ಚಳ್ಳಕೆರೆ
ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆ ರೈತರ ಜಮೀನಲ್ಲಿದ್ದ ಅಲ್ಪಸ್ವಲ್ಪ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು ಮಳೆಯಿಂದ ನೆಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರುತ್ತದೆ.
ಕಳೆದ ಏಳು ತಿಂಗಳಿನಿಂದ ಕೊರೋನಾ ವೈರಾಣುವಿನಿಂದ ಜೀವಕ್ಕೆ ಅಪಾಯವಿದ್ದರೆ, ಕಳೆದ ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ರೈತರ ಎಲ್ಲಾ ಬೆಳೆ ಹಾಗೂ ಬಡವರ ಮನೆಗಳು ನೆಲಕ್ಕೆ ಉರಳುವ ಮೂಲಕ ಮತ್ತೊಮ್ಮೆ ರೈತನ ಬದುಕು ದುಸ್ಥರವಾಗಿದ್ದು, ಇತ್ತೀಚೆಗೆ ಬಿದ್ದ ಮಳೆಯಿಂದ ರೈತ ಸಂಪೂರ್ಣವಾಗಿ ನೆಲಕಚ್ಚಿದ್ದು ಮಳೆ ಕೊರೋನಾ ವೈರಾಣುವಿಗಿಂತ ಅಪಾಯವಾಗಿ ರೈತರನ್ನು ಕಾಡುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಈ ಭಾರಿ ಬಿದ್ದ ಮಳೆ ಅಧಿಕವಾಗಿದ್ದು, ಹಿಂದಿನ ಎಲ್ಲಾ ಮಳೆಯ ದಾಖಲಾತಿಯನ್ನು ಹಾಗೂ ನಷ್ಟದ ಅಂದಾಜನ್ನು ಈ ಬಾರಿಯ ಮಳೆ ಹಿಂದಕ್ಕೆ ತಳ್ಳಿ ಲಾಭವನ್ನೇ ಮರೆತು ಸಂಪೂರ್ಣ ನಷ್ಟವನ್ನೇ ರೈತರು ಅನುಭವಿಸುವಂತಾಗಿದೆ. ಮಂಗಳವಾರ ಬಿದ್ದ ಭಾರಿ ಮಳೆಗೆ ದೊಡ್ಡೇರಿ ಗ್ರಾಮದ ಆಂಜನೇಯ, ರಂಗಸ್ವಾಮಿ ಮತ್ತು ಮುಭಾರಕ್ ಎಂಬುವವರ ಮೂರು ಮನೆಗಳು ಬಿದ್ದು, ಸುಮಾರು 1.20 ಲಕ್ಷ ನಷ್ಟ ಸಂಭವಿಸಿರುತ್ತದೆ. ರಾಮಜೋಗಿಹಳ್ಳಿಯಲ್ಲಿ ಓಬಮ್ಮ ಎಂಬ ವೃದ್ದೆಯ ಮನೆಯೂ ಸಹ ಕುಸಿದು ಬಿದಿದ್ದು, ಸುಮಾರು 22 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಗಾದ್ರಿಪಾಲಯ್ಯ ಎಂಬುವವರ ಮನೆ ಸಹ ನೀರಿನಿಂದ ಆವೃತ್ತವಾಗಿ ಬಿದ್ದು ಇವರಿಗೂ ಸಹ 20 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಭೋಗನಹಳ್ಳಿ ಗ್ರಾಮದ ಮುಮ್ತಾಬ್ ಎಂಬುವವರ ರಿ.ಸರ್ವೆ ನಂ.69/9ರಲ್ಲಿ ಎರಡು ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತಿದ್ದು, ಮಳೆ ನೀರಿಗೆ ಸಂಪೂರ್ಣ ಶೇಂಗಾ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಕೊಚ್ಚಿಹೋಗುವ ಶೇಂಗಾ ಬಳ್ಳಿಯನ್ನು ಹಿಡಿಟ್ಟುಕೊಳ್ಳಲು ಮನೆಯ ಜನರೆಲ್ಲಾ ಹೊಲದಲ್ಲಿ ಹರಿಯುವ ನೀರಿನಲ್ಲೇ ಬೆಳೆ ರಕ್ಷಣೆಗೆ ತೊಡಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಹುತೇಕ ಬೆಳೆ ನೀರಿನಲ್ಲಿ ಕೊಚ್ಚಿಹೋಗಿ ಸುಮಾರು 40 ಸಾವಿರ ನಷ್ಟ ಸಂಭವಿಸಿರುತ್ತದೆ.
ಮಂಗಳವಾರ ರಾತ್ರಿ ದೇವರಮರಿಕುಂಟೆ 56.02, ಚಳ್ಳಕೆರೆ44.00, ನಾಯಕನಹಟ್ಟಿ 33.06, ತಳಕು 12.02, ಪರಶುರಾಮಪುರ 3.6 ಎಂ.ಎಂ.ಮಳೆಯಾಗಿದ್ದು, ಒಂದೇ ದಿನ ಒಟ್ಟು 148.14 ಎಂ.ಎಂ. ಮಳೆಯಾಗಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ