ತುರುವೇಕೆರೆ
ಜೂ. 26ರ ಬುಧವಾರದಂದು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ತಾಲ್ಲೂಕು ರೈತ ಸಂಘ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಮಾವತಿ ನಾಲಾ ಅಗಲೀಕರಣ, ತುಂಗಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳ ತುರ್ತು ಅನುಷ್ಠಾನ ಸೇರಿದಂತೆ ರಾಜ್ಯ ಸರ್ಕಾರ 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು.
ಪ್ರಸ್ತುತ ಸರ್ಕಾರ ನಡೆಸುತ್ತಿರುವ ಮಣ್ಣಿನ ಮಕ್ಕಳು 2013ರ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರೈತರ ಪಾಲಿಗೆ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ. ಈ ಕಾಯ್ದೆ ಉದ್ಯಮಿಗಳ ಪರವಾಗಿದೆಯೆ ಹೊರತು ರೈತರ ಪರವಾಗಿಲ್ಲ, ಈ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎನ್ನುವ ಬೇಡಿಕೆಯ ಜೊತೆಗೆ, ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ಹೇಮಾವತಿ ವ್ಯಾಪ್ತಿಯಲ್ಲಿನ ಎಲ್ಲಾ ಕೆರೆಗಳನ್ನು ತುಂಬಿಸುವಲ್ಲಿ ಆಯಾ ಕ್ಷೇತ್ರದ ಸ್ಥಳೀಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.
ಜಿಲ್ಲೆಯ 10 ತಾಲ್ಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿದ್ದರೂ, ಇಲ್ಲಿಯವರೆವಿಗೂ ಬೆಳೆನಷ್ಟ ಪರಿಹಾರ ಮತ್ತು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಣವನ್ನು ರೈತರಿಗೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಹೇಮಾವತಿ ನಾಲೆಯಲ್ಲಿ 2500 ರಿಂದ 3000 ಕ್ಯೂಸೆಕ್ಸ್ ನೀರು ಹರಿಯುವ ಹಾಗೆ ನಾಲೆಯನ್ನು ಆಧುನೀಕರಣಗೊಳಿಸಬೇಕು.
ಬ್ಯಾಂಕ್‍ಗಳು ರೈತರಿಗೆ ಸಾಲದ ನೋಟೀಸ್ ನೀಡುತ್ತಿದ್ದು ಬರಗಾಲಕ್ಕೆ ಸಿಲುಕಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು ತಕ್ಷಣದಿಂದಲೆ ಜಿಲ್ಲಾಧಿಕಾರಿಯವರು ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ನೋಟೀಸ್ ನೀಡದಂತೆ ಕ್ರಮವಹಿಸಬೇಕು ಸೇರಿದಂತೆ ಹತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಅಸ್ಲಾಂಪಾಷ, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್‍ಗೌಡ, ಹಸಿರು ಸೇನೆ ಲೋಕೇಶ್, ತಾಲ್ಲೂಕು ಕಾರ್ಯದರ್ಶಿ ಚಂದ್ರಶೇಖರ್, ಪದಾಧಿಕಾರಿಗಳಾದ ಗಿರಿಯಪ್ಪ, ಶಿವಣ್ಣ, ಪುರುಷೋತ್ತಮ್, ಗೋವಿಂದರಾಜು, ಶಂಕರಪ್ಪ, ಜಯಣ್ಣ, ಇತರರು ಇದ್ದರು.