ತುಮಕೂರು
ತುಮಕೂರು ನಗರದ ಶಿರಾಗೇಟ್ ವೃತ್ತದಲ್ಲಿರುವ ಶ್ರೀ ಕನಕದಾಸರ ಪ್ರತಿಮೆಯನ್ನು ಪಕ್ಕದಲ್ಲಿರುವ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ, ಈ ವೃತ್ತವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಎಂದು ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು ಆಗ್ರಹಪಡಿಸಿದ್ದಾರೆ.
ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ತುಮಕೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಶ್ರೀ ಕನಕದಾಸರ ಪ್ರತಿಮೆಯನ್ನು ಅಲ್ಲೇ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್ ಹತ್ತಿರದ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಪಾಲಿಕೆಯ ಆಡಳಿತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಗೊಂದಲದ ಗೂಡು
ಪ್ರಸ್ತುತ ಶಿರಾಗೇಟ್ ವೃತ್ತವು ಗೊಂದಲದ ಗೂಡಾಗಿದೆ. ರಾಷ್ಟ್ರೀಯ ಹೆದ್ದಾರಿ, ಮಧುಗಿರಿ ಕಡೆಗೆ ತೆರಳುವ ರಾಜ್ಯ ಹೆದ್ದಾರಿ ಸೇರಿದಂತೆ ಏಳೆಂಟು ರಸ್ತೆಗಳು ಈ ವೃತ್ತಕ್ಕೆ ಸಂಪರ್ಕ ಹೊಂದಿವೆ. ದಿನಪೂರ್ತಿ ಸಾವಿರಾರು ವಾಹನಗಳು ಈ ವೃತ್ತದ ಮೂಲಕ ಸಂಚರಿಸುತ್ತವೆ. ಯಾವುದು ಯಾವ ದಿಕ್ಕಿನಿಂದ ಬರುತ್ತವೆಂಬುದೇ ಗೊತ್ತಾಗದೆ, ವಾಹನ ಚಾಲಕರು/ಸವಾರರು ಮತ್ತು ಪಾದಚಾರಿಗಳು ಇಲ್ಲಿ ಅಪಾಯವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಇಲ್ಲಿ ದೊಡ್ಡದಾದ ವೃತ್ತವನ್ನು ನಿರ್ಮಿಸಿ, ಇಡೀ ವೃತ್ತವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.
ಇಷ್ಟೆಲ್ಲ ಪ್ರಾಮುಖ್ಯತೆ ಇದ್ದರೂ ಇಲ್ಲಿ ಸಿಗ್ನಲ್ ಲೈಟ್ ವ್ಯವಸ್ಥೆಯೂ ಸೂಕ್ತವಾಗಿಲ್ಲ. ಆದ್ದರಿಂದ ಇಲ್ಲಿ ವೃತ್ತದ ಅಭಿವೃದ್ಧಿಯೊಡನೆ ಸಿಗ್ನಲ್ ಲೈಟ್‍ಗಳನ್ನು ಅಳವಡಿಸಬೇಕು ಎಂದು ಸಲಹೆಯಿತ್ತರು.
ಕಗ್ಗತ್ತಲ ರಸ್ತೆ
ಶಿರಾಗೇಟ್ ವೃತ್ತದಿಂದ ಹಿಡಿದು ರಿಮ್ ಆಸ್ಪತ್ರೆಯವರೆಗೆ ರಸ್ತೆಯ ಉದ್ದಕ್ಕೂ ಬೀದಿದೀಪಗಳೇ ಇಲ್ಲದೆ, ಸಂಜೆಯ ಬಳಿಕ ಕಾರ್ಗತ್ತಲು ಆವರಿಸಿರುತ್ತದೆ. ದಾರಿಹೋಕರು ದಿನವೂ ಪ್ರಾಣಾಪಾಯನ್ನು ಎದುರಿಸುವಂತಾಗುತ್ತಿದೆ. ಕತ್ತಲು ತುಂಬಿರುವುದರಿಂದ ಅನೈತಿಕ ಚಟುವಟಿಕೆಗಳು, ಕಳ್ಳತನಗಳು ಸಹ ನಡೆಯುವ ಆತಂಕವಿದೆ.
ರಾಷ್ಟ್ರೀಯ ಹೆದ್ದಾರಿಯವರು ಇಲ್ಲಿ 12 ವಿದ್ಯುತ್ ಕಂಬಗಳನ್ನು ರಸ್ತೆ ವಿಭಜಕದ ಮಧ್ಯೆ ನೆಟ್ಟಿದ್ದಾರೆಯೇ ವಿನಃ, ಬೀದಿದೀಪಗಳನ್ನು ಅಳವಡಿಸದೆ ಹಾಗೆಯೇ ಕೈಬಿಟ್ಟಿದ್ದಾರೆ. ಇತ್ತ ಪಾಲಿಕೆಯವರೂ ಅಲ್ಲಿ ಕೆಲಸ ಮಾಡದಂತೆ ಆಗಿದೆ. ಜಿಲ್ಲಾಧಿಕಾರಿಗಳ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ, ನ್ಯಾಯಾಧೀಶರುಗಳ ವಸತಿಗೃಹಗಳು ಇಲ್ಲೇ ಇದ್ದು, ದಿನವೂ ಇವರು ಸಂಚರಿಸುವ ರಸ್ತೆಯಲ್ಲೇ ಇಂತಹ ಸ್ಥಿತಿ ಹಲವು ತಿಂಗಳುಗಳಿಂದ ಇದೆ ಎಂದು ವಿಷಾದದಿಂದಲೇ ವಿವರಿಸಿ, ಕೂಡಲೇ ಪಾಲಿಕೆಯ ಅಧಿಕಾರಿಗಳು ಗಮನಹರಿಸಿ, ಸ್ಥಳಪರಿಶೀಲನೆ ನಡೆಸಿ, ಬೀದಿದೀಪ ಅಳವಡಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಭಾರ ಆಯುಕ್ತ ಯೋಗಾನಂದ್, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟರು. ಪಾಲಿಕೆಯ ವಿದ್ಯುತ್ ವಿಭಾಗದ ಇಂಜಿನಿಯರ್‍ಗಳು ಮಾತನಾಡಿ ಸ್ಥಳಪರಿಶೀಲಿಸಿ, ತುರ್ತಾಗಿ ಬೀದಿದೀಪ ಅಳವಡಿಕೆಗೆ ಕ್ರಮ ಜರುಗಿಸುವುದಾಗಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ