ಮರಳು ನೀತಿ ಸರಳೀಕರಣ:ಸಿ.ಸಿ.ಪಾಟೀಲ್

ಬಳ್ಳಾರಿ

     ರಾಜ್ಯದಲ್ಲಿ ಮರಳು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯಬೇಕು ಮತ್ತು ರಾಜ್ಯದ ಬೊಕ್ಕಸಕ್ಕೂ ಧಕ್ಕೆಯಾಗದ ರೀತಿಯಲ್ಲಿ ಮರಳು ನೀತಿಯನ್ನು ಸರಳೀಕರಣಗೊಳಿಸುವ ಕಾರ್ಯ ನಡೆದಿದೆ ಎಂದು ಗಣಿ ಸಚಿವ ಸಿ.ಸಿ.ಪಾಟೀಲ್ ಹೇಳಿದ್ದಾರೆ.ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

     ಮರಳಿನ ಅಭಾವದ ಬಗ್ಗೆ ಜನ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಅಕ್ರಮ ಮರಳು ಗಣಿಗಾರಿಕೆ ಹೆಚ್ಚಾಗಿದ್ದರಿಂದ ಆ ಬಗ್ಗೆ ಕಟ್ಟು ನಿಟ್ಟಿನ ಕಾರ್ಯ ಕೈಗೊಂಡಿದೆ. ಅದಕ್ಕಾಗಿ ರಾಜ್ಯದಲ್ಲಿನ ಮರಳು ನೀತಿಯನ್ನು ಸರಳೀಕರಣಗೊಳಿಸಲು ಈಗಾಗಲೇ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದೆ. ಮರಳಿನ ಬಗ್ಗೆ ಆಂಧ್ರ ಪ್ರದೇಶ ಮತ್ತು ಗ್ರಾನೈಟ್ ಬಗ್ಗೆ ರಾಜಸ್ಥಾನಕ್ಕೆ ಅಧಿಕಾರಿಗಳನ್ನು ಕಳುಹಿಸಿ ಅಲ್ಲಿನ ನೀತಿಗಳ ಬಗ್ಗೆ ವರದಿ ತರಿಸಿಕೊಳ್ಳಲಿದೆಂದರು.

     ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್.ಎಂ.ಡಿ.ಸಿ) ಗೆ ರಾಜ್ಯದಲ್ಲಿ ಗಣಿಗಾರಿಕೆ ನಡೆಸಲು ಸಂಡೂರು ತಾಲೂಕಿನಲ್ಲಿ ಗಣಿ ಪ್ರದೇಶ ಲೀಜ್ ಗೆ ನೀಡುವಕುರಿತು ಉಂಟಾಗಿರುವ ಕಾನೂನು ತೊಡಕನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಗೆಹರಿಸಿಕೊಳ್ಳಿಬೇಕಿದೆ. ಈ ಬಗ್ಗೆ ಅಗತ್ಯ ಬಿದ್ದರೆ ಕಾನೂನು ತಿದ್ದುಪಡಿ ಆಗಬೇಕಿದೆ. ಅದಕ್ಕಾಗಿ ಈ ಬಗ್ಗೆ ಚರ್ಚಿಸಲು ನವದೆಹಲಿಯಲ್ಲಿ ಈ ತಿಂಗಳ 25ರಂದು ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಷಿ ಅವರು ಸಭೆ ಕರೆದಿದ್ದಾರೆಂದರು.ರಾಜ್ಯ ಮತ್ತು ರಾಷ್ಟ್ರ ಸರ್ಕಾರಗಳ ನಡುವೆ ಸಾಮ್ಯತೆ ಇರಬೇಕಿದೆ.

      ಈ ನಿಟ್ಟಿನಲ್ಲಿ ಕೇಂದ್ರಕ್ಕೆ ನಮ್ಮ ಸರ್ಕಾರವೂ ಎನ್.ಎಂ.ಡಿ.ಸಿ ವಿಷಯದಲ್ಲಿ ಸಹಕಾರ ನೀಡಲಿದೆಂದರು.ಸಂಡೂರಿನ ಐತಿಹಾಸಿಕ ಕುಮಾರಸ್ವಾಮಿ ದೇವಸ್ಥಾನ ಸಮೀಪದಲ್ಲಿ ಗಣಿಗಾರಿಕೆ ನಡೆಸಲು ಜಿಂದಾಲ್ ಸಂಸ್ಥೆಗೆ ಅನುಮತಿ ನೀಡಿರುವ ಕುರಿತು ಮುಂದಿನ ತಿಂಗಳ ಮೊದಲ ವಾರದಲ್ಲಿ ಭೇಟಿ ನೀಡಿ ಪರಿಶೀಲಿಸಲಿದೆ. ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಧಕ್ಕೆ ಉಂಟಾಗುವಂತಿದ್ದರೆ ಆ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲಿದೆಂದರು.

     ಅತಿವೃಷ್ಠಿಯಿಂದ ರಾಜ್ಯದಲ್ಲಿ ಉಂಟಾಗಿರುವ ಸಂಕಷ್ಟಕ್ಕೆ ಕೇಂದ್ರದ ಪರಿಹಾರ ನಿರೀಕ್ಷೆ ಅಗತ್ಯವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಆ ಬಗ್ಗೆ ನನಗೆ ಗೊತ್ತಿಲ್ಲ ಕೇಂದ್ರದ ಆಸರೆ ಬೇಕೇ ಬೇಕು, ಈಗಾಗಲೇ ರಾಜ್ಯ ಸರ್ಕಾರ ಮನೆಗಳ ನಿರ್ಮಾಣಕ್ಕೆ 10 ಸಾವಿರ ಕೋಟಿ, ರಸ್ತೆ ಸೇತುವೆಗಳ ನಿರ್ಮಾಣಕ್ಕೆ 5ಸಾವಿರ ಕೋಟಿ ಬಿಡುಗಡೆ ಮಾಡಿದೆಂದು ತಿಳಿಸಿದರು.ಬಳ್ಳಾರಿ ಜಿಲ್ಲೆ ಇಬ್ಭಾಗದ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link