ಬೆಂಗಳೂರು
ರಾಜ್ಯದ ಸರ್ಕಾರಿ ಶಾಲೆಗಳನ್ನು ದೆಹಲಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಸಂಬಂಧ ಅಧ್ಯಯನ ನಡೆಸಲು ಮುಂದಿನ ಹದಿನೈದು ದಿನಗಳಲ್ಲಿ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ನೇತೃತ್ವದ ತಜ್ಞರ ತಂಡ ದೆಹಲಿಗೆ ತೆರಳಲಿದೆ.
ಇದೇ ರೀತಿ ಕೇರಳದಲ್ಲೂ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ ರೀತಿ ದೇಶಕ್ಕೆ ಮಾದರಿಯಾಗಿದ್ದು ಅಲ್ಲಿಗೂ ಶಿಕ್ಷಣ ಸಚಿವ ಶ್ರೀನಿವಾಸ್ ನೇತೃತ್ವದ ತಂಡ ಭೇಟಿ ನೀಡಿ ಅಧ್ಯಯನ ನಡೆಸಲಿದೆ.
ಇಂದಿಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಈ ವಿಷಯವನ್ನು ತಿಳಿಸಿದ್ದು,ರಾಜ್ಯದ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಉಚ್ಚ ದರ್ಜೆಗೆ ಏರಿಸುವ ಅನಿವಾರ್ಯತೆ ಇದ್ದು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಹಾಗೂ ಕೇರಳ ರಾಜ್ಯಗಳಿಗೆ ಭೇಟಿ ನೀಡಲಾಗುವುದು ಎಂದು ಹೇಳಿದರು.
ಈ ಅಧ್ಯಯನ ತಂಡದಲ್ಲಿ ಎಂ.ಎಲ್.ಸಿ ಗಳು ಸೇರಿದಂತೆ ಶಿಕ್ಷಣ ಕ್ಷೇತ್ರದ ತಜ್ಞರು ಇರಲಿದ್ದು ದೆಹಲಿ ಹಾಗೂ ಕೇರಳಗ¼ಲ್ಲಿ ನಡೆಸುವ ಕೂಲಂಕುಷ ಅಧ್ಯಯನದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಗ್ರಾಮೀಣ ಪ್ರದೇಶಗಳ ಜನರೂ ಖಾಸಗಿ ಶಾಲೆಗಳ ಕಡೆ ಮಾರು ಹೋಗುತ್ತಿದ್ದು ಮಕ್ಕಳನ್ನು ಆ ಶಾಲೆಗಳಿಗೆ ಸೇರಿಸುವುದು ಒಂದು ರೀತಿಯಲ್ಲಿ ಫ್ಯಾಷನ್ ಆಗಿ ಹೋಗಿದೆ ಎಂದು ಅವರು ವಿಷಾದಿಸಿದರು.
ಇದೇ ಕಾರಣಕ್ಕಾಗಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಳ ಮಾಡುವ ಅಗತ್ಯವಿದ್ದು ಹೊಸ ಕಟ್ಟಡಗಳು,ಶೌಚಾಲಯ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಅನಿವಾರ್ಯತೆ ಇದೆ.ಈ ವರ್ಷ ಇದೇ ಕಾರ್ಯಕ್ಕಾಗಿ 1200 ಕೋಟಿ ರೂಗಳನ್ನು ಮೀಸಲಾಗಿಡಲಾಗಿದೆ.
ಇದೇ ರೀತಿ ಕಾರ್ಪೋರೇಟ್ ಸೆಕ್ಟರ್‍ನ ನೆರವು ಪಡೆದು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಮುಂದುವರಿದಿದ್ದು ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಹಲ ಕಾರ್ಪೋರೇಟ್ ಕಂಪನಿಗಳು ಸರ್ಕಾರಿ ಶಾಲೆಯನ್ನು ದತ್ತು ಪಡೆದಿವೆ ಎಂದರು.
ಪ್ರತಿ ವರ್ಷ ಹಲವು ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿದ್ದು ಈ ವಿಷಯವನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿದೆ ಎಂದ ಅವರು,ಶಿಕ್ಷಣದ ವ್ಯಾಪಾರಿಕರಣದ ಫಲವಾಗಿ ಸರ್ಕಾರಿ ಶಾಲೆಗಳಿಗೆ ಇಂತಹ ಪರಿಸ್ಥಿತಿ ಬಂದಿದೆ ಎಂದರು.
ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ನಾವು ಜಿಲ್ಲಾ ಮಟ್ಟದಲ್ಲಿ ಎರಡರಿಂದ ನಾಲ್ಕು ಮಾದರಿ ಪಬ್ಲಿಕ್ ಶಾಲೆಗಳನ್ನು ತೆರೆದಿದ್ದು ಅಲ್ಲಿ ಅರವತ್ತು ಮಂದಿಗೆ ಅವಕಾಶವಿದ್ದರೆ ಇನ್ನೂರು ಮಂದಿ ಅರ್ಜಿ ಸಲ್ಲಿಸುತ್ತಾರೆ.
ಹೀಗೆ ಸರ್ಕಾರಿ ಶಾಲೆಗಳಿಗೆ ಸೇರುವ ಆಸಕ್ತಿ ಮೂಡಿಸುವ ಕೆಲಸವಾಗಬೇಕಿದ್ದು ಅದನ್ನು ಮಾಡುವ ಸಲುವಾಗಿಯೇ ದೆಹಲಿ ಹಾಗೂ ಕೇರಳಗಳಿಗೆ ಹೋಗಿ ಅಲ್ಲಿ ಸರ್ಕಾರಿ ಶಾಲೆಗಳನ್ನು ಯಾವ ರೀತಿ ಅಭಿವೃದ್ಧಿಪಡಿಸಿದ್ದಾರೆ ಎಂಬುದನ್ನು ನೋಡಿ ಬರುವುದಾಗಿ ತಿಳಿಸಿದರು.
ಶಾಲಾ ಮಕ್ಕಳಿಗೆ ಬೈಸಿಕಲ್ ನೀಡುವ ನಿರ್ಧಾರಕ್ಕೆ ತಡೆ ನೀಡಲಾಗಿದ್ದು ಸಧ್ಯದಲ್ಲೇ ಆ ಕುರಿತು ನಿರ್ಣಯ ಕೈಗೊಳ್ಳಲಾಗುವುದು.ಸಧ್ಯದ ಸ್ಥಿತಿಯಲ್ಲಿ ನೀಡುತ್ತಿರುವ ಬೈಸಿಕಲ್‍ಗಳ ಗುಣಮಟ್ಟ ಸರಿಯಿಲ್ಲ ಎಂಬುದು ತಡೆ ನೀಡಲು ಮುಖ್ಯ ಕಾರಣ ಎಂದರು.
ರಾಜ್ಯದಲ್ಲಿ ಆರು ಸಾವಿರ ಗ್ರಂಥಾಲಯಗಳಿದ್ದು ಅದನ್ನು ಆರ್.ಡಿ.ಪಿ.ಆರ್ ವಹಿಸಲಾಗಿದೆ.ಅಲ್ಲಿ ಕೆಲಸ ಮಾಡುತ್ತಿರುವ ಗ್ರಂಥಪಾಲಕರು ತಮ್ಮ ಸೇವೆಯನ್ನು ಸರ್ಕಾರಿ ಸೇವೆ ಎಂದು ಪರಿಗಣಿಸಲು ಕೋರಿದ್ದಾರೆ.ಅವರಿಗೆ ಸಧ್ಯಕ್ಕೆ ಆರು ಸಾವಿರ ರೂ ಗೌರವಧನ ನೀಡುತ್ತಿದ್ದು ಅದನ್ನು ಹನ್ನೊಂದು ಸಾವಿರ ರೂಗಳಿಗೆ ಏರಿಸಲಾಗುವುದು ಎಂದರು.
ಶಿಕ್ಷಣ ಇಲಾಖೆ ಈ ಮುನ್ನ ವಿದ್ಯಾರ್ಥಿಗಳ ಬಸ್ ಪಾಸ್‍ನಲ್ಲಿ ಶೇಕಡಾ ಇಪ್ಪತ್ತೈದಷ್ಟು ಹಣ ಭರಿಸುತ್ತಿತ್ತು.ಆದರೆ ಈಗ ಅದು ಹಣ ನೀಡದೆ ಇರುವುದರಿಂದ ಬಸ್ ಪಾಸ್ ನೀಡಲಾಗುತ್ತಿಲ್ಲ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು,ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುವುದಾಗಿ ಸ್ಪಷ್ಟ ಪಡಿಸಿದರು.
ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಕಾರ್ಯಕ್ರಮದ ಅಂಗವಾಗಿ ಅಲ್ಲಿರುವ ಶಿಕ್ಷಕರ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ತರಬೇತಿ ನೀಡಬೇಕಿದೆ ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
