ನಗರದ 21 ನೀರಿನ ಘಟಕಗಳಲ್ಲಿ ಕ್ಯಾನ್‌ಗೆ 5 ರೂ., ಬಿಂದಿಗೆ ನೀರಿಗೆ 3ರೂ. ನಿಗದಿ

ತುಮಕೂರು

ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ೨೧ “ಶುದ್ಧ ಕುಡಿಯುವ ಘಟಕ” (ಆರ್.ಓ. ಪ್ಲಾಂಟ್ಸ್) ಗಳನ್ನು ಬುಧವಾರ ಬೆಳಗ್ಗೆ ಅಧಿಕೃತವಾಗಿ ತನ್ನ ವಶಕ್ಕೆ ತೆಗೆದುಕೊಂಡಿರುವ ತುಮಕೂರು ಮಹಾನಗರ ಪಾಲಿಕೆ (ಟಿ.ಎಂ.ಪಿ.)ಯ ಆಡಳಿತವು, ತಕ್ಷಣವೇ ಸದರಿ ನೀರಿನ ಘಟಕಗಳಿಗೆ ಕಾರ್ಯನಿರ್ವಹಣಾ ಸಮಯವನ್ನು ಮತ್ತು ನೀರಿನ ದರವನ್ನು ನಿಗದಿಪಡಿಸಿದೆ.

ಈ ಘಟಕಗಳು “ಪ್ರತಿನಿತ್ಯ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುವಂತೆ” ವೇಳೆಯನ್ನು ನಿಗದಿಪಡಿಸಲಾಗಿದೆ. ಸರ್ಕಾರಿ ಸುತ್ತೋಲೆಗೆ ಅನುಗುಣವಾಗಿ “ಪ್ರತಿ 20 ಲೀಟರ್ ಸಾಮರ್ಥ್ಯದ ಕ್ಯಾನ್ ನೀರಿಗೆ 5 ರೂ. ಹಾಗೂ ಪ್ರತಿ 10 ಲೀಟರ್ ಸಾಮರ್ಥ್ಯದ ಬಿಂದಿಗೆ ನೀರಿಗೆ 3 ರೂ. ಮೊತ್ತ”ವನ್ನು ಪಾಲಿಕೆಯು ನಿಗದಿಗೊಳಿಸಿದೆ.

“ಘಟಕಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ಪಾಲಿಕೆಯ ಕಿರಿಯ ಇಂಜಿನಿಯರ್ ವಿ.ಕಿರಣ್‌ಕುಮಾರ್  ಅಥವಾ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ.ಆರ್.ವಸಂತ್  ಅವರಿಗೆ ಕರೆ ಮಾಡಬಹುದು” ಎಂಬ ಸೂಚನಾ ಪತ್ರಗಳನ್ನು ಪಾಲಿಕೆ ಸುಪರ್ದಿನ ಈ ಘಟಕಗಳಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಅಂಟಿಸಲಾಗಿದೆ.

10252 ರೂ. ಸಂಗ್ರಹ

ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರು ಬುಧವಾರ ಬೆಳಗ್ಗೆ ಕಾರ್ಯಾಚರಣೆ ಕೈಗೊಂಡು ನಗರದ 21 ನೀರಿನ ಘಟಕಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ, ಸದರಿ ಘಟಕಗಳಿಗೆ ಪಾಲಿಕೆಯ ಸಿಬ್ಬಂದಿಯನ್ನೇ ಮೇಲ್ವಿಚಾರಕರನ್ನಾಗಿ ನಿಯುಕ್ತಿಗೊಳಿಸಿದ್ದಾರೆ. ಬುಧವಾರ ಸಂಜೆ ಪಾಳಿ (ಶಿ)ಯೊಂದರಲ್ಲೇ ಈ 21 ಘಟಕಗಳಿಂದ ಸುಮಾರು 10252 ರೂ.ಗಳಷ್ಟು ನೀರಿನ ಶುಲ್ಕ ಸಂಗ್ರಹವಾಗಿದೆ ಎಂದು ಪಾಲಿಕೆ ಮೂಲಗಳಿಂದ ತಿಳಿದಿದೆ.

“ಪ್ರತಿ ಘಟಕಗಳಲ್ಲಿ ನೀರಿನ ಬಳಕೆಗೆ ಸಂಬಂಧಿಸಿದಂತೆ ವಾಟರ್ ಮೀಟರ್ ವ್ಯವಸ್ಥೆ ಇದ್ದು, ಪ್ರತಿ ನಿತ್ಯ ಆರಂಭದ ರೀಡಿಂಗ್ ಮತ್ತು ಅಂತ್ಯದ ರೀಡಿಂಗ್ ಅನ್ನು ನಿಗದಿತ ರಿಜಿಸ್ಟರ್‌ನಲ್ಲಿ ಸಂಬಂಧಿಸಿದ ಸಿಬ್ಬಂದಿ ದಾಖಲಿಸಬೇಕು. ದಿನದ ಅಂತ್ಯದಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಯಾವುದೇ ವ್ಯತ್ಯಯ ಇಲ್ಲದಂತೆ ಪಾಲಿಕೆಯ ಕಚೇರಿಯಲ್ಲಿ ಪಾವತಿಮಾಡಬೇಕು” ಎಂದು ಆಯುಕ್ತರು ಸಂಬಂಧಿಸಿದ ಸಿಬ್ಬಂದಿಗೆ ಆದೇಶಿಸಿದ್ದಾರೆ.

“ಶುದ್ಧ ನೀರಿನ ಘಟಕಗಳಲ್ಲಿ ನೀರಿನ ದರವನ್ನು ಸರ್ಕಾರಿ ಆದೇಶದಂತೆ ಕಾಲ ಕಾಲಕ್ಕೆ ಪರಿಷ್ಕರಿಸಿ ನಿರ್ವಹಣೆ ಮಾಡಲಾಗುವುದು” ಎಂದು ಆಯುಕ್ತರು ತಿಳಿಸಿದ್ದಾರೆ.

ಖಾಸಗಿ ವ್ಯಕ್ತಿಗಳಿಂದ ಅವ್ಯವಹಾರ, ಅಕ್ರಮ ದೂರು

ನಗರದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂ`ವಾಗಿದ್ದು, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಗದಿಪಡಿಸದಿದ್ದುದರಿಂದ, ಸದರಿ ಘಟಕಗಳನ್ನು ಕೆಲವು ಖಾಸಗಿ ವ್ಯಕ್ತಿಗಳು ಸ್ವಂತ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಬೆಸ್ಕಾಂಗೆ ವಿದ್ಯುತ್ ಶುಲ್ಕ ನೀಡದೆ ಬಾಕಿ ಉಳಿಸಿಕೊಂಡುಬಂದಿದ್ದರು. ಸುಮಾರು 8ಲಕ್ಷ ರೂ.ಗಳಿಗೂ ಮೀರಿ ವಿದ್ಯುತ್ ಬಿಲ್ ಬಾಕಿ ಇತ್ತು.

ಈ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ಅಂತಿಮವಾಗಿ ಈ ಘಟಕಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ನಿಲುವು ತೆಗೆದುಕೊಂಡು ಕಾರ್ಯೋನ್ಮುಖರಾದರು. ಈ ಘಟಕಗಳು ಕಾನೂನು ಬದ್ಧವಾಗಿ ಮಹಾನಗರ ಪಾಲಿಕೆಗೂ ಹಸ್ತಾಂತರ ಆಗಿರಲಿಲ್ಲ. ಆದರೆ ವಿದ್ಯುತ್ ಬಿಲ್ ಅನ್ನು ಆಯುಕ್ತರ ಹೆಸರಿನಲ್ಲಿ ಕೆಲವರು ಪಾವತಿಸುತ್ತಿದ್ದುದು ಕಂಡುಬಂದಿತು. ವಿದ್ಯುತ್ ಬಿಲ್ ಎಂಬುದು ಪಾಲಿಕೆ ಪಾಲಿಗೆ ಹೊರೆಯಾಗಿತ್ತು. ಇದಲ್ಲದೆ ಈ ಘಟಕಗಳಲ್ಲಿ ಅಕ್ರಮ, ಅವ್ಯವಹಾರ ಆಗುತ್ತಿದೆಯೆಂಬ ಸಾರ್ವಜನಿಕರ ದೂರುಗಳೂ ದಾಖಲಾದವು.

ಲೋಕಾಯುಕ್ತದಿಂದ, ಮುಖ್ಯಮಂತ್ರಿ ಕಚೇರಿಯಿಂದ, ರಾಜ್ಯಪಾಲರಿಂದ ಪತ್ರಗಳು ಪಾಲಿಕೆಗೆ ಬಂದವು. ಕೆಲವು ಖಾಸಗಿ ವ್ಯಕ್ತಿಗಳೂ ಅನಧಿಕೃತವಾಗಿ ಇವುಗಳನ್ನು ತಮ್ಮ ಸುಪರ್ದಿನಲ್ಲಿಟ್ಟುಕೊಂಡು ಮನಬಂದಂತೆ ದರ ನಿಗದಿಪಡಿಸಿಕೊಂಡು ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದರೆಂಬ ದೂರುಗಳೂ ಕೇಳಿಬಂದವು. ಇವೆಲ್ಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸರ್ಕಾರಿ ನಿಯಮಾನುಸಾರ ಕನಿಷ್ಟ ದರದಲ್ಲಿ ಶುದ್ಧ ಕುಡಿಯುವ ನೀರನ್ನು ದೊರಕಿಸುವ ಉzಶದಿಂದ ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರು ನಗರದ ೨೧ ಘಟಕಗಳನ್ನು ಪಾಲಿಕೆಯ ವಶಕ್ಕೆ ತೆಗೆದುಕೊಂಡಿದ್ದಾರೆ.

ಶಿರಾಗೇಟ್ (೨ ನೇ ವಾರ್ಡ್), ಭೀಮಸಂದ್ರ ಹಳೆ ಗ್ರಾಮ (೬ ನೇ ವಾರ್ಡ್), ದಿಬ್ಬೂರು ಬಸ್ ನಿಲ್ದಾಣ (೬ ನೇ ವಾರ್ಡ್), ಹೌಸಿಂಗ್ ಬೋರ್ಡ್ ಕಾಲೋನಿ (೯ ನೇ ವಾರ್ಡ್), ಮೆಳೆಕೋಟೆ (೧೧ ನೇ ವಾರ್ಡ್), ಕುರಿಪಾಳ್ಯ ಮುಖ್ಯರಸ್ತೆ (೧೩ ನೇ ವಾರ್ಡ್), ಜಗಜ್ಯೋತಿ ರಸ್ತೆ (೧೮ ನೇ ವಾರ್ಡ್), ಎನ್.ಆರ್.ಕಾಲೋನಿ ಸರ್ಕಾರಿ ಶಾಲೆ (೧೯ ನೇ ವಾರ್ಡ್), ಹನುಮಂತಪುರ ಉದ್ಯಾನ (೨೧ ನೇ ವಾರ್ಡ್), ಭಾರತಿ ನಗರ (೨೨ ನೇ ವಾರ್ಡ್), ಸತ್ಯಮಂಗಲ ಪಾಳ್ಯ (೨೩ ನೇ ವಾರ್ಡ್), ಜಗನ್ನಾಥಪುರ (೨೩ ನೇ ವಾರ್ಡ್), ಪುಟ್ಟಸ್ವಾಮಯ್ಯನ ಪಾಳ್ಯ (೨೩ ನೇ ವಾರ್ಡ್), ಸರ್ಕಾರಿ ಉರ್ದು ಶಾಲೆ (೨೪ ನೇ ವಾರ್ಡ್), ಚೆನ್ನಪ್ಪನ ಪಾಳ್ಯ (೨೪ ನೇ ವಾರ್ಡ್), ಮರಳೂರು ದಿಣ್ಣೆ ಮೊದಲನೇ ಕ್ರಾಸ್ (೨೯ ನೇ ವಾರ್ಡ್), ಎಚ್.ಎಂ.ಎಸ್.ಕಾಲೇಜು ಪಂಪ್ ಹೌಸ್ (೩೧ ನೇ ವಾರ್ಡ್), ಶೆಟ್ಟಿಹಳ್ಳಿ ದೇವಾಲಯದ ಬಳಿ (೩೨ ನೇ ವಾರ್ಡ್), ಚಂದ್ರಮೌಳೀಶ್ವರ ಬಡಾವಣೆ (೩೩ ನೇ ವಾರ್ಡ್), ಕ್ಯಾತಸಂದ್ರ ಶಾಲಾ ಮೈದಾನ (೩೩ ನೇ ವಾರ್ಡ್), ದೇವರಾಯಪಟ್ಟಣದ ಅಂಬೇಡ್ಕರ್ ` ಭವನದ ಹತ್ತಿರ (೩೫ ನೇ ವಾರ್ಡ್) – ಈ ಸ್ಥಳಗಳಲ್ಲಿದ್ದ ಘಟಕಗಳು ಇದೀಗ ಪಾಲಿಕೆಯ ವಶಕ್ಕೆ ಬಂದಿವೆ. ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಲಿಗೆ ಸೇರಿದ 12 ಘಟಕಗಳು, ಕೆ.ಆರ್.ಐ.ಡಿ.ಎಲ್.ಗೆ ಸೇರಿದ 2 ಘಟಕಗಳು, ಶಾಸಕರ ನಿಧಿಯಿಂದ ಸ್ಥಾಪಿಸಿದ್ದ ಒಂದು ಘಟಕ, ಸಂಸದರ ನಿಧಿಯಿಂದ ಸ್ಥಾಪಿಸಿದ್ದ ಐದು ಘಟಕಗಳು ಮತ್ತು ಪಾಲಿಕೆಗೆ ಸೇರಿದ 2 ಘಟಕಗಳು ಇದರಲ್ಲಿ ಸೇರಿವೆ.

ವಾಗ್ವಾದ, ಘಟಕಕ್ಕೆ ಹಾನಿ

ನಗರದ ಉಪ್ಪಾರಹಳ್ಳಿ ಮುಖ್ಯರಸ್ತೆಯಲ್ಲಿರುವ ೨೪ ನೇ ವಾರ್ಡ್ ವ್ಯಾಪ್ತಿಯ ನೀರಿನ ಘಟಕವನ್ನು ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರು ವಶಪಡಿಸಿಕೊಳ್ಳಲು ತೆರಳಿದ್ದಾಗ ಅಲ್ಲಿಗೆ ಬಂದ ಮಾಜಿ ಕಾರ್ಪೊರೇಟರ್ ಒಬ್ಬರ ಮಗ 0ಆಯುಕ್ತರೊಡನೆ ವಾಗ್ವಾದಕ್ಕಿಳಿದಿದ್ದಾರೆ. ಕೋಪಗೊಂಡ ಆಯುಕ್ತರು “ಮಾಜಿ ಕಾರ್ಪೊರೇಟರ್ ಮಗ ಅಂದರೆ ಕೊಂಬಿದೆಯಾ?” ಎಂದು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಪೊಲೀಸರನ್ನು ಕರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಪ್ರಸಂಗ ಜರುಗಿದೆ. ಈ ಘಟನೆ ಕುರಿತ ವಿಡಿಯೋ ಬಹಿರಂಗವಾಗಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಇದಲ್ಲದೆ ನಗರದ 13 ನೇ ವಾರ್ಡ್ ವ್ಯಾಪ್ತಿಯ ಕುರಿಪಾಳ್ಯದಲ್ಲಿ ನೀರನ ಘಟಕವನ್ನು ಆಯುಕ್ತರು ಪಾಲಿಕೆಯ ವಶಕ್ಕೆ ಪಡೆದುಕೊಂಡ ಬಳಿಕ ಸಂಜೆ ಇದ್ದಕ್ಕಿದ್ದಂತೆ ಕೆಲವರು ಅಲ್ಲಿಗೆ ತೆರಳಿ ಘಟಕದ ಕೆಲವು ಉಪಕರಣಗಳನ್ನು ಹಾನಿಗೊಳಿಸಿದ ಘಟನೆ ನಡೆದಿದೆಯೆಂದು ಗೊತ್ತಾಗಿದೆ. ಆದರೆ ಪಾಲಿಕೆ ಸಿಬ್ಬಂದಿ ಸದರಿ ಘಟಕವನ್ನು ಕ್ಷಿಪ್ರಗತಿಯಲ್ಲಿ ದುರಸ್ತಿಗೊಳಿಸಿ, ಸಾರ್ವಜನಿಕರಿಗೆ ನೀರು ದೊರಕುವಂತೆ ಮಾಡಿದ್ದಾರೆಂಬುದು ಪಾಲಿಕೆಯ ತುಂಬ ದೊಡ್ಡ ಸುದ್ದಿಯಾಗಿದೆ.

ನಿರ್ವಹಣೆಯೇ ಇರಲಿಲ್ಲ!

ಪಾಲಿಕೆಯ ಅಧಿಕಾರಿಗಳು ನಗರದ 21 ನೀರಿನ ಘಟಕಗಳನ್ನು ಪಾಲಿಕೆಯ ವಶಕ್ಕೆ ತೆಗೆದುಕೊಳ್ಳುವ ಸಂದ`ದಲ್ಲಿ ಅನೇಕ ಘಟಕಗಳಲ್ಲಿ ನೀರನ್ನು ಶುದ್ಧಿಗೊಳಿಸುವ ಯಂತ್ರೋಪಕರಣಗಳನ್ನು ಶುದ್ಧಿಗೊಳಿಸದಿರುವುದು ಹಾಗೂ ಅವುಗಳಲ್ಲಿ ಅಶುದ್ಧ ನೀರೇ ವಿತರಣೆಯಾಗುತ್ತಿತ್ತೆಂಬ ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದಿದ್ದಾಗಿ ತಿಳಿದುಬಂದಿದೆ. ಇವೆಲ್ಲವನ್ನೂ ಗಮನಿಸಿದ ಪಾಲಿಕೆಯ ಅಧಿಕಾರಿಗಳು ಈ ಘಟಕಗಳಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಬೇಕಾಗುವ ಕ್ರಮಗಳನ್ನು ಕೈಗೊಳ್ಳತೊಡಗಿದ್ದಾರೆಂದು ಮೂಲಗಳು ಹೇಳಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link