ಬೆಳಗಾವಿ
ಗ್ರಾಮೀಣ ಪತ್ರಕರ್ತರು ದೇಶದ ಪತ್ರಿಕೋದ್ಯಮದ ನಿಜವಾದ ಅಡಿಪಾಯ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ರಾಜ್ಯ ಪತ್ರಕರ್ತರ ಒಕ್ಕೂಟದ (ಕೆಜಿಯು) ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಾವಿರಾರು ಗ್ರಾಮೀಣ ಪತ್ರಕರ್ತರು ಸ್ಥಳೀಯ ಸುದ್ದಿಗಳನ್ನು ಒದಗಿಸುತ್ತಾರೆ, ಇದು ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣವಾಗಿ ನೆರವಾಗುತ್ತವೆ. ಜೊತೆಗೆ, ಜನಪರ ಯೋಜನೆಗಳನ್ನು ಗ್ರಾಮೀಣ ಭಾಗದ ನಿಜವಾದ ಫಲಾನುಭವಿಗಳಿಗೆ ತಲುಪಲು ಕೂಡ ಉಪಯುಕ್ತವಾಗಿವೆ ಎಂದರು.
ಪತ್ರಕರ್ತರು ತಮ್ಮ ಸ್ವಂತ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಇತರರು ಬರೆದಿದ್ದನ್ನು ನಕಲು ಮಾಡಬಾರದು. ಪತ್ರಕರ್ತರು ದೇಶದ ಪ್ರಜಾಪ್ರಭುತ್ವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಓದುಗರು ನೈಜ ಲೇಖನಗಳು ಹಾಗೂ ಸುದ್ದಿಗಳನ್ನು ಬಯಸುತ್ತಾರೆ ಎಂದರು .ರೈಲ್ವೆ ಇಲಾಖೆಯಲ್ಲಿ ಸಾವಿರಾರು ಉದ್ಯೋಗಾವಕಾಶಗಳಿದ್ದು, ಅರ್ಹ ಅಭ್ಯರ್ಥಿಗಳು ಅದರ ಲಾಭ ಪಡೆಯಬೇಕು. ಕೇಂದ್ರ ಸರ್ಕಾರ ಮುಂದಿನ ಹತ್ತು ವರ್ಷಗಳಲ್ಲಿ ರೈಲ್ವೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 50 ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಲಿದೆ ಎಂದರು.
ದೊಡ್ಡ ನಗರಗಳು ಹಾಗೂ ನಗರ ಪ್ರದೇಶದ ಜನರು ದೇಶದ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ನಮ್ಮ ಆರ್ಥಿಕ ಪರಿಸ್ಥಿತಿ ಸದೃಢವಾಗಿದ್ದು, ಸದ್ಯ ಉತ್ತಮ ಸ್ಥಿತಿಯಲ್ಲಿದೆ. ಅದರ ಬಗ್ಗೆ ಅನುಮಾನವೇ ಬೇಡ ಎಂದರು. ಈ ಸಂದರ್ಭದಲ್ಲಿ ರಾಜ್ಯ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಮುರುಗೇಶ್ ಶಿವಪೂಜಿ ಅವರು ಕೇಂದ್ರ ಸಚಿವರಿಗೆ ಹಲವು ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








