ಪ್ರಾಥಮಿಕ ಶಾಲಾ ಶಿಕ್ಷಕರ ದಿಢೀರ್ ಪ್ರತಿಭಟನೆ..!!

ಬ್ಯಾಡಗಿ:

     ಪ್ರಾಥಮಿಕ (ಪದವೀಧರ) ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸದಿರುವ ಸರ್ಕಾರದ ನಿರ್ಧಾರ ವನ್ನು ವಿರೋಧಿಸಿ ತಾಲೂಕಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ಕೈಗೆ ಕಪ್ಪುಪಟ್ಟಿ ಧರಿಸಿದ್ದಲ್ಲದೇ 6 ಮತ್ತು 7 ನೇ ತರಗತಿ ಪಾಠ ಪ್ರವಚನ ಬಹಿಷ್ಕರಿಸಿ ಹಠಾತ್ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

     ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕರೆಯ ಮೇರೆಗೆ ಶಿಕ್ಷಕರು ದಿಡೀರ್ ನಿರ್ಧಾರ ಕೈಗೊಂಡಿದ್ದು ಅನುಭವ ಮತ್ತು ಅರ್ಹತೆಯನ್ನು ಪರಿಗಣಿಸಿ ವೇತನ ಪರಿಷ್ಕರಣೆ ಮತ್ತು ಪದೋನ್ನತಿ ನೀಡಲು ಹಿಂದೇಟು ಹಾಕುತ್ತಿರುವುದು ಇಂದಿನ ಹಠಾತ್ ಪ್ರತಿಭಟನೆಗೆ ಕಾರಣವೆನ್ನಲಾಗುತ್ತಿದೆ, ಶಿಕ್ಷಕರ ಈ ನಿರ್ಧಾರದಿಂದ ತಾಲೂಕಿನ ಯಾವುದೇ ಪ್ರಾಥಮಿಕ ಶಾಲೆಗಳಲ್ಲಿ (ಇಂಗ್ಲೀಷ್, ಸಮಾಜ, ವಿಜ್ಞಾನ, ಗಣಿತ) ಇನ್ನಿತರ ಪಾಠಗಳು ನಡೆಯದೇ ಮಕ್ಕಳು ಶಾಲೆಯಿಂದ ಹೊರಗುಳಿದರು.

      ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಮಹೇಶ್ ನಾಯಕ್, ಪ್ರಾಥಮಿಕ ಶಾಲೆಯಲ್ಲಿ ನೇಮಕವಾಗಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ, ರಾಜ್ಯದ ಇಂತಹ ಸುಮಾರು 80 ಸಾವಿರಕ್ಕೂ ಅಧಿಕ ಶಿಕ್ಷಕರು ಪದವೀಧರರಾಗಿದ್ದೇವೆ, ಇಲ್ಲಿಯವರೆಗೂ ನಮ್ಮ ಅನುಭವ ಪಡೆದುಕೊಂಡಿರುವ ಸರ್ಕಾರ 6 ಮತ್ತು 7 ತರಗತಿಗಳಿಗೂ ಪಾಠಗಳನ್ನು ಹೇಳುವಂತೆ ಸೂಚನೆ ನೀಡಿತ್ತು, ಇಲಾಖೆ ಸೂಚನೆ ಮೇರೆಗೆ ಪಾಠಗಳನ್ನು ಹೇಳುತ್ತಿದ್ದಾರೆ ಪರ್ಯಾಯವಾಗಿ ಪ್ರೌಢಶಾಲೆ ಶಿಕ್ಷಕರಿಂದ ಹಿಡಿದು ಜಿಲ್ಲಾ ಉಪನಿರ್ದೇಶಕವರೆಗೂ ಪದೋನ್ನತಿ ನಿವೃತ್ತಿ ಹೊಂದಿದ ಉದಾಹರಣೆಗಳಿವೆ ಎಂದರು.

       ಸರ್ಕಾರಿ ನೌಕರರ ಸಂಘದ ಸದಸ್ಯ ಮಹದೇವ ಕರಿಯಣ್ಣನವರ ಮಾತನಾಡಿ, ಇಲ್ಲಿಯವರೆಗೂ ಪದವೀಧರ ಶಿಕ್ಷಕರನ್ನು ಮನ ಬಂದಂತೆ ದುಡಿಸಿಕೊಂಡು ಇದೀಗ ದಿಡೀರ್ ಹಿಂಬಡ್ತಿ (ಡಿಮೋಶನ್) ಮಾದರಿಯಲ್ಲಿ ನಮ್ಮ ಸೇವೆಯನ್ನು ಕೇವಲ 1 ರಿಂದ 5 ತರಗತಿಗೆ ಸೀಮಿತಗೊಳಿಸಿದ್ದು ರಾಜ್ಯದ ಸುಮಾರು 80 ಸಾವಿರ ಶಿಕ್ಷಕರಿಗೆ ತುಂಬಲಾರದ ನಷ್ಟವಾಗಿದ್ದು ಹೈಸ್ಕೂಲ್ ಕಾಲೇಜ್ ಇನ್ನಿತರ ಕಡೆಗಳಿಗೆ ಮುಂಬಡ್ತಿ ಆಸೆಯಲ್ಲಿದ್ದ ನಮ್ಮೆಲ್ಲರ ಆಸೆಗೆ ಇಲಾಖೆ ತಣ್ಣೀರೆರೆಚಿದೆ ಎಂದು ಆರೋಪಿಸಿದರು.

      ಪದವೀಧರ ಶಿಕ್ಷಕ ಶಂಕರ್ ಕಿಚಡಿ ಮಾತನಾಡಿ, ನಮ್ಮಲ್ಲಿರುವ ಅನುಭವ ಮತ್ತು ಅರ್ಹತೆಯನ್ನು ಪರಿಗಣಿಸಿ ವೇತನ ಪರಿಷ್ಕರಣೆ ಮತ್ತು ಪದೋನ್ನತಿ ನೀಡಲು ಹಿಂದೇಟು ಹಾಕುತ್ತಿರುವುದು ದುರ್ದೈವದ ಸಂಗತಿ ಕೂಡಲೇ ನಮ್ಮನ್ನೂ ಪದವೀಧರ ಶಿಕ್ಷಕರೆಂದು ಪರಿಗಣಿಸುವ ಮೂಲಕ ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಮಾತಿನಂತೆ ನಮ್ಮ ವೇತನವನ್ನೂ ಪರಿಷ್ಕರಿಸಿ ಈಗಾಗಲೇ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಆಗ್ರಹಿಸಿದರು..

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link