನ್ನಾ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದ ಅವರು, ಬಿಜೆಪಿಯ ಅಭ್ಯರ್ಥಿಗಳು ಪಕ್ಷಾಂತರಿಗಳು. ಪಕ್ಷಾಂತರಿಗಳಿಗೆ ಜನರು ಬೆಂಬಲ ನೀಡಬಾರದು. ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪುರಸ್ಕರಿಸಬೇಕು ಎಂದು ಪರಮೇಶ್ವರ್ ಮನವಿ ಮಾಡಿದರು.
ಮೈತ್ರಿ ಬಗ್ಗೆ ಹೈಕಮಾಂಡ್ ತೀರ್ಮಾನ
ಮಧ್ಯಂತರ ಚುನಾವಣೆಗೆ ಹೋಗಲು ಯಾರೂ ಸಿದ್ಧ ಇಲ್ಲ. ಉಪ ಚುನಾವಣೆಯ ಫಲಿತಾಂಶ ಬಂದ ಬಳಿಕ ಬಿಜೆಪಿಗೆ ಕಡಿಮೆ ಸಂಖ್ಯೆ ಬಂದರೆ ಸರಕಾರ ಬಿದ್ದು ಹೋಗಲಿದೆ. ನಂತರ ಸರಕಾರ ರಚನೆ ಬೇಕು ಬೇಡ ಎನ್ನುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಪರಮೇಶ್ವರ್ ಹೇಳಿದರು.
ಸಿದ್ದರಾಮಯ್ಯ ಏಕಾಂಗಿಯಲ್ಲ
ಕಳೆದ ಚುನಾವಣೆಯಲ್ಲಿ ಕೆಪಿಸಿಸಿಯ ಎಲ್ಲಾ ನಾಯಕರು ಒಗ್ಗಟ್ಟಾಗಿ ಹೋಗಿದ್ದೆವು. ನಾಯಕತ್ವದ ತೀರ್ಮಾನದ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆಯಿಲ್ಲ. ಒಂದೊಂದು ವಿಧಾನಸಭೆಗೆ ಒಬ್ಬೊಬ್ಬರಿಗೆ ಜವಾಬ್ದಾರಿ ನೀಡಿದ್ದಾರೆ. ಸಿದ್ದರಾಮಯ್ಯ ಎಲ್ಲರ ಜೊತೆಗೆ ಇರುವವರು. ಅವರನ್ನು ಏಕಾಂಗಿಯಾಗಲು ನಾವು ಬಿಡುವುದಿಲ್ಲ. ಈ ಚುನಾವಣೆಯಲ್ಲಿ ಕೆಪಿಸಿಸಿ ಬೇರೆ ಯುದ್ದೇ ತಂತ್ರರೂಪಿಸಿದೆ. ಇದು ಯಾರಿಗೂ ಗೊತ್ತಾಗುವುದಿಲ್ಲ. ರಣತಂತ್ರಗಳನ್ನು ಹೇಳಲಾಗುವುದಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ