ಬೆಂಗಳೂರು:
ಇಂದಿನ ರೈತರ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಬರದೇ ಇದ್ದರೆ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸ ಧವಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳಗಾರರ ಸಮಸ್ಯೆ ವಿಕೋಪಕ್ಕೆ ಹೋಗಿದೆ. ಸಾಲಮನ್ನಾ ಘೋಷಣೆ ಆದರೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಮನ್ನಾ ಮಾಡ್ತೀನಿ ಅಂತ ರಾಜಕೀಯ ದೊಂಬರಾಟ ಮಾಡಿದ ಮುಖ್ಯಮಂತ್ರಿಗಳೇ ರೈತರ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದರು.
90 ಕೋಟಿ ರೂ.ಗಳು ಕಬ್ಬಿನ ಕಾರ್ಖಾನೆಯಿಂದ ರೈತರಿಗೆ ಬಾಕಿ ಬರಬೇಕಿದೆ. ಯಾವ ಪಕ್ಷದವರ ಕಾರ್ಖಾನೆ ಆದ್ರೆ ಏನು? ಹೋರಾಟ ಮಾಡ್ತಿರೋರು ಯಾವ ಪಕ್ಷ ಅಂತ ಸಿಎಂ ಕೇಳ್ತಾರೆ. ಈ ಎಲ್ಲದರ ಬಗ್ಗೆ ಸಿಎಂ ವಿರುದ್ಧ ನಾಳೆ 12 ಗಂಟೆಗೆ ಸುದ್ದಿಗೋಷ್ಠಿ ಕರೆದು ಮಾತನಾಡುತ್ತೇನೆ. ಸಮಸ್ಯೆ ಪರಿಹರಿಸದಿದ್ದರೆ ಬೆಳಗಾವಿ ಅಧಿವೇಶನದ ವೇಳೆ ಸದನದ ಹೊರಗಡೆ ಮತ್ತೆ ಒಳಗೆ ಹೋರಾಟ ನಡೆಸುತ್ತೇವೆ. ಈ ಸಂಬಂಧ ನಾಳೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ರೈತ ಮಹಿಳೆಗೆ ಒಬ್ಬ ಸಿಎಂ ಆಗಿ ಎಲ್ಲಿ ಮಲಗಿದ್ದೆ ಎಂದು ಕೇಳ್ತಾರೆ. ಈ ರೀತಿ ಮಾತಾಡಿರುವ ಸಿಎಂ ಕ್ಷಮೆಯಾಚಿಸಬೇಕು. ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಮಗನನ್ನ ಸಮರ್ಥನೆ ಮಾಡಿಕೊಳ್ಳುವುದು ಬಿಟ್ಟು ರೈತರ ಪರ ಮಾತಾಡಲಿ. ರೇವಣ್ಣ ನೋಟಿನ ಮಷಿನ್ ಇದೆಯಾ ಅಂತಾರೆ. ಆದರೆ ಮಷಿನ್ ಇಟ್ಕೊಂಡಿದ್ದೀರಿ ಅಂತಾ ನಾವು ಅಂದ್ವಾ? ಮೊದಲು ರೈತರ ಸಮಸ್ಯೆ ಬಗೆಹರಿಸಿ, ಇಲ್ಲದೆ ಹೋದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
