ಎಂ.ಜಿ. ರಸ್ತೆಯ ಮಹಾತ್ಮಾಗಾಂಧೀಜಿ ಪ್ರತಿಮೆಯನ್ನು ಸ್ಥಳಾಂತರಿಸಿ….!!!!

ಬೆಂಗಳೂರು

     ರಾಜ್ಯದ ಲಕ್ಷಾಂತರ ಹೋರಾಟಗಳಿಗೆ ಸಾಕ್ಷಿಯಾಗಿದ್ದ ನಗರದ ಎಂ.ಜಿ. ರಸ್ತೆಯ ರಾಷ್ಟ್ರಪಿತ ಮಹಾತ್ಮಾಗಾಂಧಿ ಪ್ರತಿಮೆ ಏಷ್ಯಾದ ಅತಿ ದೊಡ್ಡ ಮದ್ಯದ ಮಾಲ್ ಆಗಿರುವ “ಟಾನಿಕ್” ಎದುರು ಕುಬ್ಜವಾಗಿ ಕಾಣುತ್ತಿದ್ದು, ಗಾಂಧಿ ತತ್ವಾದರ್ಶಗಳ ರಕ್ಷಣೆಗಾಗಿ ಗಾಂಧೀಜಿ ಪ್ರತಿಮೆಯನ್ನು ಸ್ಥಳಾಂತರ ಮಾಡಿ ಎನ್ನುವ ವಿನೂತನ ಪ್ರತಿಭಟನೆ ನಗರದಲ್ಲಿಂದು ನಡೆಯಿತು.

    ಅತ್ಯಂತ ಪ್ರಭಾವಿಗಳ ಕೃಪಾಕಟಾಕ್ಷದಿಂದ ನಡೆಯುತ್ತಿರುವ ಟಾನಿಕ್ ಮದ್ಯದ ಮಳಿಗೆಯನ್ನು ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಮದ್ಯದ ಮಳಿಗೆಯನ್ನು ಆಡಳಿತ ನಡೆಸುತ್ತಿರುವವರು ರಕ್ಷಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಾಂಧೀಜಿ ಪುತ್ಥಳಿಯನ್ನೇ ಸ್ಥಳಾಂತರ ಮಾಡುವುದು ಸೂಕ್ತ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

   ಇಂಡಿಯನ್ ವೆಹಿಕಲ್ಸ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭನೆಗೆ ಕರ್ನಾಟಕ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬೆಂಬಲ ನೀಡಿದರು. ಪ್ರತಿಭಟನಾಕಾರರು ಹಿಡಿದಿದ್ದ ಭಿತ್ತಿ ಫಲಕಗಳು ಹೀಗಿದ್ದವು.

     ಏಷ್ಯಾದ ಅತಿ ದೊಡ್ಡ ಮದ್ಯದಂಗಡಿ ಮುಂದೆ ಗಾಂಧೀಜಿ ಪ್ರತಿಮೆ ಕುಬ್ಜವಾಗಿದ್ದು, ಕೂಡಲೇ ಪ್ರತಿಮೆ ಸ್ಥಳಾಂತರಿಸಿ”
” ಎಲ್ಲಾ ಕೆಡಕುಗಳಿಗೆ ಮೂಲ ಮದ್ಯ ಎಂದು ಜಗತ್ತಿಗೆ ಸಾರಿದ ಗಾಂಧೀಜಿ ಪ್ರತಿಮೆ ಮದ್ಯದಂಗಡಿ ಮುಂದೆ ಇರುವುದು ಸೂಕ್ತವಲ್ಲ.” ” ಗಾಂಧೀಜಿ ಪ್ರತಿಮೆ ಟಾನಿಕ್ ಮದ್ಯದಂಗಡಿ ಮುಂದೆ ಅಲ್ಲ. ಗಾಂಧೀ ಭವನಕ್ಕೆ ಸ್ಥಳಾಂತರಿಸಿ.”

     ಗಾಂಧೀಜಿ ಕೊಂದ ಗೋಡ್ಸೆ ಸಂಸ್ಕೃತಿಗೆ ಧಿಕ್ಕಾರ: ಗಾಂಧೀಜಿ ಪ್ರತಿಮೆ ಮುಂದೆ ಮದ್ಯದಂಗಡಿ ಸ್ಥಾಪಿಸಿ ಗಾಂಧೀಜಿಯನ್ನು ಪದೇ ಪದೇ ಕೊಲ್ಲಬೇಡಿ.” ಎನ್ನುವ ಘೋಷಣಾ ಫಲಕ ಹಿಡಿದು ಮದ್ಯದಂಗಡಿ ತೆರೆಯಲು ಅನುಮತಿ ನೀಡಿದ ಸರ್ಕಾರ, ಅಬಕಾರಿ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

      ಸುದ್ದಿಗಾರರ ಜತೆ ಮಾತನಾಡಿದ ಗಂಡಸಿ ಸದಾನಂದ ಸ್ವಾಮಿ, ಆಡಳಿತ ನಡೆಸುವವರು ಪಟ್ಟಭದ್ರಾ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದಿದ್ದು, ಇಂತಹ ಪರಿಸ್ಥಿತಿಯಲ್ಲಿ ಮದ್ಯದಂಗಡಿ ತೆರವುಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಅದಕ್ಕಾಗಿ ಗಾಂಧೀಜಿ ಪ್ರತಿಮೆಯನ್ನು ಸ್ಥಳಾಂತರಿಸುವ ಕಾಲ ಸನ್ನಿಹಿತವಾಗಿದೆ. ಗಾಂಧೀಜಿ ಅವರು ಹುತಾತ್ಮರಾದ ಜನವರಿ 30 ರಂದು ಅವರ ಪ್ರತಿಮೆಯನ್ನು ಸಹ ಸ್ಥಳಾಂತರಿಸುವುದು ಸೂಕ್ತ. ಏಷ್ಯಾದ ಅತಿ ದೊಡ್ಡ ಮದ್ಯದಂಗಡಿ ಟಾನಿಕ್ ಎಂಬ ಮಳಿಗೆ ಗಾಂಧೀಜಿ ಪ್ರತಿಮೆಗೆ ನೂರು ಅಡಿ ಸಮೀಪದಲ್ಲಿ ತಲೆ ಎತ್ತಿರುವುದು ನಮಗೆಲ್ಲಾ ಅತೀವ ನೋವುಂಟು ಮಾಡಿದೆ ಎಂದರು.

    ನಮ್ಮ ಚಾಲಕರ ಸಂಘಕ್ಕೆ ಗಾಂಧೀಜಿ ಸಾರಥಿ ಇದ್ದಂತೆ. ಗಾಂಧೀಜಿ ಪ್ರೇರಣೆಯಿಂದ ಲಕ್ಷಾಂತರ ಚಾಲಕರು ಮದ್ಯದ ಚಟದಿಂದ ಮುಕ್ತರಾಗಿದ್ದಾರೆ. ಇದೇ ಕಾರಣಕ್ಕಾಗಿ ಗಾಂಧೀಜಿ ಮಹಾತ್ಮಾನನ್ನು ಈ ಎಲ್ಲಾ ಕುಟುಂಬಗಳು ಆರಾಧಿಸುತ್ತವೆ. ಆದರೆ ನಮ್ಮ ಪ್ರಧಾನ ಚಾಲಕ ಗಾಂಧೀಜಿ ಪ್ರತಿಮೆ ಮದ್ಯದಂಗಡಿ ಮುಂದೆ ಇರುವುದು ನಮಗೆ ಅತೀವ ನೋವುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗಾಂಧೀಜಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಅವರಂತಹ ಶಕ್ತಿಗಳು ಕೇಕೆ ಹಾಕಿ ನಗುತ್ತಿರುವ ಈ ಸಂದರ್ಭದಲ್ಲಿ ಗಾಂಧೀಜಿ ತತ್ವಗಳು ಮರೆಯಾಗುತ್ತಿವೆ. ವಿಶೇಷವೆಂದರೆ ಮದ್ಯಪಾನದ ದುಷ್ಪರಿಣಾಮಗಳ ವಿರುದ್ಧ ಹೋರಾಟ ಮಾಡಿದ, ಸಾಮಾಜಿಕ ಜಾಗೃತಿಮೂಡಿಸಿದ, ಎಲ್ಲಾ ಕೆಡಕುಗಳ ಮೂಲ ಮದ್ಯ ಎಂದು ಜಗತ್ತಿಗೆ ಸಾರಿದ ಮಹಾನ್ ಚೇತನ ಗಾಂಧೀಜಿ. ಆದರೆ ಅವರ ಪ್ರತಿಮೆ ಮುಂಭಾಗ ಏಷ್ಯಾದ ಅತಿ ದೊಡ್ಡ ಮದ್ಯದ ಮಳಿಗೆ ತಲೆ ಎತ್ತಿ ನಿಂತಿರುವುದು ನಾವೆಲ್ಲರೂ ನಾಚಿಯಿಂದ ತಲೆ ತಗ್ಗಿಸುವಂತಾಗಿದೆ ಎಂದರು.

    ಪಾನಪ್ರಿಯರು ಗಾಂಧೀಜಿ ಪ್ರತಿಮೆ ಮುಂದಿನಿಂದ ಪ್ರತಿನಿತ್ಯ ಹಾದು ಹೋಗುತ್ತಾರೆ. ಬೃಹತ್ ಮಾರಾಟ ಮಾಲ್ ಆಗಿರುವ ಟಾನಿಕ್ ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿವಿಧ ಹೆಸರಿನ ವೈನ್ ಗಳು, ವಿಸ್ಕಿ, ಬಗೆಬಗೆಯ ಬೀರ್ ಗಳು, ದೇಶ ವಿದೇಶಗಳ ಬೆಲೆ ಬಾಳುವ ಮದ್ಯ ಖರೀದಿಸುವ ಜನ ಗಾಂಧೀಜಿ ಪುತ್ಥಳಿ ನೋಡಿ ಅವಹೇಳನ ಮಾಡುತ್ತಾ, ಕೇಕೇ ಹಾಕಿ ನಗುತ್ತಿರುವುದು ನಮಗೆ ಆಕ್ರೋಶ ಉಂಟು ಮಾಡಿದೆ ಎಂದು ಗಂಡಸಿ ಸದಾನಂದ ಸ್ವಾಮಿ ಹೇಳಿದರು.

    ಇಲ್ಲಿ ಮದ್ಯದಂಗಡಿ ತಲೆ ಎತ್ತಲು ಅನುಮತಿ ನೀಡುವ ಮುನ್ನ, ಬಿಬಿಎಂಪಿ, ಅಬಕಾರಿ ಇಲಾಖೆ, ವಿವಿಧ ಇಲಾಖೆಗಳು ಗಾಂಧೀಜಿ ಪ್ರತಿಮೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಇನ್ನು ಇಲ್ಲಿನ ಮದ್ಯದಂಗಡಿಯನ್ನು ತೆರವುಗೊಳಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ. ಹೀಗಾಗಿ ಗಾಂಧೀಜಿ ಪುತ್ಥಳಿಯನ್ನೇ ಸ್ಥಳಾಂತರ ಮಾಡುವುದು ಸೂಕ್ತ ಎನಿಸುತ್ತಿದೆ. ಆಡಳಿತ ನಡೆಸುವ ಸರ್ಕಾರದ ಅವಕೃಪೆಗೆ ಪಾತ್ರವಾಗಿರುವ ಗಾಂಧೀಜಿ ಪ್ರತಿಮೆ ಕೇವಲ ಸಾಂಕೇತಿಕವಾಗಿ ಇರುವುದು ಸೂಕ್ತವಲ್ಲ. ಗಾಂಧೀಜಿ ಹತ್ಯೆಯಾದ ದಿನ ಅವರ ಪ್ರತಿಮೆಯನ್ನು ಸಹ ಸ್ಥಳಾಂತರಿಸುವುದು ಅತ್ಯಗತ್ಯ. ಪ್ರತಿಮೆ ಇಲ್ಲೇ ಇದ್ದರೆ ಒಮ್ಮೆ ಹತ್ಯೆಯಾದ ಗಾಂಧೀಜಿಯನ್ನು ನಮ್ಮ ಕಣ್ಣೆದುರು ಪ್ರತಿನಿತ್ಯ ಹತ್ಯೆ ಮಾಡಿದಂತೆ ಭಾಸವಾಗುತ್ತದೆ. ದಯವಿಟ್ಟು ಇಲ್ಲಿನ ಗಾಂಧೀಜಿ ಪ್ರತಿಮೆಯನ್ನು ನಗರದ ಕುಮಾರ ಕೃಪ ರಸ್ತೆಯಲ್ಲಿರುವ ಗಾಂಧಿ ಭವನ ಅಥವಾ ವಿಧಾನಸೌಧಕ್ಕೆ ಸ್ಥಳಾಂತರಿಸಿ. ಈ ಮೂಲಕ ನಮ್ಮ ರಾಷ್ಟ್ರಪಿತನನ್ನು ರಕ್ಷಿಸಿ ಎಂಬುದಷ್ಟೇ ನಮ್ಮ ಕಳಕಳಿಯ ಮನವಿ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap