ತುಮಕೂರು
“ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ)ದಿಂದ ಅನುಮೋದನೆಯಾಗಿರುವ ಕಟ್ಟಡಗಳಿಗೆ ಮಾತ್ರ ಕಟ್ಟಡ ಪರವಾನಗಿ ನೀಡುವುದು“ ಎಂಬ ತೀರ್ಮಾನವನ್ನು ತುಮಕೂರು ಮಹಾನಗರ ಪಾಲಿಕೆಯ “ಪಟ್ಟಣ ಯೋಜನಾ ಮತ್ತು ಸುಧಾರಣೆ ಸ್ಥಾಯಿ ಸಮಿತಿ”ಯು ಕೈಗೊಂಡಿರುವ ಸಂಗತಿ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳ ಆದರ್ಶ್ (ಬಿಜೆಪಿ) ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ ಮಾಹೆಯಲ್ಲಿ ನಡೆದಿರುವ ಸಭೆಯಲ್ಲೇ ಇಂತಹುದೊಂದು ತೀರ್ಮಾನ ಕೈಗೊಂಡಿದ್ದು, ಸಮಿತಿಯ ನಿರ್ಣಯಗಳಿಗೆ ಮಾರ್ಚ್ ತಿಂಗಳಿನಲ್ಲಿ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆತಿದೆ. ಸದರಿ ಸ್ಥಾಯಿ ಸಮಿತಿ ಸಭೆಯಲ್ಲಿ ಮೇಯರ್ ಲಲಿತಾ ರವೀಶ್, ಉಪಮೇಯರ್ ಬಿ.ಎಸ್.ರೂಪಶ್ರೀ ಅವರು ಸಹ ಭಾಗವಹಿಸಿದ್ದರು.
“ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ)ದಿಂದ ಅನುಮೋದನೆಯಾಗಿರುವ ಕಟ್ಟಡಗಳಿಗೆ ಮಾತ್ರ ಕಟ್ಟಡ ಪರವಾನಗಿ ನೀಡುವುದು ಹಾಗೂ ನಿರ್ಮಾಣವಾಗುವ ಕಟ್ಟಡಗಳನ್ನು ಹಂತ-ಹಂತವಾಗಿ ಪರಿಶೀಲಿಸಿ ನೀಲಿ ನಕ್ಷೆ ಪ್ರಕಾರ ಕಟ್ಟಡದ ಮಾದರಿಯು ಸರಿಯಾಗಿದ್ದಲ್ಲಿ ಅಂತಹ ಕಟ್ಟಡಗಳಿಗೆ ಮಾತ್ರ ಕಂಪ್ಲೀಷನ್ ಸರ್ಟಿಫಿಕೇಟ್ ಮತ್ತು ವಿದ್ಯುತ್ ನಿರಾಕ್ಷೇಪಣಾ ಪತ್ರ ನೀಡಲು ಕ್ರಮವಹಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು” -ಇದು ಸದರಿ ತೀರ್ಮಾನದ ಪೂರ್ಣ ಪಾಠ.ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿರುವ ಈ ತೀರ್ಮಾನವು ಇದೀಗ ಪಾಲಿಕೆ ಕಚೇರಿಯಲ್ಲಿ ಜನಪ್ರತಿನಿಧಿಗಳ ಪಾಲಿಗೆ “ಬಿಸಿ ತುಪ್ಪ”ದಂತಾಗಿದ್ದು, ಜನಪ್ರತಿನಿಧಿಗಳು ಚಡಪಡಿಸುವಂತೆ ಮಾಡಿದೆ.
ಸ್ಥಾಯಿ ಸಮಿತಿ ಸಭೆಯ ನಡವಳಿಗೆ (ತೀರ್ಮಾನಗಳಿಗೆ) ಆನಂತರ ನಡೆದಿರುವ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರೆತಿದೆ. ಅಂದರೆ ಸಾಮಾನ್ಯ ಸಭೆ ಇದನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದೆ. ವಿಚಿತ್ರವೆಂದರೆ ಅದೇ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರುಗಳು ವಿಷಯ ಮಂಡಿಸಿ ಹಾಗೂ ಚರ್ಚೆಯಲ್ಲಿ ಭಾಗವಹಿಸಿ “ನಗರದ ಅನೇಕ ಬಡಾವಣೆಗಳಲ್ಲಿ ಈ ಹಿಂದೆ ಮನೆ ನಿರ್ಮಿಸಿದ್ದು ಇದೀಗ ಅವುಗಳನ್ನು ಕೆಡವಿ ಹೊಸದಾಗಿ ಮನೆ ಕಟ್ಟಲು ಪಾಲಿಕೆಯಲ್ಲಿ ಪರವಾನಗಿ ಸಿಗುತ್ತಿಲ್ಲ. ಟೂಡಾದಿಂದ ಅನುಮೋದನೆ ಕೇಳಲಾಗುತ್ತಿದೆ
ಆದರೆ ಸದರಿ ಬಡಾವಣೆಗಳು ಹಳೆಯದಾದ ಕಾರಣ ಹಾಗೂ ಗ್ರಾಮೀಣ ಭಾಗಗಳೂ ಇರುವ ಕಾರಣ ಟೂಡಾದಿಂದ ಅನುಮೋದನೆ ಸಿಗುವುದೇ ಇಲ್ಲ. ಪಾಲಿಕೆ ಪರವಾನಗಿ ಇಲ್ಲದಿದ್ದರೆ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕಗಳೂ ಸಿಗುವುದಿಲ್ಲ. ಆಗ ಅನಧಿಕೃತವಾಗಿ ಕಟ್ಟಡಗಳು ತಲೆಯೆತ್ತುತ್ತವೆ. ಅಕ್ರಮ ನಲ್ಲಿ/ ಯುಜಿಡಿ ಸಂಪರ್ಕ ಉಂಟಾಗುತ್ತದೆ. ಇದರಿಂದ ಪಾಲಿಕೆಗೆ ತೆರಿಗೆ ದೊರಕದೆ ಪಾಲಿಕೆಯ ಸಂಪನ್ಮೂಲ ಕ್ರೋಡೀಕರಣಕ್ಕೂ ಅಡ್ಡಿಯಾಗುತ್ತದೆ. ಜೊತೆಗೆ ಸಾರ್ವಜನಿಕರಿಗೂ ತೊಂದರೆ ಆಗುತ್ತಿದೆ” ಎಂದು ಸಭೆಯಲ್ಲಿ ಅಲವತ್ತುಕೊಂಡಿದ್ದರು. ಇಂತಹ ಎಲ್ಲ ವಿಷಯಗಳಿಗೂ “ನಿಯಮಾನುಸಾರ ಪರಿಶೀಲಿಸಿ ಕ್ರಮ ಜರುಗಿಸುವುದಾಗಿ” ಆಯುಕ್ತರು ಭರವಸೆ ನೀಡಿದ್ದರು. ಇವೆಲ್ಲ ಬೆಳವಣಿಗೆಗಳು ಇದೀಗ ಪಾಲಿಕೆಯಲ್ಲಿ ಬಹುಮುಖ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಬಿ.ಬಿ.ಎಂ.ಪಿ. ಮಾದರಿ
ಇದಲ್ಲದೆ ಕಟ್ಟಡ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ.) ಮಾದರಿ ಅನುಸರಿಸುವ ಬಗ್ಗೆಯೂ ಇದೇ ಸಮಿತಿಯು ತೀರ್ಮಾನಿಸಿದೆ. ಪಾಲಿಕೆಯ ನಗರ ಯೋಜನಾಧಿಕಾರಿ ಚನ್ನಬಸಪ್ಪ ಅವರು ಬಿ.ಬಿ.ಎಂ.ಪಿ. ಮಾದರಿ ಕಟ್ಟಡ ಮಾದರಿ ಮತ್ತು ವಿಧಿ ಉಪವಿಧಿಗಳನ್ನು ಅನುಷ್ಠಾನಗೊಳಿಸುವಂತೆಯೂ, ಇದರಲ್ಲಿ ಮಾಲೀಕರ ಮತ್ತು ಅಧಿಕಾರಿಗಳ ಜವಾಬ್ದಾರಿ ಅಡಕವಾಗಿರುತ್ತದೆಂದೂ, ಕೆಲವು ತಿದ್ದುಪಡಿ ಮೂಲಕ ಪಾಲಿಕೆಯಲ್ಲಿ ಈ ಮಾದರಿಯನ್ನು ಅನುಷ್ಠಾನಗೊಳಿಸಬಹುದೆಂದು ಹೇಳಿದರು. ಇದಕ್ಕೆ ಸಭೆಯು ಒಪ್ಪಿ ಅನುಮೋದನೆ ನೀಡಿದೆ. ಆದರೆ “ಬಿ.ಬಿ.ಎಂ.ಪಿ. ಮಾದರಿ ಎಂದರೇನು?” ಎಂಬುದೇ ಪಾಲಿಕೆಯಲ್ಲಿ ಇನ್ನೂ ಯಾರಿಗೂ ಅರ್ಥವಾಗುತ್ತಿಲ್ಲವೆನ್ನಲಾಗಿದೆ.