ಬೆಂಗಳೂರು
ಕಳೆದ ವಾರ ಬಿಡುಗಡೆಯಾದ ‘ಪೈಲ್ವಾನ್’ ಕನ್ನಡ ಚಿತ್ರವನ್ನು ಫೇಸ್‌ಬುಕ್ ಖಾತೆಯಲ್ಲಿ ಲಿಂಕ್ ಅಪ್‌ಲೋಡ್ ಮಾಡಿದ ಖತರ್ನಾಕ್ ಆರೋಪಿಯನ್ನು ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ದಾಬಸ್‌ಪೇಟೆಯ ಇಮಚೇನಹಳ್ಳಿಯ ರಾಕೇಶ್ ಅಲಿಯಾಸ್ ವಿರಾಟ್ (೧೯) ಬಂಧಿತ ಆರೋಪಿಯಾಗಿದ್ದು ಕನ್ನಡ ಚಿತ್ರರಂಗದ ಕಾಪಿರೈಟ್ ಉಲ್ಲಂಘಿಸಿ ಪೈಲ್ವಾನ್ ಪೈರಸಿ ಮಾಡಿ ಸಿಕ್ಕಿಬಿದ್ದಿದ್ದಾನೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಯು ರಾಕೇಶ್ ವಿರಾಟ್ (ಯುವ) ಎಂಬ ಹೆಸರಿನಲ್ಲಿ ಫೇಸ್‌ಬುಕ್ ಖಾತೆಯನ್ನು ಹೊಂದಿದ್ದು, ಪೈಲ್ವಾನ್ ಬಿಡುಗಡೆಯಾದ ದಿನವೇ ಚಲನಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಬಹುದಾದ ಲಿಂಕ್‌ನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಳವಡಿಸಿ, ಸ್ನೇಹಿತರಿಗೆ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದ.
ಆರೋಪಿ ಫೇಸ್‌ಬುಕ್ ಖಾತೆಯ ಸ್ಟೋರಿಯಲ್ಲಿ ಸ್ಕ್ರೀನ್ ಶಾಟ್‌ವೊಂದನ್ನು ಅಳವಡಿಸಿಕೊಂಡಿದ್ದು, ಅದರಲ್ಲಿ ಚಲನಚಿತ್ರದ ಲಿಂಕ್ ಪಡೆಯಲು ಇಚ್ಛಿಸುವವರು ತನಗೆ ಇನ್‌ಬಾಕ್ಸ್ ಮಾಡುವಂತೆ ಕೋರಿಕೊಂಡಿದ್ದ. ಇದಲ್ಲದೆ ಫೇಸ್‌ಬುಕ್‌ನ ಇಬ್ಬರು ಸ್ನೇಹಿತರಿಗೆ ಚಲನಚಿತ್ರದ ಲಿಂಕ್ ಶೇರ್ ಮಾಡಿದ್ದ.
ಕಳೆದ ಸೆ. ೧೬ ರಂದು ಪೈಲ್ವಾನ್ ನಿರ್ಮಾಪಕರು ಕಾರ್ಪರೇಟ್ ಮಾಲೀಕರ ಅನುಮತಿ ಪಡೆಯದೆ ಪೈಲ್ವಾನ್ ಚಿತ್ರದ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಂಪೂರ್ಣ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಿ ನಷ್ಟವುಂಟು ಮಾಡಲಾಗಿದೆ ಎಂದು ದೂರು ನೀಡಿದ್ದರು.
ಈ ಸಂಬಂಧ ದೂರು ದಾಖಲಿಸಿ, ಇಮಚೇನಹಳ್ಳಿಯಲ್ಲಿ ಗುರುವಾರ ಸಂಜೆ ಕಾರ್ಯಾಚರಣೆ ಕೈಗೊಂಡು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕಮೀಷನರ್ ಕಿಚ್ಚ ಭೇಟಿ
ಪೈಲ್ವಾನ್ ಯಶಸ್ವಿ ಪ್ರದರ್ಶನ ಹಾಗೂ ಪೈರಸಿ ಬಗೆಗಿನ ವಾದ ವಿವಾದಗಳ ಬೆನ್ನಲ್ಲೇ ಕಿಚ್ಚ ಸುದೀಪ್ ಮನೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಸುದೀಪ್ ಅವರು ಶುಕ್ರವಾರು ಭಾಸ್ಕರ್ ರಾವ್ ಅವರೊಂದಿಗಿರೋ ಫೋಟೋವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಅತ್ತ ಅಭಿಮಾನಿಗಳ ನಡುವಿನ ಕಲಹ ತಾರಕಕ್ಕೇರಿರೋ ಘಳಿಗೆಯಲ್ಲಿಯೇ ಈ ದಿನ ಬೆಳ್ಳಂಬೆಳಗ್ಗೆ ಸುದೀಪ್ ಮನೆ ಮುಂದೆ ಪೊಲೀಸರು ಬೀಡು ಬಿಟ್ಟಿದ್ದರಿಂದ ಜನ ಈ ಬಗ್ಗೆ ಕುತೂಹಲಗೊಂಡಿದ್ದರು. ಬಳಿಕ ಭಾಸ್ಕರ್ ರಾವ್, ಸುದೀಪ್ ಮನೆಗೆ ಭೇಟಿ ನೀಡಿದ್ದಾರೆನ್ನಲಾಗಿದೆ. ಆದರೆ ಈ ಭೇಟಿಯ ಹಿಂದಿನ ಉದ್ದೇಶವೇನೆಂಬುದು ಮಾತ್ರ ಬಹಿರಂಗವಾಗಿಲ್ಲ
ಭಾಸ್ಕರ್ ರಾವ್ ಅವರು ಸುದೀಪ್ ಮತ್ತು ಅವರ ಕುಟುಂಬದೊಂದಿಗೆ ಒಂದಷ್ಟು ಕಾಲ ಕಳೆದಿದ್ದಾರೆ. ಕಿಚ್ಚ ಹಾಗೂ ಅವರ ತಂದೆಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪೈಲ್ವಾನ್ ಪೈರಸಿ ವಿರುದ್ಧ ಪೈಲ್ವಾನ್ ಚಿತ್ರತಂಡ ಸೈಬರ್ ಕ್ರೈಂಗೆ ದೂರು ಸಲ್ಲಿಸಿದ್ದು ಆರೋಪಿ ಬಂಧಿಸಿದ ಬೆನ್ನಲ್ಲೇ ಪೊಲೀಸ್ ಆಯುಕ್ತರ ಭೇಟಿ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








