ಸ್ವಚ್ಛ ಭಾರತ ಯೋಜನೆ ಯಶಸ್ವಿಗೆ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು : ತಿಪ್ಪಾರೆಡ್ಡಿ

ಚಿತ್ರದುರ್ಗ:

    ಸರ್ಕಾರ ಜಾರಿಗೊಳಿಸಿರುವ ಸ್ವಚ್ಚ ಭಾರತ ಯೋಜನೆ ಯಶಸ್ವಿಯಾಗಲು ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಹೇಳಿದರು.

   ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರು ಮಾತನಾಡಿದರು.

    ಪೌರ ಕಾರ್ಮಿರು ಮುಂಜಾನೆ 6 ಗಂಟೆಯಿಂದ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛತೆ, ಚರಂಡಿಗಳ ಸ್ವಚ್ಚತೆ ಮಾಡುವುದರ ಮೂಲಕ ನಗರ ಹಾಗೂ ಪಟ್ಟಣವನ್ನು ಸ್ವಚ್ಛಗೊಳಿಸುತ್ತಾರೆ. ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಕಾರ್ಯಕ್ರಮ ಯಶಸ್ಸುಗಳಿಸಬೇಕಾದರೆ ಪೌರ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ ಎಂದರು

    ಪೌರ ಕಾರ್ಮಿಕರ ಶ್ರಮದ ಸೇವೆ ಅತ್ಯುತ್ತಮ ಹಾಗೂ ಅಷ್ಟೆ ಅಪಾಯಕಾರಿ ಸೇವೆಯಾಗಿದೆ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸ್ವಚ್ಛತೆಯ ಕಾರ್ಯ ನಿರ್ವಹಿಸುವ ಅವರ ಸೇವೆ ಅನನ್ಯವಾದುದು. ಶ್ರಮ ಪಟ್ಟು ಸೇವೆ ಸಲ್ಲಿಸುವ ಪೌರ ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ವೇತನ, ನಿವೃತ್ತಿ ಹೊಂದಿದವರಿಗೆ ಪಿಂಚಣಿ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುವುದು ಸರಿಯಲ್ಲ.

    ಇವೆಲ್ಲವೂ ನಿಮ್ಮ ಹಕ್ಕು, ಇದನ್ನು ಕೇಳಿ ಪಡೆಯಬೇಕು ಹಾಗೂ ಸರ್ಕಾರದಿಂದ ದೊರಕುವ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.ಪೌರ ಕಾರ್ಮಿಕರಿಗೆ ಎ.ಎಲ್.ಪಿ ಯೋಜನೆಯಡಿ ಹೌಸಿಂಗ್ ಫಾರ್ ಆಲ್ ನಡಿ 200 ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಆಯ್ಕೆಯಾಗಿದ್ದು, ಮನೆಗಳನ್ನು ಗುಣ ಮಟ್ಟದಿಂದ ನಿರ್ಮಿಸಿಕೊಡಬೇಕು. 1998 ರಲ್ಲಿ ಸುರಿದ ಮಳೆಯಿಂದ ಬುದ್ಧ ನಗರದಲ್ಲಿನ ಪೌರ ಕಾರ್ಮಿಕರ ಮನೆಗಳಿಗೆ ನೀರು ನುಗ್ಗಿತ್ತು, ಇಂತಹ ಅವಘಡಗಳು ಸಂಭವಿಸಿದಂತೆ ಒಳ್ಳೆಯ ವಾತಾವರಣದ ಕಡೆ ನಿರ್ಮಿಸಿಕೊಡಬೇಕು. ಪೌರ ಕಾರ್ಮಿಕರನ್ನು ಅಪಾಯಕಾರಿ ಕೆಲಸಗಳಲ್ಲಿ ಬಳಸಿಕೊಳ್ಳಬಾರದು, ಒಂದು ವೇಳೆ ಅಪಾಯಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಅದು ಅಪರಾಧವಾಗುತ್ತದೆ ಎಂದು ಎಚ್ಚರಿಸಿದರು

    ನಗರಸಭೆಯಲ್ಲಿ 7 ಆರೋಗ್ಯ ನಿರೀಕ್ಷಕರು ಹಾಗೂ ಒಬ್ಬರು ಪರಿಸರ ಇಂಜಿನಿಯರ್ ಇದ್ದರೂ ನಗರದಲ್ಲಿ ಸರಿಯಾಗಿ ಕಸವನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಕಸ ವಿಲೇವಾರಿ ಮಾಡುವವರು ಬೇಕಾ ಬಿಟ್ಟಿಯಾಗಿ ಹೊಳಲ್ಕೆರೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲೆ ಸುರಿದು ಪರಿಸರ ಮಾಲಿನ್ಯ ಉಂಟು ಮಾಡುತ್ತಿದ್ದು, ನಿಗದಿತ ಸ್ಥಳದಲ್ಲಿಯೇ ಕಸ ವಿಲೇವಾರಿ ಮಾಡಿಸಬೇಕು. ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಬೇರೆಡೆಗೆ ವರ್ಗಾಯಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಶಾಸಕ ತಿಪ್ಪಾರೆಡ್ಡಿ ತಾಕೀತು ಮಾಡಿದರು.

    ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌರಕಾರ್ಮಿಕರ ಕೆಲಸ ಅಪಾಯಕಾರಿ ಕೆಲಸವಾಗಿದ್ದು, ಕಾರ್ಮಿಕರು ಆರೋಗ್ಯ ಹಿತದೃಷ್ಠಿಯಿಂದ ಕೆಲಸ ಮಾಡಬೇಕಾದರೆ ಮಾಸ್ಕ್, ಗ್ಲೌಸ್, ಶೂ ಧರಿಸಿ ಕೆಲಸ ಮಾಡಬೇಕು. ಜಿಲ್ಲಾಡಳಿತ ದಿಂದ ಪೌರ ಕಾರ್ಮಿಕರ ಆರೋಗ್ಯ ಕಾಪಾಡಲು ರಕ್ಷಣಾ ಕವಚಗಳಾದ ಶೂ, ಕೈ ಕವಚ, ಮಾಸ್ಕ್, ಹೆಲ್ಮೆಟ್ ನೀಡಲಾಗಿದೆ. ಕಾರ್ಮಿಕರು ಇವುಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು

      ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ ಪೌರ ಕಾರ್ಮಿಕರನ್ನು ಸಮಾಜದಲ್ಲಿ ಕೀಳಾಗಿ ನೋಡುತ್ತಾರೆ. ಆದರೆ ಪೌರ ಕಾರ್ಮಿಕರು ನಗರ ಪ್ರದೇಶಗಳ ಡಾಕ್ಟರ್‍ಗಳಿದ್ದಂತೆ, ನಗರದಲ್ಲಿ ಸ್ವಚ್ಚತೆಯನ್ನು ಮಾಡಿ ನಗರದ ಜನರ ಆರೋಗ್ಯ ಕಾಪಾಡುತ್ತಾರೆ. ಪೌರ ಕಾರ್ಮಿಕರು ಬೆಳ್ಳಂಬೆಳಿಗ್ಗೆಯೇ ಚರಂಡಿ, ರಸ್ತೆಗಳನ್ನು ಸ್ವಚ್ಚಗೊಳಿಸಿ 10 ಗಂಟೆಗೆ ಮನೆಗೆ ಹೋಗಿ, ಆಹಾರ ತಯಾರಿಸಿಕೊಂಡು ಜೀವನ ಸಾಗಿಸುತ್ತಾರೆ, ಹೀಗಾಗಿ ಮಕ್ಕಳ ಶಿಕ್ಷಣದ ಬಗ್ಗೆ ಯಾವುದೇ ಜವಾಬ್ದಾರಿ ನಿರ್ವಹಿಸದಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು

     ಪೌರ ಕಾರ್ಮಿಕರನ್ನು 750 ಜನಸಂಖ್ಯೆಗೆ ಒಬ್ಬ ಪೌರ ಕಾರ್ಮಿಕನ್ನು ನೇಮಿಸಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳವುದು ವಿಪರ್ಯಾಸದ ಸಂಗತಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಜೆ.ಟಿ ಹನುಮಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಹಾಗೂ ನಗರಸಭೆ ಆರೋಗ್ಯ ನಿರೀಕ್ಷಕರು ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap