ಬೆಂಗಳೂರು
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಕರ್ನಾಟಕದಲ್ಲಿ ಐಟಿ ಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸುವ, ಈ ವಲಯದ ಸರ್ವಾಂಗೀಣ ಬೆಳವಣಿಗೆ ದೃಷ್ಟಿಯಿಂದ ಕರ್ನಾಟಕ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ ಮತ್ತು ವಿದ್ಯುನ್ಮಾನ ವ್ಯವಸ್ಥೆ, ವಿನ್ಯಾಸ, ಉತ್ಪಾದನೆ ಕುರಿತ ನೂತನ ನೀತಿಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ರಾಜಧಾನಿ ಬೆಂಗಳೂರು ಹೊರಭಾಗದಲ್ಲಿ ಐಟಿ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ತರುವ ಉದ್ದೇಶ ಹೊಂದಿರುವ ಐಟಿ ನೀತಿಯನ್ನು ಜಾರಿಗೆ ತರುತ್ತಿದ್ದು, ಇದು 2020 ರಿಂದ 25ರ ವರೆಗೆ ಜಾರಿಯಲ್ಲಿರಲಿದೆ. ಮುಂದಿನ ಐದು ವರ್ಷಗಳಲ್ಲಿ ಗರಿಷ್ಠ 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ ನೀಡಿದರು.
ಬೆಂಗಳೂರು ಹೊರ ಭಾಗದಲ್ಲಿ ಐಟಿಯಲ್ಲಿ ಹೂಡಿಕೆ ಮಾಡುವವರಿಗೆ ಸಬ್ಸಿಡಿ, ಪೇಟೆಂಟ್ ಹಕ್ಕಿನ ರಕ್ಷಣೆ, ಹೂಡಿಕೆಗೆ ವಿಪುಲ ಅವಕಾಶ ನೀಡಲಾಗುವುದು. ವರ್ಕ್ ಫ್ರಮ್ ಪರಿಕಲ್ಪನೆ ಹೆಚ್ಚಾಗುತ್ತಿದ್ದು, ಇಂತಹ ಐಟಿ ವಲಯಕ್ಕೆ 5 ಜಿ ಇಂಟರ್ ನೆಟ್ ಸೇರಿ ಹತ್ತು ಹಲವು ಸೌಲಭ್ಯ ಒದಗಿಸಲಾಗುವುದು ಎಂದರು.
ಹಿಂದುಳಿದ ಪ್ರದೇಶಗಳಲ್ಲಿ ಐಟಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ ಶೇ 100 ರಷ್ಟು ನೀಡಲಾಗುವುದು. ನೋಂದಣಿಯಲ್ಲಿ ರಿಯಾಯಿತಿ, ವಿದ್ಯುತ್ ಅನ್ನು ಕೈಗಾರಿಕೆ ಬದಲು ವಾಣಿಜ್ಯ ದರದಲ್ಲಿ ಒಗಸಲಾಗುವ, ಭೂಮಿ ಖರೀದಿ, ನೀರು ಪೂರೈಕೆಯಲ್ಲೂ ಹೆಚ್ಚಿನ ರಿಯಾಯಿತಿಗಳನ್ನು ಒದಗಿಸಲಾಗುವುದು. ಕೌಶಲ್ಯ ಅಭಿವೃದ್ಧಿಗೂ ಸಹ ಸೂಕ್ತ ಒತ್ತು ನೀಡಲಾಗುವುದು ಎಂದರು.
ಬೆಂಗಳೂರು ಹೊರ ವಲಯದಲ್ಲಿ ಶೇ 75 ರಷ್ಟು ಸ್ಟಾಂಪ್ ಡ್ಯೂಟಿಯಲ್ಲಿ ವಿನಾಯಿತಿ ಇದ್ದು, ಇದನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ 100 ರಷ್ಟು ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 25 ಲಕ್ಷ ಹಾಗೂ ಗರಿಷ್ಠ 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕೇಂದ್ರ ಪುರಸ್ಕೃತ ಯೋಜನೆಯಡಿ ಹಾವೇರಿ ಮತ್ತು ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಿದ್ದು, ಹಾವೇರಿ ವೈದ್ಯಕೀಯ ಕಾಲೇಜಿಗೆ 327.46 ಕೋಟಿ ಮತ್ತು ಯಾದಗಿರಿ ಕಾಲೇಜಿಗೆ 309 ಕೋಟಿ ರೂ ವೆಚ್ಚ ಮಾಡಲಾಗುವುದು ಎಂದು ಜೆ.ಸಿ.ಮಾಧು ಸ್ವಾಮಿ ಹೇಳಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮ ಪಂಚಾಯತ್ ಅನ್ನು ಹೊಸ ತಾಲ್ಲೂಕು ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ಪಂಚಾಯತ್ ಅನ್ನು ಪುರಸಭೆಯಾಗಿ, ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಲೋಕಾಪುರ ಗ್ರಾಮ ಪಂಚಾಯತ್ ಅನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯದಲ್ಲಿ ಅಂತರ್ಜಲ ಹೆಚ್ಚಿಸುವ ವಿಶ್ವಬ್ಯಾಂಕ್ ನೆರವಿನ ವಾಟರ್ ಶೆಡ್ ಕಾರ್ಯಕ್ರಮವನ್ನು 20 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. 10 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಶ್ವಬ್ಯಾಂಕ್ ನೆರವಿನ ಯೋಜನೆ ಜಾರಿಗೊಳಿಸುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರ 180 ಕೋಟಿ ರೂ, ವಿಶ್ವಬ್ಯಾಂಕ್ 420 ಕೋಟಿ ರೂ ಒದಗಿಸಲಿದೆ ಎಂದರು.
ಕೃಷಿ ಬೆಲೆ ಆಯೋಗವನ್ನು ಮುಂದುವರೆಸುವ, ಕರ್ನಾಟಕ ಲೋಕಾಯುಕ್ತರಿಗೆ ಅಪರ ನಿಬಂಧಕರನ್ನು ನೇಮಿಸುವ, ಘನ ತ್ಯಾಜ್ಯ ಸಾಗಾಣಿಕೆ ವಿಫಲವಾದರೆ ದಂಡ ವಿಧಿಸುವ ಕಾನೂನು ಜಾರಿ ಮಾಡಲಾಗುತ್ತಿದೆ. ಇಂತಹ ಕರ್ವವ್ಯ ಲೋಪಕ್ಕೆ 1 ಸಾವಿರದಿಂದ 7 ಲಕ್ಷದ ವರೆಗೆ ದಂಡ ವಿಧಿಸಲು ಅವಕಾಶವಿದೆ. ಇದಕ್ಕಾಗಿ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. ಜಿಎಸ್ ಟಿ ಮತ್ತು ವೈದ್ಯಕೀಯ ಸುಗ್ರಿವಾಜ್ಞೆಯಾಗಿದ್ದು, ಇವುಗಳ ಸ್ಥಾನದಲ್ಲಿ ಔಪಚಾರಿಕವಾಗಿ ಮುಂದಿನ ಅಧಿವೇಶನದಲ್ಲಿ ವಿಧೇಯಕವಾಗಿ ಮಂಡಿಸಲಾಗುವುದು ಎಂದರು.
ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ನ್ಯಾಯಾಲಯ ಕಟ್ಟಡ ನಿರ್ಮಾಣದ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದ್ದು, ಮಂಡ್ಯ ನಗರದಲ್ಲಿ ವಿವೇಕಾನಂದ ಬಡಾವಣೆಗೆ ನೀರು ಪೂರೈಸುವ 16 ಕೋಟಿ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಬೇಡ್ತಿ ನದಿಯಿಂದ ಆಸುಪಾಸಿನ ಕೆರೆಗಳಿಗೆ ನೀರು ತುಂಬಿಸುವ 22.5 ಕೋಟಿ ರೂ ಮೊತ್ತದ ಪ್ರಸ್ತಾವನೆಗೆ ಸಂಪುಟ ಆಡಳಿತಾತ್ಮಕ ಅನುಮತಿ ನೀಡಿದೆ.
108 ಆರೋಗ್ಯ ಸೇವೆಯನ್ನು ಅತ್ಯಂತ ಪರಿಣಾಮಕಾರಿಯಾಗಿಸಲು ತರಲು ತೀರ್ಮಾನಿಸಲಾಗಿದ್ದು, ಆಂಬ್ಯುಲೆನ್ಸ್ ಸೇವೆಯನ್ನು ಉತ್ತಮಗೊಳಿಸಲು ಇದರಿಂದ ಸಹಕಾರಿಯಾಗಲಿದೆ. ಸಾಂಕ್ರಾಮಿಕ ರೋಗಗಳ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿದರೆ ಎರಡು ಪಟ್ಟು ದಂಡ ವಿಧಿಸುವ ವಿಧೇಯಕಕ್ಕೆ ಸಂಪುಟ ಅನುಮೋದನೆ ನೀಡಲಾಗಿದೆ. ಮುಂದಿನ ಅಧಿವೇಶನದಲ್ಲಿ ಈ ವಿಧೆಯಕ ಮಂಡನೆಯಾಗಲಿದ್ದು, ದಂಡಮೊತ್ತವನ್ನು ನ್ಯಾಯಾಲಯ ನಿಗದಿ ಮಾಡಲಿದೆ ಎಂದು ಸಚಿವ ಜೆ.ಸಿ.ಮಾಧು ಸ್ವಾಮಿ ತಿಳಿಸಿದರು.
ಬೆಂಗಳೂರಿನ ಸೂರ್ಯ ನಗರದಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವ ಭೂ ಮಾಲೀಕರಿಗೆ 50:50 ಅನುಪಾತದಲ್ಲಿ ನಿವೇಶನ ಹಂಚಿಕೆಗೆ ಅನುಮೋದನೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದಲ್ಲಿ ಸರ್ವ ಋತು ಜಲಪಾತ ನಿರ್ಮಿಸಲು ಬಿಎಸ್.ಆರ್ ವೆಂಚರ್ಸ್ ಗೆ ಸರ್ಕಾರ ನೀಡಿರುವ ಅನುಮತಿಯನ್ನು ರದ್ದುಗೊಳಿಸಿ ಹೊಸದಾಗಿ ಕರ್ನಾಟಕ ವಿದ್ಯುತ್ ನಿಗಮದಿಂದ ಜೋಗ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರ 120 ಕೋಟಿ ರೂ ಒದಗಿಸಲಿದೆ ಎಂದು ಸಚಿವ ಜೆ.ಸಿ. ಮಾಧು ಸ್ವಾಮಿ ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ