ಇಂದು ರೈತ ದಸರಾಕ್ಕೆ ಚಾಲನೆ

ಬೆಂಗಳೂರು

      ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ. ಇಂದು ಬೆಳಿಗ್ಗೆ ಓಪನ್ ಸ್ಟ್ರೀಟ್ ಉತ್ಸವ ಆರಂಭವಾಯಿತು. ಯುವ ದಸರಾ ನಡೆಯುತ್ತಿರುವ ಮಹಾರಾಜ ಕಾಲೇಜು ಮೈದಾನ ಸಮೀಪದ ಬುಲ್‍ವಾರ್ಡ್‍ನಲ್ಲಿ ನಡೆದಿರುವ ಉತ್ಸವದಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

       ಆಧುನಿಕ ನೃತ್ಯ, ಜಾನಪದ ನೃತ್ಯ, ವಿವಿಧ ರಾಜ್ಯಗಳ ವಾದ್ಯ ವೃಂದಗಳು, ಯಕ್ಷಗಾನ ಮತ್ತು ಕಾರ್ಟೂನ್ ಪಾತ್ರಧಾರಿಗಳು ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನ ಹಲವು ಆಹಾರ ತಯಾರಕರ ಸಂಚಾರಿ ಹೋಟೆಲ್‍ಗಳು ಭಾಗವಹಿಸಿವೆ.

        ಇಂದು ಬೆಳಿಗ್ಗೆ ವಾಯುಪಡೆಯ ಸಿಬ್ಬಂದಿ ಬನ್ನಿಮಂಟಪದಲ್ಲಿ ನಾಳೆ ನಡೆಯಲಿರುವ ಏರ್ ಷೋಗೆ ತಾಲೀಮು ನಡೆಸಿದರು. ಆಕಾಶದಲ್ಲಿ ಈ ಸಿ ಬ್ಬಂದಿ ಪ್ರದರ್ಶಿಸುವ ಚಮತ್ಕಾರ ವೀಕ್ಷಣೆಗೆ ಇಂದೂ ಕೂಡ ಜನಸಾಗರವೇ ಹರಿದು ಬಂದಿತ್ತು.

       ರೈತ ದಸರಾ ಅಂಗವಾಗಿ ಇಂದು ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿವೆ. ಗೊಬ್ಬರದ ಮೂಟೆ ಹೊತ್ತು ಓಟ, ಕಲ್ಲಿನ ಭಾರಿ ಗುಂಡುಗಳನ್ನು ಎತ್ತುವುದು ಮೊದಲಾದ ಕ್ರೀಡೆಗಳು ಜನರನ್ನು ರಂಜಿಸುತ್ತಿವೆ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯ ಇಂದು ಮಧ್ಯಾಹ್ನ ನಡೆಯಲಿದೆ. ಲಲಿತ್ ಮಹಲ್ ಹೆಲಿಪ್ಯಾಡ್‍ನಿಂದ ಮೈಸೂರು ನಗರ ವೀಕ್ಷಣೆಯ ಹೆಲಿರೈಡ್‍ಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು.

        ಹಲವು ಯೋಗಕೇಂದ್ರಗಳು ಚಾಮುಂಡಿ ಬೆಟ್ಟದ ಮೇಲೆ ಇಂದು ಬೆಳಿಗ್ಗೆ ಯೋಗ ಪ್ರದರ್ಶನವನ್ನು ಆಯೋಜಿಸಿದ್ದವು. 700 ಕ್ಕೂ ಹೆಚ್ಚು ಯೋಗಪಟುಗಳು ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಚಾಮುಂಡಿ ದೇವಸ್ಥಾನದ ಎದುರು ಯೋಗಾಸನಗಳನ್ನು ಪ್ರದರ್ಶಿಸಿದರು. ಪ್ರವಾಸಿಗರಿಗೆ ಮೈಸೂರಿನ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಇಂದು ಟಾಂಗಾ ಸವಾರಿ ಆಯೋಜಿಸಲಾಗಿತ್ತು.

      ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಚಾಲನೆ ನೀಡಿದರು. ಇತಿಹಾಸ ಮತ್ತು ಪುರಾತತ್ವ ತಜ್ಞರಾದ ಡಾ|| ಎನ್.ಎಸ್.ರಂಗರಾಜು ಹಾಗೂ ಈಚನೂರು ಕುಮಾರ್ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಟ್ಟರು. ಮೈಸೂರು ಸೀಮೆಯ ಪಾರಂಪರಿಕ ಉಡುಪು ಧರಿಸಿದ ದಂಪತಿಗಳು ಟಾಂಗಾ ಸವಾರಿಯಲ್ಲಿ ಭಾಗವಹಿಸಿದ್ದು, ಆಕರ್ಷಕವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

        

Recent Articles

spot_img

Related Stories

Share via
Copy link