ಬ್ಯಾಡಗಿ:
ನಮ್ಮ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಇಂಜನೀಯರುಗಳೇ ಇಲ್ಲಾ? ನಾವೊಬ್ಬನೇ ತಾಲೂಕಿನಾದ್ಯಂತ ಇಲಾಖೆಯ ಕೆಲಸ ನಿರ್ವಹಿಸಲೂ ಆಗುತ್ತಿಲ್ಲವೆಂದು ತಮ್ಮ ನೋವು ಹಾಗೂ ಅಸಮಾದಾನವನ್ನು ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಅವರಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರುಗಳು ತೋಡಿಕೊಂಡ ಘಟನೆ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜರುಗಿತು.
ಸ್ಥಳೀಯ ತಾಲೂಕಾ ಪಂಚಾಯತ ಸುವರ್ಣ ಸೌಧದ ಸಭಾಭವನದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಶಂಕರ ಚವ್ಹಾಣ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ ಪಂಚಾಯತ ರಾಜ್ ಉಪ ವಿಭಾಗದ ನಟರಾಜ್ ಅವರುಗಳು ಮಾತನಾಡಿ ತಾಲೂಕಿನಲ್ಲಿ 21 ಗ್ರಾಮ ಪಂಚಾಯತಗಳಿದ್ದು ಎಲ್ಲಾ ಗ್ರಾಮ ಪಂಚಾಯತಗಳ ಕಾರ್ಯ ನೋಡಲು ಸಮಯ ಸಿಗುತ್ತಿಲ್ಲಾ ಆದ್ದರಿಂದ ನಮ್ಮ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಲೂ ಇಂಜನೀಯರುಗಳನ್ನು ಒದಗಿಸಿ ಕೊಡುವಂತೆ ಮನವಿ ಮಾಡಿಕೊಂಡು ತಮ್ಮ ನೋವನ್ನು ಜಿ.ಪಂ.ಅಧ್ಯಕ್ಷರಲ್ಲಿ ವ್ಯಕ್ತ ಪಡಿಸಿದರು.
ಎರಡೂ ಇಲಾಖೆಯ ಅಧಿಕಾರಿಗಳ ಉತ್ತರಕ್ಕೆ ವಿಚಲಿತರಾದ ಕರಿಯಣ್ಣನವರ ಅವರು ಏನಾದರೂ ಮಾಡಿ ಒಟ್ಟಿನಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡೊಕೊಳ್ಳಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ನಿಮ್ಮ ವಿಷಯವನ್ನು ತರುವ ಮೂಲಕ ನಿಮ್ಮ ಎರಡೂ ಇಲಾಖೆಗಳಲ್ಲಿ ಇಂಜನೀಯರರನ್ನು ತರುವ ಕಾರ್ಯವನ್ನು ಮಾಡುವುದಾಗಿ ಜಿ.ಪಂ.ಅಧ್ಯಕ್ಷರು ಭರವಸೆ ನೀಡಿದರು.
ಜಿ.ಪಂ.ಸದಸ್ಯ ಅಬ್ದುಲ್‍ಮುನಾಫ ಯಲಿಗಾರ ಮಾತನಾಡಿ ಕಾಗಿನೆಲೆಯಲ್ಲಿರುವ ಸರಕಾರಿ ಆಸ್ಪತ್ರೆಯ ಹೊಸ ಕಟ್ಟಡದ ಕಟ್ಟಡವು ಕಳಪೆಯಿಂದ ಕೂಡಿದೆ. ಗುತ್ತಿಗೆದಾರರು ಕಳೆದ ಎರಡು ವರ್ಷಗಳಿಂದಲೂ ಕಟ್ಟಡವನ್ನು ಕಟ್ಟಿದ್ದರೂ ಆರೋಗ್ಯ ಇಲಾಖೆಯ ಸುಪರ್ದಿಗೆ ಕೊಡುತ್ತಿಲ್ಲಾ, ಕಟ್ಟಡದ ಬಾಗಿಲುಗಳಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಕಟ್ಟಡದ ಒಳಗೆ ಇರುವ ನೆಲ ಹಾಸಿನ ಕಲ್ಲುಗಳು ಒಡೆದು ಹೋಗಿವೆ ಇದಕ್ಕೆ ಸಂಬಂಧಿಸದಂತೆ ಇಂಜನೀಯರ ಮೇಲೆ ಕ್ರಮ ಕೈಕೊಳ್ಳಬೇಕು. ಕಳಪೆ ಕಾಮಗಾರಿ ಕೈಕೊಂಡ ಗುತ್ತಿಗೆದಾರರ ಲೈಸನ್ಸ್‍ನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಜಿ.ಪಂ.ಅಧ್ಯಕ್ಷ ಕರಿಯಣ್ಣನವರ ಅವರನ್ನು ಸಭೆಯಲ್ಲಿ ಆಗ್ರಹಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುನಾಥಸ್ವಾಮಿ ಅವರ ಬೇಜವಾಬ್ದಾರಿ ಉತ್ತರಕ್ಕೆ ಸಿಡಿಮಿಡಿಗೊಂಡ ಜಿ.ಪಂ.ಅಧ್ಯಕ್ಷರು ತಾಲೂಕಿನಲ್ಲಿ ಶಾಲೆಗಳೆಷ್ಟಿವೆ ತಾಲೂಕಿಗೆ ಬಂದಿರುವ ಅನುದಾನದ ಬಗ್ಗೆ ನಿಮ್ಮಲ್ಲಿ ವಿವರವಿಲ್ಲವೆಂದರೇ ನೀವು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುವುದಾದರೂ ಹೇಗೆ?. ಮುಂದಿನ ಸಭೆಯಲ್ಲಿ ಎಲ್ಲ ವಿವರಗಳನ್ನು ನಮಗೆ ಕೊಡುವಂತೆ ತಾಕಿತು ಮಾಡಿದರಲ್ಲದೇ ಇದೇ ರೀತಿ ನಿಮ್ಮ ವರ್ತನೆ ಮುಂದುವರಿದಲ್ಲಿ ನಿಮ್ಮ ಮೇಲೆ ಕ್ರಮ ಕೈಕೊಳ್ಳಲಾಗುವುದೆಂದರು.
ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿದರು. ಸಭೆಯಲ್ಲಿ ತಾಲೂಕಾ ಪಂಚಾಯತ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತವ್ವ ದೇಸಾಯಿ, ಜಿ.ಪಂ.ಸದಸ್ಯರಾದ ಅನಸೂಯಾ ಕುಳೇನೂರ, ಸುಮಂಗಲಾ ಪಟ್ಟಣಶೆಟ್ಟಿ, ಜಿ.ಪಂ.ಮುಖ್ಯಲೆಕ್ಕಾಧಿಕಾರಿ ಇಬ್ರಾಹಿಂ ಸುತಾರ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಆಬಿದ್ ಗದ್ಯಾಳ ಹಾಗೂ ತಾಲೂಕಿನ ಪಿಡಿಓಗಳು ಎನ್‍ಆರ್‍ಇಜಿ ಇಂಜನೀಯರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ