ಮಧುಗಿರಿ
ದಲಿತ ಯುವತಿ ಮೇಲೆ ಆತ್ಯಾಚಾರ ಎಸಗಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಕಚೇರಿಯ ಸಿಬ್ಬಂದಿ ಸುದರ್ಶನ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಉತ್ತರಪ್ರದೇಶದ ಹತ್ರಾಸ್ ಗ್ರಾಮದ ಮನಿಷಾ ವಾಲ್ಮೀಕಿ ಎನ್ನುವ ದಲಿತ ಯುವತಿಯ ಮೇಲೆ ಗ್ರಾಮದ ಕೆಲ ಸವರ್ಣೀಯರಾದ ನಾಲ್ಕು ಜನ ಪುಂಡರು ಆತ್ಯಾಚಾರ ಮಾಡಿ, ಕೊಲೆ ಮಾಡುವ ಪ್ರಯತ್ನದಲ್ಲಿದ್ದಾಗ ಆ ಯುವತಿಯ ಬೆನ್ನು ಮೂಳೆ ಮತ್ತು ಕೈ ಕಾಲು ಮೂಳೆ ಮುರಿದಿದ್ದು, ಕೆಲವು ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿರುತ್ತಾರೆ.
ಸವರ್ಣೀಯರು ದಲಿತ ಯುವತಿಯ ಮೇಲೆ ಆತ್ಯಾಚಾರ ಎಸಗಿದ್ದಾರೆ. ಮನಿಷಾ ವಾಲ್ಮೀಕಿ ಪ್ರಕರಣವನ್ನು ಉತ್ತರ ಪ್ರದೇಶದ ರಾಜ್ಯ ಸರ್ಕಾರವು ಆರೋಪಿಗಳನ್ನು ರಕ್ಷಿಸಲು ಮತ್ತು ಪ್ರಕರಣವನ್ನು ಮುಚ್ಚಿ ಹಾಕುವ ಹಾದಿಯಲ್ಲಿ ಯುವತಿಯ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸದೆ ಮುಂಜಾನೆಯ ವೇಳೆಯಲ್ಲಿ ಪೊಲಿಸರ ಮುಂದಾಳತ್ವದಲ್ಲಿ ಯುವತಿಯ ಕುಟುಂಬವನ್ನು ಸಂಪೂರ್ಣ ಗೃಹಬಂಧನದಲ್ಲಿರಿಸಿ, ಮೃತ ದೇಹವನ್ನು ಸುಟ್ಟು ಹಾಕಿದ್ದು, ಶವ ಸಂಸ್ಕಾರಕ್ಕೂ ಕುಟುಂಬದವರಿಗೆ ಅವಕಾಶ ನೀಡದಿರುವುದು ಖಂಡನೀಯ.
ಉತ್ತರಪ್ರದೇಶದ ರಾಜ್ಯ ಸರ್ಕಾರವು ಮೃತ ಯುವತಿಯ ಕುಟುಂಬದವರನ್ನು ಯಾರೂ ಭೇಟಿ ಮಾಡಲು ಅವಕಾಶ ನೀಡದೇ ಅಲ್ಲಿನ ಪೋಲಿಸರು ಗೂಂಡಾ ಪ್ರವೃತ್ತಿಯನ್ನು ನಡೆಸುತ್ತಿದ್ದಾರೆ. ತಕ್ಷಣವೇ ಮನಿಷಾಳ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಆತ್ಯಾಚಾರ ಎಸಗಿದ ಆರೋಪಿಗಳಿಗೆ ಕಾನೂನಿನ ಪ್ರಕಾರ ಗಲ್ಲು ಶಿಕ್ಷೆ ನೀಡಬೇಕೆಂದು ಈ ಮೂಲಕ ಉತ್ತರಪ್ರದೇಶದ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಗರಣಿ ಗಿರೀಶ್, ತಾಲ್ಲೂಕು ದಲಿತಪರ ಒಕ್ಕೂಟಗಳ ಅಧ್ಯಕ್ಷ ಡಿ.ಟಿ.ಸಂಜೀವ ಮೂರ್ತಿ, ಸಿದ್ದಾಪುರ ರಂಗಶಾಮಣ್ಣ, ವಾಲ್ಮೀಕಿ ಯುವ ಸೇನೆಯ ಚಿರಂಜೀವಿ, ಮಿಲ್ ರಾಜಣ್ಣ, ಶಂಕರನಾರಾಯಣ, ಉಪ್ಪಾರಹಳ್ಳಿ ಶಿವಕುಮಾರ್, ದೊಡ್ಡೇರಿ ಶಿವಣ್ಣ, ಗಂಗರಾಜು, ಮುಖಂಡರಾದ ಕರವೇ ಶಿವಕುಮಾರ್, ದಾಸರಹಳ್ಳಿ ರಾಜು, ಆದಿಜಾಂಬವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಮಹರಾಜು, ಕೃಷ್ಣ, ತಿಮ್ಮರಾಜು ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
