ಚಿತ್ರದುರ್ಗ:
ಡ್ರಗ್ಸ್ ಮಾಫಿಯಾ ಭಾರೀ ಸದ್ದು ಮಾಡುತ್ತಿದ್ದು, ರಾಜ್ಯಾದ್ಯಂತ ಸಿಸಿಬಿ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ದಂಧೆಯನ್ನು ಬೇರುಸಮೇತ ಕಿತ್ತುಹಾಕಲು ಸಜ್ಜಾಗಿರುವ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಒಂದೇ ಗ್ರಾಮದಲ್ಲಿ ಬರೋಬ್ಬರಿ ನಾಲ್ಕೂವರೆ ಎಕರೆ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ.
ಮೊಳಕಾಲ್ಮೂರು ತಾಲೂಕಿನ ವಡೇರಹಳ್ಳಿ ಗ್ರಾಮದ ಸಹೋದರ ರೈತರಿಗೆ ಸೇರಿದ ನಾಲ್ಕೂವರೆ ಎಕರೆ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯಲಾಗಿದೆ. ಖಚಿತ ಮಾಹಿತಿ ಆಧರಿಸಿ ರಾಂಪುರ ಠಾಣೆಯ ಪಿಎಸ್‍ಐ ಗುಡ್ಡಪ್ಪ ನೇತೃತ್ವದ ತಂಡವು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದಾಗ ಕೋಟ್ಯಂತರ ಮೌಲ್ಯದ ಗಾಂಜಾ ಬೆಳೆ ಪತ್ತೆಯಾಗಿದೆ.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಅಂತಾಪುರ ಗ್ರಾಮದ ವ್ಯಕ್ತಿಯೊಬ್ಬ ಮೊಳಕಾಲ್ಮೂರು ತಾಲೂಕಿನ ವಡೇರಹಳ್ಳಿಯಲ್ಲಿ ಜಮೀನನ್ನು ಗುತ್ತಿಗೆ ಪಡೆದು ಕದ್ದುಮುಚ್ಚಿ ಗಾಂಜಾ ಬೆಳೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪೊಲೀಸರು ಜಮೀನು ಮಾಲೀಕರು ಹಾಗೂ ಗಾಂಜಾ ಸೊಪ್ಪು ಮಾರಾಟದ ಬ್ರೋಕರ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ರಾಜ್ಯದ ವಿವಿಧೆಡೆ ಗಾಂಜಾ ಪೆಡ್ಲರ್‍ಗಳು, ಗಾಂಜಾ ಬೆಳೆಗಾರರು ಪೊಲೀಸರ ಬಲೆಗೆ ಬೀಳುತ್ತಿರುವ ಸುದ್ದಿ ನಿತ್ಯ ಮೂರ್ನಾಲ್ಕು ಬರುತ್ತಲೇ ಇವೆ. ಇದೀಗ ರೈತರೊಬ್ಬರ ಜಮೀನನ್ನು ಗುತ್ತಿಗೆ ಪಡೆದು ಗಾಂಜಾ ಬೆಳೆದಿರುವ ಪ್ರಕರಣ ರಾಜ್ಯದ ಜನತೆಯನ್ನೇ ಬೆಚ್ಚಿಬೀಳಿಸಿದೆ. ಬಗೆದಷ್ಟು ಆಳ ಎಂಬಂತಿದೆ ಈ ಡ್ರಗ್ಸ್ ಜಾಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
