ಕೊಟ್ಟೂರು
ಬಿಜೆಪಿಯ ಕಟ್ಟಾ ಅಭಿಮಾನಿ ಹನಿಸಿ ಗ್ರಾಮದ ಎಸ್.ರಾಜಪ್ಪ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಹುದ್ದೆ ಅಲಂಕರಿಸಿದ್ದಕ್ಕೆ ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿಗೆ ದೀಡ್ ನಮಸ್ಕಾರ ಹಾಕುವ ಮೂಲಕ ವಿಶಿಷ್ಟವಾಗಿ ಗುರುವಾರ ಭಕ್ತಿ ಪೂರ್ವಕ ಹರಿಕೆ ತೀರಿಸಿದರು.
ಗುರುವಾರ ಬೆಳಗಿನ ಜಾವ ಹನಿಸಿ ಗ್ರಾಮದ ಪರಮೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಎಸ್. ರಾಜಪ್ಪ, ತಮ್ಮ ಕುಟುಂಬದ ಸದಸ್ಯರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ 25 ಕಿ.ಮೀ. ದೀಟ್ ನಮಸ್ಕಾರ ಹಾಕುತ್ತ ಕೊಟ್ಟೂರುಗೆ ಮದ್ಯಾಹ್ನ ಒಂದೂವರೆಗೆ ಆಗಮಿಸಿದರು.
ಹನಸಿ ಗ್ರಾಮದಿಂದ ಕಲ್ಲಹಳ್ಳಿ, ಕಲ್ಲಹಳ್ಳಿ ತಾಂಡ, ಬೆಣಕಲ್ಲು, ಹ್ಯಾಳ್ಯಾ, ದೂಪದಹಳ್ಳಿ ಮಾರ್ಗವಾಗಿ ಆಗಮಿಸುವಾಗ ಗ್ರಾಮಸ್ಥರು ಆರತಿ ಬೆಳಗಿ ಪ್ರಧಾನ ಮಂತ್ರಿ ಮೋದಿಗೆ ಜೈಕಾರ ಹಾಕುತ್ತ ಸ್ವಾಗತಿಸಿದರು. ಇವರೊಂದಿಗೆ ಸುಮಾರು ನೂರು ಜನರು ಪಾದಯಾತ್ರೆ ಆಗಮಿಸಿದ್ದರು. ಅಲ್ಲದೆ ಸುಮಾರು 20ಕ್ಕೂ ಹೆಚ್ಚು ಬೈಕ್ಗಳು, ಮೂರು ಆಟೋ, ಒಂದು ಟ್ಯಾಕ್ಟರ್ ಬಂದಿದ್ದವು.
ಕೊಟ್ಟೂರು ಸಮೀಪಿಸುತ್ತಿದ್ದಂತೆ ಬಿಜೆಪಿಯ ಹಿರಿಯ ಮುಖಂಡ ಶೆಟ್ಟಿ ತಿಂದಪ್ಪ, ಶಿರಬಿ ಕೊಟ್ರೇಶ ಎಸ್. ರಾಜಪ್ಪಗೆ ಹಾರ ಹಾಕಿ ಸ್ವಾಗತಿಸಿದರು. ಕೊಟ್ಟೂರು ಬರುತ್ತಿದ್ದಂತೆಯೇ ಬಿಜೆಪಿಯ ಪಟ್ಟಣ ಪಂಚಾಯ್ತಿ ಸದಸ್ಯರಾದ ಜಿ.ಸಿದ್ದಯ್ಯ, ವಿನಯ ಕುಮಾರ್, ಹಾಗೂ ಏಲ್ಟೆಲ್ ಚಂದ್ರು, ನಾಗರಾಜ್, ಮಂಜುನಾಥ್, ಅರವಿಂದ ಬಸಾಪುರ, ದೀಡ್ ನಮಸ್ಕಾರ ಹಾಕುವಾಗ ಸಾಥ್ ನೀಡಿದರು. ಕೊಟ್ಟೂರೇಶ್ವರ ಸ್ವಾಮಿಗೆ ನಮಿಸುವ ಮೂಲಕ ದೀಡ್ ನಮಸ್ಕಾರಕ್ಕೆ ಮುಕ್ತಾಯಗೊಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ಮುಂಚೆ 5 ತಿಂಗಳ ಮೊದಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾದರೆ ನಮ್ಮ ಮನೆ ದೇವರು ಕೊಟ್ಟೂರೇಶ್ವರ ಸ್ವಾಮಿಗೆ ನಮ್ಮೂರಿಂದ ದೀಡ್ ನಮಸ್ಕಾರ ಹಾಕುವುದಾಗಿ ಹರಕೆ ಮಾಡಿಕೊಂಡಿದ್ದೆ, ಇಂದು ನರೇಂದ್ರ ಮೋದಿ ಪ್ರದಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ನನ್ನ ಹರಕೆಯೂ ತೀರಿತು ಎಂದು ಹರ್ಷ ವ್ಯಕ್ತಪಡಿಸಿದರು.
ನಮ್ಮೂರ ಕೆರೆಗೆ ನೀರು ತುಂಬ ಬೇಕು. ಇದರಿಂದ ಗ್ರಾಮಸ್ಥರೆಲ್ಲರಿಗೂ ಅನುಕೂಲವಾಗಬೇಕು. ಇದು ಪ್ರಧಾನಿ ಮೋದಿ ಹಾಗೂ ಬಿಜೆಪಿ ಲೋಕಸಭಾ ಸದಸ್ಯ ವೈ. ದೇವೇಂದ್ರಪ್ಪ ಅವರಲ್ಲಿ ಮೊದಲ ಬೇಡಿಕೆ ಎಂದು ತನ್ನ ಮನದಿಂಗಿತ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








