ಅತಿವೃಷ್ಠಿಯಿಂದಾಗಿರುವ ನಷ್ಟಕ್ಕೆ ಕೂಡಲೇ ಪರಿಹಾರ ಕೊಡಿಸಿ; ಪುರುಷೋತ್ತಮಗೌಡ

ಬಳ್ಳಾರಿ:

    ಜಿಲ್ಲೆಯಲ್ಲಿ ಕಳೆದ 100 ದಿನಗಳ ಕಾಲ ಅತಿವೃಷ್ಠಿಯಿಂದಾಗಿ ಸಂಭವಿಸಿದ ಬೆಳೆಹಾನಿ, ಪ್ರಾಣಹಾನಿ, ಜೀವಹಾನಿಗೆ ಕೂಡಲೇ ಪರಿಹಾರ ವಿತರಿಸಬೇಕು. ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸುವ ಸಲುವಾಗಿ ಕೂಡಲೇ ಐಸಿಸಿ ಸಭೆ ಕರೆಯಬೇಕು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಆಗ್ರಹಿಸಿದರು.

     ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಆಗಸ್ಟ್‍ನಿಂದ ಇಲ್ಲಿವರೆಗೆ 100 ದಿನಗಳಲ್ಲಿ ಅತಿವೃಷ್ಟಿಯಿಂದ ನಾಲ್ಕು ಜನರು ಮೃತಪಟ್ಟಿದ್ದು, ಈ ಪೈಕಿ ಇಬ್ಬರಿಗೆ 10 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಬಾಕಿ ಉಳಿದ ಇಬ್ಬರಿಗೆ ಪರಿಹಾರ ವಿತರಿಸಬೇಕಿದೆ. 92 ಜಾನುವಾರುಗಳು ಪ್ರಾಣಿ ಹಾನಿಯಾಗಿದ್ದು, ಇನ್ನು ಪರಿಹಾರ ವಿತರಿಸಿಲ್ಲ.

     ಇನ್ನು ಜಿಲ್ಲೆಯಲ್ಲಿ ಒಟ್ಟು 2054 ಮನೆಗಳು ಹಾನಿಯಾಗಿದ್ದು, ಇದರಲ್ಲಿ 712 ಮನೆಗಳಿಗೆ ಮಾತ್ರ 71,12000 ಸಾವಿರ ರೂ.ಗಳನ್ನು ಪರಿಹಾರ ವಿತರಿಸಲಾಗಿದೆ. ಬಾಕಿ 1332 ಮನೆಗಳಿಗೆ 1.33 ಕೋಟಿ ರೂ.ಗಳ ಪರಿಹಾರವನ್ನು ಕೂಡಲೇ ವಿತರಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

     ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ 55 ಕಿಮೀ ರಸ್ತೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ನೀಡಿರುವ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ಆದರೆ, ಇನ್ನು ಹೆಚ್ಚಿನ ಪ್ರಮಾಣದಲ್ಲಿ ರಸ್ತೆಗಳು ಹಾನಿಯಾಗಿವೆ. ಹಲವಾರು ಗ್ರಾಮಗಳು ಸಂಪರ್ಕಗಳನ್ನೇ ಕಳೆದುಕೊಂಡಿವೆ. ನಗರ ಪ್ರದೇಶದಲ್ಲಂತೂ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಕೂಡಲೇ ಮರು ಪರಿಶೀಲಿಸಿ, 1.66 ಕೋಟಿ ರೂ. ವೆಚ್ಚದ ರಸ್ತೆ ದುರಸ್ತಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದ ಪುರುಷೋತ್ತಮಗೌಡರು, ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ನಿದ್ದೆ ಮಾಡುತ್ತಿದ್ದಾರೆ.

      ಕೇವಲ ಸಿಎಂ ಯಡಿಯೂರಪ್ಪರೊಂದಿಗೆ ಪಿಡಬ್ಲ್ಯುಡಿ ಅನುದಾನಗಳನ್ನು ತಂದು ತಿನ್ನುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಒಟ್ಟು 34 ಸಂಪರ್ಕ ಸೇತುವೆಗಳು ಹಾನಿಯಾಗಿದ್ದು, ಅಂದಾಜು 4.55 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಸೇತುವೆಗಳನ್ನು ಮೇಲ್ದರ್ಜೆಗೇರಿಸಬೇಕು. ಜಿಲ್ಲಾ ಖನಿಜ ನಿಧಿಯ ಹಣವನ್ನು ಬಳಸಿಕೊಂಡು ಈ ಸೇತುವೆಗಳನ್ನು ನಿರ್ಮಿಸಿ ಮೇಲ್ದರ್ಜೆಗೇರಿಸಬೇಕು. ಇನ್ನು ಮಳೆಗೆ ಬಿದ್ದಿರುವ 209 ವಿದ್ಯುತ್ ಕಂಬಗಳು, 91 ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಬೇಕು.

     ಮಳೆಗೆ ಹಾನಿಯಾಗಿರುವ 29 ಶಾಲಾ ಕೊಠಡಿಗಳನ್ನು ನೂತನ ಕಟ್ಟಡಗಳನ್ನು ನಿರ್ಮಿಸಬೇಕು. ಬೆಳೆ ನಷ್ಟದಿಂದ 22 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ 12 ಜನರಿಗೆ ಪರಿಹಾರ ವಿತರಿಸಲಾಗಿದೆ. ಉಳಿದ 12 ರಲ್ಲಿ ಒಬ್ಬರು ರೈತರಲ್ಲ ಎಂದು ತಿಳಿದು ಬಂದಿದ್ದು, ಬಾಕಿ 11 ಜನರಿಗೆ ಕೂಡಲೇ ಪರಿಹಾರ ವಿತರಿಸಬೇಕು. ಅದೇ ರೀತಿ ಬೆಳೆಹಾನಿಗೆ ಸರ್ಕಾರದಿಂದ ಪರಿಹಾರದ ಹಣವನ್ನೇ ವಿತರಿಸಿಲ್ಲ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಕ್ರಮಕೈಗೊಂಡು ರೈತರಿಗೆ ಪರಿಹಾರ ವಿತರಿಸಬೇಕು. ಒಂದು ವೇಳೆ ವಿಳಂಬವಾದಲ್ಲಿ ಸಂಘದಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದವರು ಎಚ್ಚರಿಸಿದರು.

ಐಸಿಸಿ ಸಭೆ ನಡೆಸಿ;

       ಜಿಲ್ಲೆಯ ಜೀವನಾಡಿಯಾದ ತುಂಗಭದ್ರಾ ಜಲಾಶಯಕ್ಕೆ ಈ ಬಾರಿ ಒಟ್ಟು 395 ಟಿಎಂಸಿ ನೀರು ಹರಿದು ಬಂದಿದೆ. ಸದ್ಯ 100 ಟಿಎಂಸಿ ನೀರು ಸಂಗ್ರಹವಿದ್ದು, ಆಂಧ್ರಪ್ರದೆಶಕ್ಕೆ 21 ಟಿಎಂಸಿ, ಕರ್ನಾಟಕಕ್ಕೆ 45 ಟಿಎಂಸಿ ಸೇರಿ ಒಟ್ಟು 65 ಟಿಎಂಸಿ ನೀರನ್ನು ಬಳಸಲಾಗಿದೆ. 230 ಟಿಎಂಸಿ ನೀರನ್ನು ನದಿಗೆ ಹರಿಸಲಾಗಿದೆ. ಜತೆಗೆ ಜಲಾಶಯಕ್ಕೆ ನಿತ್ಯ 10 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಹರಿದು ಬರುತ್ತಿವೆ. ಹಾಗಾಗಿ ಎರಡನೇ ಬೆಳೆಗೆ ನೀರು ಹರಿಸುವ ಸಲುವಾಗಿ ಕೂಡಲೇ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು.

       ಎಚ್‍ಎಲ್‍ಸಿ ವ್ಯಾಪ್ತಿಯಲ್ಲಿ ಬೆಳೆಯಲಾಗಿದ್ದ ಮೆಣಸಿನಕಾಯಿ ಬೆಳೆ ಶೇ.40 ರಷ್ಟು ನಷ್ಟವಾಗಿದ್ದು, ಮುಂದಿನ ಜನವರಿ, ಫೆಬ್ರವರಿ ತಿಂಗಳಲ್ಲಿ ತಲಾ 15 ದಿನಗಳ ಕಾಲ ಎಚ್‍ಎಲ್‍ಸಿ ಕಾಲುವೆಗೆ ನೀರು ಹರಿಸಬೇಕು ಎಂದವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶರಣಪ್ಪ, ರಂಜಾನ್ ಸಾಬ್, ವೀರೇಶ್ ಗಂಗಾವತಿ, ವೀರನಗೌಡ, ದೊಡ್ಡದಾಸಪ್ಪ, ಶ್ರೀಧರ್ ಜಾಲಿಹಾಳ್ ಸೇರಿದಂತೆ ಹಲವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link