ಗುಣಮಟ್ಟದ ಹಣ್ಣು ಮಾರಾಟಕ್ಕೆ ಎಸ್ಸೆಸ್ ಕರೆ

ದಾವಣಗೆರೆ:

        ಗುಣಮಟ್ಟದ ಹಣ್ಣು-ಹಂಪಲು ಮಾರಾಟ ಮಾಡಬೇಕೆಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಣ್ಣಿನ ವ್ಯಾಪಾರಿಗಳಿಗೆ ಕರೆ ನೀಡಿದರು.

        ನಗರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಸಿ ಬ್ಲಾಕ್‍ನ ತೋಟಗಾರಿಕಾ ಇಲಾಖೆಯ ಜೈವಿಕ ಕೇಂದ್ರದ ಬಳಿ ಸೋಮವಾರ ಹಣ್ಣಿನ ಸಗಟು ವರ್ತಕರ ಮತ್ತು ದಲ್ಲಾರ ಸಂಘದ ವತಿಯಿಂದ ಏರ್ಪಡಿಸಿದ್ದ ನೂತನ ಹಣ್ಣಿನ ಮಾರುಕಟ್ಟೆಗೆ ಅಡಿಗಲ್ಲು ಮತ್ತು ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

          ಹಣ್ಣಿನ ವ್ಯಾಪಾರಿಗಳಿಗೆ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿಕೊಡಲು ಎಪಿಎಂಸಿ ಮುಂದಾಗಿದ್ದು, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಹಣ್ಣು-ಹಂಪಲುಗಳು ಮಾರಾಟ ಮಾಡುವ ಮೂಲಕ ರಾಜ್ಯದಲ್ಲೇ ಪ್ರಸಿದ್ಧಿ ಪಡೆಯಬೇಕೆಂದು ಸಲಹೆ ನೀಡಿದರು.
ಎಪಿಎಂಸಿ ಕಾರ್ಯದರ್ಶಿ ಬಿ.ಆನಂದ್ ಮಾತನಾಡಿ, ಇಲ್ಲಿ ನಿರ್ಮಿಸಲುದ್ದೇಶಿಸಿರುವ ಹೋಲ್‍ಸೇಲ್ ಮಾರುಕಟ್ಟೆಯು ಸುಮಾರು 4 ಎಕರೆ ಜಾಗದಲ್ಲಿ ತಲೆ ಎತ್ತಲಿದ್ದು, ಇಲ್ಲಿ 63 ಮಳಿಗೆಗಳು ನಿರ್ಮಾಣವಾಗಲಿವೆ. ಮಾರುಕಟ್ಟೆಯಲ್ಲಿನ ಮಳಿಗೆಗೆ ಅರ್ಜಿ ಸಲ್ಲಿಸಲಾಗಿದ್ದ ಸುಮಾರು 75 ಮಂದಿ ಪೈಕಿ ಈಗಾಗಲೇ 54 ಮಂದಿಗೆ ಮಳಿಗೆಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.

            50*30 ಅಳತೆಯುಳ್ಳ ನಿವೇಶನ ಸಿಗಲಿದ್ದು, ತಲಾ ಒಬ್ಬರಿಗೆ ಚದರ ಅಡಿಗೆ 225 ರೂ.ನಂತೆ 3 ಲಕ್ಷದ 37 ಸಾವಿರದ 500 ರೂ.ಗಳಿಗೆ ಲೀಸ್ ಕಂ ಸೇಲ್ ಡೀಡ್ ಮಾಡಿಕೊಲಾಗುವುದು. 10 ವರ್ಷದ ನಂತರ ನೂತನ ಮಾರುಕಟ್ಟೆಯ ವ್ಯಾಪಾರಸ್ಥರಿಗೆ ಮಾರಾಟ ಪತ್ರವನ್ನು ನೀಡಲಾಗುವುದು. ಒಂದು ವರ್ಷದ ಬಳಿಕ ಈ ಮಾರುಕಟ್ಟೆಗೆ ಕೆಆರ್ ಮಾರುಕಟ್ಟೆಯಲ್ಲಿನ ಹಣ್ಣಿನ ವ್ಯಾಪಾರವನ್ನು ಸ್ಥಳಾಂತರಿಸಲಾಗುವುದು ಎಂದು ಮಾಹಿತಿ ನೀಡಿದರು.

        ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಬಿ.ಕೆ.ಈರಣ್ಣ, ಉಪಾಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಹಣ್ಣಿನ ಸಗಟು ವರ್ತಕರ ಮತ್ತು ದಲ್ಲಾರ ಸಂಘದ ಅಧ್ಯಕ್ಷ ಹೆಚ್.ಕೆ. ಅಬ್ದುಲ್ ರೆಹಮಾನ್, ದೊಗ್ಗಳ್ಳಿ ಬಸವರಾಜ್, ಸುಧಾ, ಜೆ. ಪ್ರಭು, ಎಂ.ಬಿ. ಹಾಲಪ್ಪ, ಕೆ.ಜಿ. ಶಾಂತರಾಜ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ