ಹೋರಾಟ ರಾಜಕೀಯ ಸ್ವರೂಪ ಪಡೆಯಲಿ

ದಾವಣಗೆರೆ :

      ಕಾರ್ಮಿಕ ಮತ್ತು ರೈತ ಹೋರಾಟಗಳಿಗೆ ರಾಜಕೀಯ ಸ್ವರೂಪ ನೀಡುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಆರ್.ವಿಜಯ ಭಾಸ್ಕರ್ ಪ್ರತಿಪಾದಿಸಿದರು. 

      ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಜಿಲ್ಲಾಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಕಾರ್ಮಿಕ ಮತ್ತು ರೈತ ಚಳವಳಿಯ ವಿಚಾರಧಾರೆಯನ್ನು ಜನಸಾಮಾನ್ಯರ ಮಧ್ಯೆ ಕೊಂಡ್ಡೊಯ್ಯುವ ಮೂಲಕ ಆ ಹೋರಾಟಗಳಿಗೆ ರಾಜಕೀಯ ಸ್ವರೂಪ ನೀಡಬೇಕಾಗಿದೆ ಎಂದು ಹೇಳಿದರು.

      ದೇಶದ ಕಾರ್ಮಿಕರು, ರೈತರ ಮೇಲೆ ನಡೆಯುತ್ತಿರುವ ದಾಳಿ ಇಂದು ತೀವ್ರ ಸ್ವರೂಪ ಪಡೆಯುತ್ತಿವೆ. ಹೀಗಾಗಿ ಕೆಂಬಾವುಟ ಹಿಡಿದಿರುವ ಸಂಘಟನೆಗಳು ಹೋರಾಟಕ್ಕೆ ರಾಜಕೀಯ ರೂಪ ನೀಡಬೇಕಾದ ಅನಿವಾರ್ಯತೆ ಇದೆ ಎಂದರು,ಕೇಂದ್ರ ಸರ್ಕಾರದ ಹೊಸ ಆರ್ಥಿಕ ನೀತಿಗಳ ವಿರುದ್ಧ ಕಳೆದ ಮೂರು ದಶಕಗಳ ಹಿಂದೆಯೇ ಕೆಂಬಾವುಟ ಹಿಡಿದಿದ್ದ ಕಾರ್ಮಿಕ ಸಂಘಟನೆಗಳು ಹೋರಾಟ ಮಾಡಿದ್ದ ಸಂದರ್ಭದಲ್ಲಿ, ಈ ಹೊಸ ಆರ್ಥಿಕ ನೀತಿಗಳು ಮುಂದೆ ಕಾರ್ಮಿಕರು ಮತ್ತು ರೈತರನ್ನು ಬಲಿ ಪಡೆಯಲಿವೆ ಎಂಬುದಾಗಿ ಪ್ರತಿಪಾದಿಸಿದ್ದವು. ಆದರೆ, ಅಂದಿನ ಕೇಂದ್ರ ಮಂತ್ರಿ ಬಲರಾಂ ಜಾರ್ಖಡ್ ನಮ್ಮನ್ನು ದೇಶದ್ರೋಹಿಗಳು ಎಂದು ಕರೆದಿದ್ದರು. ಆದರೆ, ನಾವು ಅಂದು ಹೇಳಿದ ಮಾತು ಇಂದು ನಿಜವಾಗಿದೆ ಎಂದರು.

      ಕೇಂದ್ರ ಸರ್ಕಾರದ ಹೊಸ ಆರ್ಥಿಕ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ರಾಷ್ಟ್ರ ಮಟ್ಟದಲ್ಲಿ 18 ಹೋರಾಟಗಳನ್ನು ರೂಪಿಸಿದ್ದೇವೆ. ಹೀಗಿದ್ದರೂ ಇಂದು ಅಧಿಕಾರ ನಡೆಸುವವರು ಮತ್ತೆ ನಮ್ಮನ್ನು ದೇಶದ್ರೋಹಿಗಳು ಎಂಬುದಾಗಿ ಜರೆಯುತ್ತಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಹೊಸ ಆರ್ಥಿಕ ನೀತಿ ಜಾರಿಯಿಂದ ಸುಮಾರು ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ, ದೇಶದ ರೈತರ ಬದುಕು ಅಸನೀಹವಾಗಿದೆ. ಆದ್ದರಿಂದ ಕೃಷಿಯಿಂದ ವಿಮುಖರಾಗಿರುವ ದುಡಿಯುವ ವರ್ಗದ ಜನರು, ಉದ್ಯೋಗ ಅರಸಿ ನಗರ ಪ್ರದೇಶಗಳತ್ತ ಗುಳೆ ಹೋರಟಿದ್ದಾರೆ ಎಂದು ಹೇಳಿದರು.

      ವಿದೇಶದಿಂದ ಕಪ್ಪು ಹಣದ ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ, ನೋಟು ಅಮಾನ್ಯೀಕರಣಗೊಳಿಸಿ, ಜಿಎಸ್‍ಟಿ ಜಾರಿಗೆ ತಂದ ಪರಿಣಾಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚಿರುವ ಕಾರಣ ಅವುಗಳನ್ನು ನಡೆಸುತ್ತಿದ್ದ ಮಾಲೀಕರು ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಅಭಿವೃದ್ಧಿ ಕುರಿತು ಮಾತನಾಡುವ ಕೇಂದ್ರ ಸರ್ಕಾರವು ಸಾರ್ವಜನಿಕ ಸ್ವಾಮ್ಯದ ಉದ್ಯಮಗಳನ್ನು ಖಾಸಗೀಕರಣ ಗೊಳಿಸುವ ಮೂಲಕ ಅಂಬಾನಿಯನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಲು ಹೊರಟಿದೆ. ಆದರೆ, ಈ ಬಗ್ಗೆ ಮಾಧ್ಯಮಗಳು ಚಕಾರ ಎತ್ತುತ್ತಿಲ್ಲ. ಜನರ ಹಿತಾಸಕ್ತಿ ಕಾಪಾಡಬೇಕಾದ ಮಾಧ್ಯಮಗಳು ಸಹ ಉದ್ಯಮವಾಗಿ ಬೆಳೆದಿರುವುದು ಅತ್ಯಂತ ವಿಪರ್ಯಾಸವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

         ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಮಾತನಾಡಿ, ಒಂದೆಡೆ ರೈತರು ಮತ್ತು ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆಗೆ ಬಿಜೆಪಿ ರಾಮ ಮಂದಿರ ಎಂಬ ಭಾವನಾತ್ಮಕ ವಿಷಯ ಹಿಡಿದುಕೊಂಡು ದೇಶದ ಜನರನ್ನು ಹಾದಿ ತಪ್ಪಿಸುತ್ತಿದೆ. ಕಾರ್ಮಿಕ ಸಂಘಟನೆಗಳು ಕೇವಲ ಸಮಾವೇಶ ಮಾಡಿದರೆ ಸಾಲದು, ಕೇಂದ್ರ ಸರ್ಕಾರದ ಹಗರಣಗಳನ್ನು ಜನರ ಮಧ್ಯೆಗೆ ಚರ್ಚೆಗೆ ಬಿಡಬೇಕು. ಈ ಚರ್ಚೆ ರಾಜಕೀಯವಾಗಿಯೂ ಪ್ರಬಲಗೊಳ್ಳಬೇಕೆಂದು ಆಶಿಸಿದರು.

          ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಐಯುಟಿಯುಸಿ ಸೆಕ್ರೆಟರಿಯಲ್ ಮೇಜರ್ ಡಾ. ಷಣ್ಮುಗಂ, ಎಎನ್‍ಟಿಯುಸಿ ಜಿಲ್ಲಾಧ್ಯಕ್ಷ ಆರ್.ತಿಪ್ಪೇಸ್ವಾಮಿ, ಕೆನರಾ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್‍ನ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ನಾಯರಿ, ಸಿಐಟಿಯುನ ಕೆ.ಎಲ್. ಭಟ್, ಎಐಟಿಯುಸಿಯ ಆನಂದ್‍ರಾಜ್, ಆವರಗೆರೆ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link