ನೇಮಕಾತಿ ವಿಳಂಬ ನೀತಿಯನ್ನು ಖಂಡಿಸಿ ಪ್ರತಿಭಟನೆ

ಬೆಂಗಳೂರು

           ನೇಮಕಾತಿ ವಿಳಂಬ ನೀತಿಯನ್ನು ಖಂಡಿಸಿ ವಿವಿಧ ಇಲಾಖೆಗಳ ಉದ್ಯೋಗಾಕಾಂಕ್ಷಿಗಳು ವಿಧಾನಸೌಧದ ಬಳಿಯಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಕಚೇರಿಯ ಬಾಗಿಲು ತಟ್ಟಿ ಪ್ರತಿಭಟನೆ ನಡೆಸಿದರು.

          ಕೆಪಿಎಸ್ಸಿ ಕೇಂದ್ರ ಕಚೇರಿ ಮುಂಭಾಗ ಮಂಗಳವಾರ ಶಾಸಕ ಸುರೇಶ್ ಕುಮಾರ್ ಅವರ ನೇತೃತ್ವದಲ್ಲಿ ಸೇರಿದ ಉದ್ಯೋಗಾಕಾಂಕ್ಷಿಗಳು ಕೆಪಿಎಸ್ಸಿ ಬಾಗಿಲು ತಟ್ಟಿ ಪ್ರತಿಭಟನೆ ನಡೆಸಿ ಶೀಘ್ರವಾಗಿ ಇಲಾಖೆಯ ನೇಮಕಾತಿ ಪ್ರಕಟಣೆಗಳು ಹೊರ ಬರಬೇಕೆಂದು ಆಗ್ರಹಿಸಿದರು.

           2015ನೇ ವೃಂದದ ಕೆಪಿಎಸ್ಸಿ ಪರೀಕ್ಷೆಗಾಗಿ 2017ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.ಅದೇ ರೀತಿ, 2017ರ ಆಗಸ್ಟ್‍ನಲ್ಲಿ ಪ್ರಾಥಮಿಕ ಪರೀಕ್ಷೆ ಹಾಗೂ ಡಿಸೆಂಬರ್ ತಿಂಗಳಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ ಫಲಿತಾಂಶ ಪ್ರಕಟವಾಗಿಲ್ಲ.

          ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೆಪಿಎಸ್ಸಿ ಅಧ್ಯಕ್ಷರಿಗೆ ಖುದ್ದು ಮಾತನಾಡಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಕಚೇರಿ ಕದ ತಟ್ಟಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾ ನಿರತ ಉದ್ಯೋಗಾಕಾಂಕ್ಷಿಗಳು ತಿಳಿಸಿದರು.

          ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸುತ್ತದೆ.ಆದರೆ, ಆಯ್ಕೆ ಪ್ರಕ್ರಿಯೆ ಮುಗಿಯೂವರೆಗೂ ಮೂರರಿಂದ ನಾಲ್ಕು ವರ್ಷಗಳ ಅವಧಿ ತೆಗೆದುಕೊಳ್ಳುತ್ತದೆ.ಇದರಿಂದ ವಯೋಮಿತಿ, ನಿರುದ್ಯೋಗ ಸಮಸ್ಯೆ ಎದುರಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

           ಡಿ.26 ರೊಳಗೆ: ಬಾಕಿ ಇರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೆಪಿಎಸ್ಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆದಿದ್ದು, ಡಿ.26 ರೊಳಗೆ ಎಲ್ಲಾ ಹುದ್ದೆಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಶಾಸಕ ಸುರೇಶ್ ಕುಮಾರ್ ಒತ್ತಾಯಿಸಿದರು.

         ಟೈಪಿಸ್ಟ್ ಗಳ ಕೆಪಿಎಸ್ಸಿ ಆಯ್ಕೆ ಮಾಡಿರುವ ಪಟ್ಟಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ.ಅದೇ ರೀತಿ, ಅಬಕಾರಿ ರಕ್ಷಕ ಹುದ್ದೆಗಳಲ್ಲಿ ಮೂರು ದಿನಗಳಲ್ಲಿ ಮಹಿಳೆ, ಒಂದು ವಾರದಲ್ಲಿ ಪುರುಷರ ಆಯ್ಕೆ ಪಟ್ಟಿ ಬಿಡುಗಡೆಯಾಗಲಿದ್ದು, ಆರೋಗ್ಯ ನಿರೀಕ್ಷಕ ಹುದ್ದೆಗಳಿಗೆ ಒಂದು ವಾರದಲ್ಲಿ ಪಟ್ಟಿ ಪ್ರಕಟಿಸುವ ಭರವಸೆಯನ್ನು ಕೆಪಿಎಸ್ಸಿ ಅಧಿಕಾರಿಗಳು ನೀಡಿದ್ದಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap