ಹುಳಿಯಾರು
ಹುಳಿಯಾರು ಹೋಬಳಿಯ ತಿಮ್ಲಾಪುರ ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ರಸ್ತೆಯು ಅನೇಕ ವರ್ಷಗಳಿಂದ ದುರಸ್ತಿಯಾಗದೆ ಸಂಪೂರ್ಣವಾಗಿ ಹದಗೆಟ್ಟಿದೆ. ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ಉಂಟಾಗಿದ್ದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ರಸ್ತೆಯು ಹುಳಿಯಾರು ಮಾರ್ಗವಾಗಿ ಹೋಗುವ ರಾಷ್ಟ್ರೀಯ ಹೆದ್ದಾರಿ 234 ಕ್ಕೆ ಸೇರಿಕೊಳ್ಳುತ್ತದೆ. ಅಲ್ಲದೆ ಈ ಮಾರ್ಗವಾಗಿ ಹೊಸಹಳ್ಳಿ, ಹೊಸಹಳ್ಳಿಪಾಳ್ಯ, ಸೀಗೆಬಾಗಿ ಗ್ರಾಮಗಳ ಗ್ರಾಮಸ್ಥರು ಪಟ್ಟಣಕ್ಕೆ ಓಡಾಡುತ್ತಾರೆ. ಈ ಊರಿಗೆ ಬಸ್ ವ್ಯವಸ್ಥೆಯಿಲ್ಲದಿದ್ದರಿಂದ ಬೈಕ್ ಅಥವಾ ನಡೆದುಕೊಂಡೇ ಓಡಾಡಬೇಕಿದೆ.
ಆದರೆ ಮಳೆಗಾಲದಲ್ಲಿ ಬಿದ್ದ ಮಳೆಯ ನೀರು ಈ ರಸ್ತೆಯ ಮೇಲೆ ನಿಂತು ರಸ್ತೆಯು ಕೆಸರು ಗದ್ದೆಯಂತಾಗುತ್ತದೆ. ವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಕೆಸರು ಸಿಡಿಸಿಕೊಂಡು ಓಡಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡ ನಿದರ್ಶನಗಳೂ ಸಾಕಷ್ಟಿವೆ.
ರಸ್ತೆ ದುರಸ್ತಿಗೆ ಗ್ರಾಮಸ್ಥರು ಹಲವಾರು ವರ್ಷಗಳಿಂದ ಸಾಕಷ್ಟು ಬಾರಿ ಮನವಿ ಮಾಡಿದರೂ ಜನಪ್ರತಿ ನಿಧಿಗಳಾಗಲೀ ಅಧಿಕಾರಿಗಳಾಗಲೀ ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯಿಸಿದ್ದಾರೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಈ ರಸ್ತೆ ಸೇರ್ಪಡೆಗೊಳಿಸಿ ಡಾಂಬರೀಕರಣ ಮಾಡಿದರೆ ಐದಾರು ಹಳ್ಳಿಗಳ ಸಾವಿರಾರು ಜನರ ಸುಗಮ ಸಂಚಾರಕ್ಕೆ ನೆರವಾದಂತ್ತಾಗುತ್ತದೆ.
ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಗ್ರಾಮಪಂಚಾಯ್ತಿ ತಕ್ಷಣ ರಸ್ತೆ ಪಕ್ಕದ ಚರಂಡಿ ಸ್ವಚ್ಚಗೊಳಿಸಿ ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ತಪ್ಪಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ