ದಾವಣಗೆರೆ:
ಹಾಡುಹಗಲೇ ಆಟೋ ಚಾಲಕನೊಬ್ಬನನ್ನು ಗುಂಪ್ಪೊಂದು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಪ್ರೌಢಶಾಲೆ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಹಾಡುಹಗಲೇ ಹತ್ಯೆ ನಡೆದಿದ್ದು, ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಇಲ್ಲಿನ ಎಸ್.ಎಂ. ಕೃಷ್ಣ ನಗರದ ಆಟೋ ಚಾಲಕ ಬಸವರಾಜ(20) ಹತ್ಯೆಯಾಗಿರುವ ಆಟೋ ಚಾಲಕನಾಗಿದ್ದಾನೆ. ಐಟಿಐ ಮುಗಿಸಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಸವರಾಜನನ್ನು ನಗರದ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಗುಂಪೆದು ಚಾಕುವಿನಿಂದ ಎದೆ ಹಾಗೂ ಹೊಟ್ಟೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಿದೆ.
ಕಳೆದ 2 ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ಗಲಾಟೆ ಹಿನ್ನೆಲೆಯಲ್ಲಿ ಎರಡೂ ಗುಂಪಿನವರು ರಾಜಿ ಪಂಚಾಯಿತಿಗೆ ಬಂದಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿದೆ. ಉಭಯ ಗುಂಪುಗಳಿಗೂ ಮಾತಿಗೆ ಮಾತು ಬೆಳೆದು, ಆಟೋ ಚಾಲಕ ಬಸವರಾಜನಿಗೆ ಎದುರಾಳಿ ಗುಂಪಿನ ವಿಕಾಸ ಎಂಬುವನ ಜೊತೆಗಿದ್ದ ಅಜ್ಜಯ್ಯ ಎಂಬುವನು ಚಾಕುವಿನಿಂದ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾಗಿ ಇರಿದ ಪರಿಣಾಮ ಬಸವರಾಜ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಎದುರಾಳಿ ಗುಂಪು ಅಲ್ಲಿಂದ ಕಾಲ್ಕಿತ್ತಿದೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಬಸವರಾಜನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಬಸವರಾಜ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ವಿಕಾಸ್, ಅಜ್ಜಯ್ಯ ಹಾಗೂ ಇತರೆ ನಾಲ್ವರು ಸೇರಿಕೊಂಡು ಕೊಲೆ ಮಾಡಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತನ ಅಣ್ಣ ವೀರೇಶ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದು, ಮರಣೋತ್ತರ ಪರೀಕ್ಷೆ ನಂತರ ಮೃತ ಆಟೋ ರಿಕ್ಷಾ ಚಾಲಕ ಬಸವರಾಜನ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
