ಬಳ್ಳಾರಿ
ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ದುಃಸ್ಥಿತಿ ಆ ದೇವರಿಗೇ ಪ್ರೀತಿ ಎನ್ನುವಂತೆ ಆಗಿದೆ. ಯಾವುದೇ ಗ್ರಾಮಕ್ಕೆ ತೆರಳಿದರೂ ಅಲ್ಲಿನ ಶಾಲೆಯ ಕಟ್ಟಡಗಳು, ಗೋಡೆಗಳು, ಬೋರ್ಡುಗಳು ದಯನೀಯ ಸ್ಥಿತಿಗೆ ತಲುಪಿರುತ್ತವೆ ಎನ್ನುವುದಕ್ಕೆ ತಾಲೂಕಿನ ಸಿರಿವಾರ ಗ್ರಾಮದ ಸರ್ಕಾರಿ ಶಾಲೆ ಒಂದು ತಾಜಾ ಉದಾಹರಣೆ.
ಸಿರಿವಾರ ಗ್ರಾಮದಲ್ಲಿನ ಸರ್ಕಾರಿ ಶಾಲೆಗಳ ಮಕ್ಕಳ ಜೀವಕ್ಕೆ ಇಲ್ಲಿ ಬೆಲೆ ಇಲ್ಲ. 800 ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಕಟ್ಟಡಗಳು, ಗೋಡೆಗಳು ಮತ್ತು ಮೇಲ್ಛಾವಣೆ ಸಂಪೂರ್ಣ ದಯನೀಯ ಸ್ಥಿತಿಗೆ ತಲುಪಿವೆ. ಈ ಕುರಿತು ಶಾಲಾ ಮುಖ್ಯೋಪಾಧ್ಯಾಯರು ಅನೇಕ ಬಾರಿ ಇಲಾಖೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರು ಸಹ ಈ ಶಾಲೆಯ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕೇವಲ ಭರವಸೆಯಾಗಿ ಉಳಿದಿದೆಯಷ್ಟೇ.
ಬಾಗಿಲು, ಗೇಟುಗಳು ಸಹ ಹಾಳಾಗಿ ಹೋಗಿವೆ. ಯಥೇಚ್ಛ ತ್ಯಾಜ್ಯ ಸಂಗ್ರಹಗೊಂಡು ವಿಷ ಜಂತುಗಳು ಸಹ ಕಾಣಸಿಗುತ್ತಿವೆ. ಇದರಿಂದ ಶಾಲಾ ಮಕ್ಕಳು ಭಯಸ್ಥರಾಗಿದ್ದಾರೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಶಾಲೆಯ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಉಗ್ರವಾದ ಹೋರಾಟ ಮಾಡುವುದಾಗಿ ಸಿರಿವಾರ ಗ್ರಾಮದ ರುದ್ರಗೌಡ ಅವರು ಎಚ್ಚರಿಕೆ ನೀಡಿದ್ದಾರೆ.