ಬಳ್ಳಾರಿ
ಮಡಿವಾಳ ಮಾಚಿದೇವರ ಜಯಂತಿಯನ್ನು ಮುಂದಿನ ತಿಂಗಳು ಫೆ.1 ರಂದು ಬೆಳಗ್ಗೆ 11:30ಕ್ಕೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಮಡಿವಾಳ ಮಾಚಿದೇವರ ಜಯಂತಿಯ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಯಂತಿ ಆಚರಣೆಯ ಅಂಗವಾಗಿ ಅಂದು ವಿವಿಧ ಕಲಾ ತಂಡಗಳೊಂದಿಗೆ ಮಡಿವಾಳ ಮಾಚಿದೇವರವರ ಭಾವಚಿತ್ರದ ಭವ್ಯ ಮೆರವಣಿಗೆಯು ಬೆಳಗ್ಗೆ 9.30 ಗಂಟೆಗೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಿಂದ ಪ್ರಾರಂಭವಾಗಿ, ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಜೈನ್ ಮಾರ್ಕೆಟ್, ಹೆಚ್.ಆರ್.ಜಿ ಗವಿಯಪ್ಪ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ತಲುಪಲಿದೆ. ವೇದಿಕೆ ಕಾರ್ಯಕ್ರಮ ಮಧ್ಯಾಹ್ನ 11:30 ಕ್ಕೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಪ್ರಾರಂಭವಾಗಲಿದೆ. ಮಡಿವಾಳ ಮಾಚಿದೇವರ ಜೀವನ ಮತ್ತು ಸಾಧನೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗುತ್ತದೆ.
ಮೆರವಣಿಗೆಯಲ್ಲಿ ಆಕರ್ಷಕ ಕಲಾ ತಂಡಗಳ ನಿಯೋಜನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಸಂಘ ಸಮಾಜದ ಪದಾಧಿಕಾರಿಗಳು, ಸಮಾಜದ ಇನ್ನಿತರ ಮುಖಂಡರು, ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
