ಸಮ್ಮೀಶ್ರ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

ಚಿತ್ರದುರ್ಗ:

   ಅನ್ಯಾಯದ ವಿರುದ್ದ ಧ್ವನಿ ಎತ್ತುವವರ ಸ್ವಾತಂತ್ರವನ್ನು ಹತ್ತಿಕ್ಕುವ ಮೂಲಕ ತೊಗಲಕ್ಕೆ ದರ್ಬಾರ್ ನಡೆಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಗೃಹ ಮಂತ್ರಿ ಎಂ.ಬಿ.ಪಾಟೀಲ್ ವಿರುದ್ದ ಬಿಜೆಪಿ.ವತಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

   ಒನಕೆ ಓಬವ್ವ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಒಂದು ತಿಂಗಳಲ್ಲಿ ಆರಕ್ಕೂ ಹೆಚ್ಚು ಬಿಜೆಪಿ.ಕಾರ್ಯಕರ್ತರನ್ನು ಮೈತ್ರಿ ಸರ್ಕಾರ ಬಂಧಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಅನಿಸಿಕೆಗಳನ್ನು ಹಾಕುವವರನ್ನು ಹಿಂದುಪರ ಸಂಘಟನೆಗಳೆಂದು ತಿಳಿದು ಸುಳ್ಳು ಕೇಸು ಹಾಕಲಾಗುತ್ತಿದೆ. ರಾಜ್ಯದ ಕೆಲವು ಕಡೆ ಮಹಿಳೆಯರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.

     ಬಿಜೆಪಿ.ವಕ್ತಾರ ಹೇಮಂತಕುಮಾರ್, ದಾವಣಗೆರೆಯ ಶಾರದ, ಧಾರವಾಡದ ಸುಧಿಬೆಳ್ಳಕ್ಕಿ ಇವರುಗಳ ಮೇಲೆ ಕ್ಷುಲ್ಲಕ ಕಾರಣಕ್ಕೆ ಕೇಸು ದಾಖಲಿಸಿ ಬಂಧಿಸಲಾಗಿದೆ. ಸಾಮಾನ್ಯ ನಾಗರೀಕರು, ಹಿಂದುಪರ ಸಂಘಟನೆ ಕಾರ್ಯಕರ್ತರ ಮೇಲೆ ಪೌರುಷ ತೋರಿಸುತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಗೃಹಮಂತ್ರಿ ಎಂ.ಬಿ.ಪಾಟೀಲ್ ಇವರುಗಳಿಗೆ ತಾಕತ್ತಿದ್ದರೆ ಉಗ್ರಗಾಮಿ, ಭಯೋತ್ಪಾದಕರುಗಳನ್ನು ಬಂಧಿಸಿ ವಿಚಾರಣೆ ನಡೆಸಲಿ ಎಂದು ಸವಾಲು ಹಾಕಿದರು.

      ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಇವರುಗಳು ತಮ್ಮ ಯೋಗ್ಯತೆ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು.ನಿರಪರಾಧಿಗಳ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಬಾರದು. ಅಮಾಯಕರ ಮೇಲೆ ಸಲ್ಲಿಸಿರುವ ಕೇಸುಗಳನ್ನು ಹಿಂದಕ್ಕೆ ಪಡೆದು ಜೈಲಿನಲ್ಲಿರುವವರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

     ರಾಜ್ಯದ ಅಭಿವೃದ್ದಿ ಮರೆತು ಅಧಿಕಾರಕ್ಕಾಗಿ ಕಚ್ಚಾಡುತ್ತಿರುವ ಸಮ್ಮಿಶ್ರ ಸರ್ಕಾರದ ಮೇಲೆ ರಾಜ್ಯಪಾಲರು ಚಾಟಿ ಬೀಸಬೇಕು. ರಾಜ್ಯದಲ್ಲಿ ನೂರಾರು ಹಳ್ಳಿಗಳಲ್ಲಿ ಬರಗಾಲವಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಸಾಲ ತೀರಿಸಲು ಆಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವುಗಳ ಕಡೆ ರಾಜ್ಯ ಸಮ್ಮಿಶ್ರ ಸರ್ಕಾರ ಗಮನ ಕೊಡಬೇಕೆ. ವಿನಃ ಬಿಜೆಪಿ.ಕಾರ್ಯಕರ್ತರನ್ನು ಬಂಧಿಸುವುದಕ್ಕಲ್ಲ. ಇನ್ನಾದರೂ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಇವರುಗಳು ತಮ್ಮ ಜವಾಬ್ದಾರಿಯನ್ನು ಅರಿತು ರಾಜ್ಯದ ಅಭಿವೃದ್ದಿಗೆ ಶ್ರಮಿಸಲಿ ಎಂದು ಮೈತ್ರಿ ಸರ್ಕಾರದ ನಡೆಯನ್ನು ಖಂಡಿಸಿದರು.

     ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಜಿ.ನರೇಂದ್ರನಾಥ್, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವೆಂಕಟೇಶ್‍ಯಾದವ್, ಜಿತೇಂದ್ರ, ಡಿ.ರಮೇಶ್, ಸಂಪತ್‍ಕುಮಾರ್, ಟೈಗರ್ ತಿಪ್ಪೇಸ್ವಾಮಿ, ಭೀಮರಾಜ್, ಶಂಭು, ಸತ್ಯನಾರಾಯಣ, ಜಯದೇವ, ಮಂಜು, ವಿಜಯಕುಮರಿ, ಬಸಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ