ಲೋಕಸಭಾ ಚುನಾವಣೆ: ನೀತಿ ಸಂಹಿತೆ ಇಂದಿಗೆ ಅಂತ್ಯ

ತುಮಕೂರು:

      ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈವರೆಗೆ ಅನುಷ್ಠಾನದಲ್ಲಿದ್ದ ಚುನಾವಣಾ ಮಾದರಿ ನೀತಿ ಸಂಹಿತೆಯು ಇಂದಿಗೆ ಅಂತ್ಯವಾಗಲಿದೆ.

        ಮಾರ್ಚ್ 10 ರಂದು ಚುನಾವಣೆಗಳು ಘೋಷಣೆಯಾಗಿ ಅಂದಿನಿಂದಲೇ ರಾಷ್ಟ್ರಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿತ್ತು. 7ನೇ ಸುತ್ತಿನ ಮತದಾನ ಮುಗಿದು ಮೇ 23 ರಂದು ಮತ ಎಣಿಕೆ ನಡೆಯಿತು. ಈ ಹಿನ್ನೆಲೆಯಲ್ಲಿ ಬಹಳ ಸುದೀರ್ಘ ಅವಧಿಗೆ ನೀತಿ ಸಂಹಿತೆ ಜಾರಿ ಇದ್ದ ಕಾರಣ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಆಚರಣೆಗಳು, ಸಭೆಗಳು ನಡೆಯಲು ಸಾಧ್ಯವಾಗಿರಲಿಲ್ಲ.

        ಚುನಾವಣೆ ಮುಗಿದರೂ ಜನಪ್ರತಿನಿಧಿಗಳು ನೀತಿ ಸಂಹಿತೆಯ ಅಡಿಯಲ್ಲಿಯೇ ಕಾರ್ಯನಿರ್ವಹಿಸಬೇಕಿದ್ದರಿಂದ ಸಭೆ ಸಮಾರಂಭಗಳಿಂದ ದೂರವೇ ಉಳಿಯುವಂತಾಯಿತು. ಸರ್ಕಾರಿ ಕಛೇರಿಗಳಲ್ಲಿ ಅಧಿಕಾರಿ ಮತ್ತು ನೌಕರ ವರ್ಗ ಚುನಾವಣೆಯ ಕೆಲಸ ಕಾರ್ಯದಲ್ಲಿ ನಿರತವಾಗಿದ್ದರಿಂದ ಕಡತಗಳು ಅಲ್ಲಲ್ಲಿಯೇ ಉಳಿದು ಬಿಟ್ಟವು. ಸಾರ್ವಜನಿಕರು ಕಚೇರಿಗಳಿಗೆ ಹೋದರೆ ಚುನಾವಣೆಯ ಗುಮ್ಮವನ್ನು ತೋರಿಸಿ ಸಲೀಸಾಗಿ ಜಾರಿಕೊಳ್ಳುತ್ತಿದ್ದರು.

        ಒಂದು ಕಡೆ ಜನಪ್ರತಿನಿಧಿಗಳು ಚುನಾವಣೆಯ ನೀತಿ ಸಂಹಿತೆ ಇದೆ, ನಾವ್ಯಾರೂ ಮಾತನಾಡುವಂತಿಲ್ಲ, ಅಧಿಕಾರಿಗಳೊಂದಿಗೂ ನಾವು ಚರ್ಚಿಸುವಂತಿಲ್ಲ ಎಂದೆಲ್ಲಾ ಹೇಳಿ ತಪ್ಪಿಸಿಕೊಂಡರೆ, ಅಧಿಕಾರಿ ನೌಕರ ವರ್ಗದವರು ಚುನಾವಣಾ ಆಯೋಗದ ಕಡೆ ಬೊಟ್ಟು ಮಾಡುತ್ತಿದ್ದರು. ಹೀಗಾಗಿ ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ಹಿಡಿದು ಇಲ್ಲಿಯತನಕ ಅದೆಷ್ಟೋ ಕೆಲಸಕಾರ್ಯಗಳು ಸ್ಥಗಿತಗೊಂಡಿವೆ.

        ಚುನಾವಣಾ ಕಾರ್ಯಗಳಲ್ಲಿ ನಿರತರಾಗಿರುವವರು ಹಗಲು ರಾತ್ರಿ ದುಡಿದಿದ್ದಾರೆ. ಎಷ್ಟೋ ಮಂದಿ ಊಟೋಪಚಾರವನ್ನೂ ಸರಿಯಾಗಿ ಮಾಡಲಾಗಿಲ್ಲ. ಅಂತಹವರೂ ಇದ್ದಾರೆ. ಆದರೆ ಇವರಿಗಿಂತ ಹೆಚ್ಚಾಗಿ ಸಾರ್ವಜನಿಕರನ್ನು ಕಚೇರಿಗಳಿಗೆ ಬರದಂತೆ ನೋಡಿಕೊಳ್ಳುವ, ಬಂದರೂ ಸಬೂಬು ಹೇಳಿ ಸಾಗಾ ಹಾಕುವ ಜಾಣ್ಮೆಯ ನೌಕರ ವರ್ಗವೇ ಈ ಅವಧಿಯಲ್ಲಿ ಹೆಚ್ಚಾಗಿ ಕಂಡುಬಂದಿತು.

       ಅಧಿಕಾರಿ – ನೌಕರರ ಈ ಧೋರಣೆಯಿಂದಲೇ ಕಚೇರಿಗಳತ್ತ ಸಾರ್ವಜನಿಕರು ತಲೆಹಾಕಲಿಲ್ಲ. ಚುನಾವಣೆ ಮುಗಿಯುವವರೆಗೆ ಕಚೇರಿಗಳತ್ತ ಹೋಗಬಾರದಂತೆ ಎಂಬ ಅಲಿಖಿತ ನಿಯಮವೊಂದು ಸಾರ್ವಜನಿಕ ವಲಯದಲ್ಲಿ ಬೇರೂರುಬಿಟ್ಟಿತ್ತು. ಇದು ಮೊದಲೇನಲ್ಲ. ಚುನಾವಣೆಗಳು ಬಂದಾಗಲೆಲ್ಲಾ ಇದೇ ರೀತಿಯ ವಾತಾವರಣ ಸೃಷ್ಟಿಯಾಗುತ್ತದೆ.

       2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ರಾಷ್ಟ್ರಾದ್ಯಂತ ಚುನಾವಣೆಗಳು ನಡೆದಾಗ ಕರ್ನಾಟಕದ ಜನಪ್ರತಿನಿಧಿಗಳು ಆಯೋಗಕ್ಕೆ ಮನವಿ ಸಲ್ಲಿಸಿ ನೀತಿ ಸಂಹಿತೆ ಸಡಿಲಿಸುವಂತೆ ಕೋರಿದ್ದರು. ಆಯೋಗವು ಅದನ್ನು ಮನ್ನಿಸಿ ಸಭೆ ಸಮಾರಂಭಗಳನ್ನು ನಡೆಸಲು ಅನುಮತಿ ನೀಡಿತ್ತು. ಅಂದರೆ, ಈ ಭಾಗಗಳಲ್ಲಿ ಈಗಾಗಲೇ ಚುನಾವಣೆಗಳು ಮುಗಿದಿರುವುದರಿಂದ ನೀತಿ ಸಂಹಿತೆ ಸಡಿಲಿಕೆ ಮಾಡುವುದರಲ್ಲಿ ಯಾವುದೇ ಅಭ್ಯಂತರವಿಲ್ಲ ಎಂಬುದು ಮನದಟ್ಟಾಗಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ.

        ಭೀಕರ ಬರಗಾಲದ ಪರಿಸ್ಥಿತಿಯಿಂದಾಗಿ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಸಂಕಷ್ಟ ತಲೆದೋರಿತ್ತು. ತುಮಕೂರು ಜಿಲ್ಲೆಯಲ್ಲಿಯೂ ನೀರಿನ ಹಾಹಾಕಾರ ಹೆಚ್ಚುತ್ತಲೇ ಹೋಯಿತು. ಆಗತಾನೆ ಉರಿಬಿಸಿಲು ಹೆಚ್ಚುತ್ತಾ ಬೇಸಿಗೆಯ ಧಗೆ ಇಮ್ಮಡಿಸಿದ ಕಾಲಕ್ಕೆ ಚುನಾವಣೆ ಘೋಷಣೆಯಾಗಿದ್ದರಿಂದ ಅಂದಿನಿಂದ ಈವರೆಗೂ ಜನತೆಯಂತೂ ನರಳುತ್ತಲೇ ಬಂದಿದ್ದಾರೆ. ಜನಜಾನುವಾರುಗಳು ಬರಗಾಲಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ. ಕುಡಿಯಲು ನೀರು ಸಿಗದೆ ದೂರದ ಬಾವಿಗಳಿಂದ ನೀರು ತಂದಿದ್ದಾರೆ. ಜಾನುವಾರುಗಳನ್ನು ಸಂರಕ್ಷಿಸಿಕೊಳ್ಳಲು ಪರದಾಡಿದ್ದಾರೆ.

         ಕೆರೆಕಟ್ಟೆಗಳು ಬತ್ತಿ ಹೋಗಿ ಅಂತರ್ಜಲವೂ ಕ್ಷೀಣಿಸಿದ ಪರಿಣಾಮ ಅಡಕೆ, ತೆಂಗುಗಳನ್ನು ಉಳಿಸಿಕೊಳ್ಳುವುದೇ ರೈತಾಪಿ ವರ್ಗಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿತು. ಬೋರ್‍ವೆಲ್‍ಗಳನ್ನು ಕೊರೆಸಿದರೂ ಅದರಲ್ಲಿ ನೀರು ಸಿಗದೆ ರೈತರು ಆತಂಕಕ್ಕೆ ಒಳಗಾದರು. ಇದೆಲ್ಲ ಒಂದು ಕಡೆಯಾದರೆ ಕುಡಿಯುವ ನೀರಿನ ಸಮಸ್ಯೆಯಂತೂ ದಿನೇ ದಿನೇ ಬಿಗಡಾಯಿಸತೊಡಗಿತು.

        ಬರಗಾಲ ನಿರ್ವಹಣೆಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ, ನೀರಿನ ತೊಂದರೆ ಇರುವ ಊರುಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ವಿತರಿಸಲಾಗುವುದು ಎಂಬ ಹೇಳಿಕೆಗಳು ಅಧಿಕಾರಿಗಳಿಂದ ಬಂದವು. ಆದರೆ ನೀರೇ ಇಲ್ಲದ ಮೇಲೆ ಎಷ್ಟು ಟ್ಯಾಂಕರ್‍ಗಳನ್ನು ಎಷ್ಟು ದಿನ ಹೊಡೆಯಲು ಸಾಧ್ಯ? ಬರಗಾಲದ ಈ ಸಂಕಷ್ಟದಲ್ಲಿಯೇ ಚುನಾವಣೆಗಳು ಬಂದು ಹೋಗಿದ್ದರಿಂದ ನೊಂದ ಜನತೆ ಯಾರಿಗೆ ತಮ್ಮ ನೋವು ಹೇಳಿಕೊಳ್ಳುವುದು ಎಂಬ ಸಂಕಷ್ಟಕ್ಕೆ ಸಿಲುಕಿ ಹೋಯಿತು.

        ಇಂದು ನೀತಿ ಸಂಹಿತೆ ತೆರವಾಗುತ್ತಿದೆ. ತಿಂಗಳುಗಟ್ಟಲೆ ಸರ್ಕಾರಿ ಕಚೇರಿ ಕಾರ್ಯಗಳು ಚುನಾವಣೆಗೆ ಮೀಸಲಾಗಿದ್ದರಿಂದ ಇತರೆ ಕಾರ್ಯಗಳು ಸ್ಥಗಿತಗೊಂಡಿವೆ. ಸಾರ್ವಜನಿಕರು ಕಚೇರಿಗಳ ಬಾಗಿಲತ್ತಲೇ ಎದುರು ನೋಡುತ್ತಿದ್ದಾರೆ. ಎಲ್ಲೆಲ್ಲಿ ಯಾವ ಕೆಲಸಗಳಾಗಬೇಕು ಎಂಬುದರ ಬಗ್ಗೆ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಲಿ. ನಿರ್ಲಕ್ಷ್ಯ ಮಾಡುವ ಅಧಿಕಾರಿ ನೌಕರರ ವಿರುದ್ಧ ಚಾಟಿ ಏಟು ಬೀಸಲಿ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಕಚೇರಿ ಕಾರ್ಯಗಳ ಸುಲಲಿತ ನಿರ್ವಹಣೆಗೆ ಆದ್ಯತೆ ನೀಡುವಂತಾಗಲಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap