ಸಾಸ್ವೇಹಳ್ಳಿ ನೀರಾವರಿ ಯೋಜನೆ ಅನುಷ್ಟಾನಕ್ಕೆ ಆಗ್ರಹ

ಚಿತ್ರದುರ್ಗ:

      ರೈತರು ನಡೆಸುತ್ತಿರುವ ಸಾತ್ವಿಕ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳಬಾರದೆಂದರೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತ್ವರಿತಗತಿಯಲ್ಲಿ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಒತ್ತಾಯಿಸಿದರು.

    ಸಾಸ್ವೆಹಳ್ಳಿ ಏತ ನೀರಾವರಿ ಎರಡನೇ ಹಂತದ ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಅಖಂಡ ಕರ್ನಾಟಕ ರೈತ ಸಂಘದೊಂದಿಗೆ ನೂರಾರು ರೈತರು ಜೊತೆಗೂಡಿ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಶರಣರು ಮಾತನಾಡಿದರು.

     ನೀರಿಗಾಗಿ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಮೊದಲು ರೈತರು ಸಂಘಟಿತರಾಗಿ. ಮುಂದೊಂದು ದಿನ ನೀರು ಬರುತ್ತದೆಂದು ಸುಮ್ಮನಿರಬೇಡಿ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೂ ನೀರು ಬರಬೇಕು. ಅಲ್ಲಿಗೆ ನೀರು ಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಭರವಸೆ ನೀಡಿದ್ದಾರೆ. ಅವರು ಉಳಿದುಕೊಂಡರೆ ನೀರು ಬರುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದಾಗ ಪ್ರತಿಭಟನೆಯಲ್ಲಿದ್ದ ರೈತರು ಕೇಕೆ ಹಾಕಿದರು.

       ರಾಜಕಾರಣಿಗಳು ಜನರಿಗೆ ನೀಡಿರುವ ವಾಗ್ದಾನವನ್ನು ಪೂರೈಸಿಕೊಳ್ಳುವುದಕ್ಕಾಗಿಯಾದರೂ ನೀರು ಕೊಡಿ. ಮುರುಘಾಮಠದಲ್ಲಿ ಪ್ರತಿ ವರ್ಷವೂ ನಡೆಯುವ ಶರಣ ಸಂಸ್ಕೃತಿಯಲ್ಲಿ ಕಳೆದ ಬಾರಿ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‍ರವರನ್ನು ಆಹ್ವಾನಿಸಿ ಬಿಟ್ಟಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಿದ್ದಪಡಿಸಿ ಎಂದು ರೈತರ ಪರವಾಗಿ ಬೇಡಿಕೆ ಇಟ್ಟು ಅದಕ್ಕಾಗಿ 210 ಕೋಟಿ ರೂ.ಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸ್ಮರಿಸಿದರು.

       ನಾನು ನೀರಿಗಾಗಿ ಬೀದಿಗಿಳಿದು ಹೋರಾಡೋಣ ಎಂದು ಕರೆದಾಗ ನೀವುಗಳು ಯಾರು ಬರಲಿಲ್ಲ. ಅದೇ ನೀವು ನಡೆಸುತ್ತಿರುವ ಈ ಪ್ರತಿಭಟನೆಗೆ ನಾನು ಬಂದಿದ್ದೇನೆ. ನೀರಿಗಾಗಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡೋಣ. ಇಲ್ಲವಾದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಸೋಣ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಇರಬೇಕು ಎಂದು ಕೋರಿದರು.

      ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳು ನೀರಿನ ಬರದಿಂದ ತತ್ತರಿಸಿವೆ. ಸಾಂಘಿಕ ಹೋರಾಟ ಮಾಡೋಣ. ರೈತರೆಲ್ಲಾ ಒಟ್ಟಾಗಿದ್ದರೆ ಖಂಡಿತ ನೀರು ಬಂದೆ ಬರುತ್ತದೆ ಎಂದು ಆತ್ಮಸ್ಥೈರ್ಯ ತುಂಬಿದರು.ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ಕೆ.ರಂಗಸ್ವಾಮಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ನೀರಿಗಾಗಿ ಜಿಲ್ಲೆಯ ಎಲ್ಲಾ ಕಡೆ ಚಳುವಳಿ ಆರಂಭಿಸಿ ಪೊಲೀಸರಿಂದ ಅರೆಸ್ಟ್ ಆಗಿದ್ವಿವಿ. ಕೋದಂಡರಾಮಯ್ಯ ಅಂದಿನ ಹೋರಾಟದ ನೇತೃತ್ವ ವಹಿಸಿದ್ದರು. ಹಾಗಾಗಿ ಯಾವುದೇ ಕಾರಣಕ್ಕೂ ಅವರನ್ನು ಮರೆಯುವಂತಿಲ್ಲ ಎಂದು ನೆನಪಿಸಿಕೊಂಡರು.

       ಹೆಚ್.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ 1498 ರೈತರನ್ನು ಕರೆದುಕೊಂಡು ಅವರ ಬಳಿ ಹೋಗಿದ್ದೆ. ಜಿಲ್ಲೆಯ 54 ಹಳ್ಳಿಗಳಿಗೆ ನೀರು ಬೇಕು. ಅದಕ್ಕಾಗಿ ಭದ್ರಾಮೇಲ್ದಂಡೆ ಯೋಜನೆಯನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು. ರಾಜಕಾರಣಿಗಳ ನಿರ್ಲಕ್ಷೆಯ ಇನ್ನು ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ನೀರು ಬರದಿರಲು ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಮಾತನಾಡಿ ಶಾಶ್ವತ ಬರಗಾಲಕ್ಕೆ ತುತ್ತಾಗಿರುವ ಚಿತ್ರದುರ್ಗ ಜಿಲ್ಲೆಗೆ ಅಪ್ಪರ್‍ಭದ್ರಾ ಯೋಜನೆ ಜಾರಿಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಮೈಸೂರು, ಮಂಡ್ಯ ಭಾಗದವರು ಕಬ್ಬು ಬೆಳೆಗೆ ನೀರು ಕೇಳುತ್ತಿದ್ದಾರೆ. ಅದೇ ರೀತಿ ಘಟಪ್ರಭ, ಮಲಪ್ರಭಾದವರು ತಮ್ಮ ಬೇಡಿಕೆಗಳಿಗೆ ಹೋರಾಟ ನಡೆಸುತ್ತಿದ್ದಾರೆ. ಆಯಾ ಭಾಗದ ರೈತರು ತಮ್ಮ ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಹೋರಾಡುವ ಬದಲು ಇಡೀ ಮಧ್ಯಕರ್ನಾಟಕವೇ ಹೋರಾಟಕ್ಕೆ ಧುಮುಕಬೇಕು. ಆಗ ಸರ್ಕಾರಗಳು ಬಗ್ಗುತ್ತವೆ ಎಂದು ರೈತರನ್ನು ಎಚ್ಚರಿಸಿದರು.

      ಚಿತ್ರದುರ್ಗ ಮುರುಘಾಮಠ, ಸಿರಿಗೆರೆಯ ತರಳಬಾಳು ಮಠ ಜಿಲ್ಲೆಯ ಪ್ರಮುಖ ಮಠಗಳಾಗಿದ್ದು, ನೀರಾವರಿ ಯೋಜನೆ ಹೋರಾಟಕ್ಕಾಗಿ ಜಿಲ್ಲೆಯ ಎಲ್ಲಾ ಸ್ವಾಮಿಗಳು ನಿಮ್ಮೊಂದಿಗಿರುತ್ತೇವೆಂದು ರೈತರಿಗೆ ಭರವಸೆ ನೀಡಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ, ಭೀಮಸಮುದ್ರದ ಜಿ.ಎಸ್.ಮಂಜುನಾಥ್, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

      ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸದಸ್ಯೆ ಜಯಪ್ರತಿಭಾ, ತಾ.ಪಂ.ಅಧ್ಯಕ್ಷ ಡಿ.ಎಂ.ಲಿಂಗರಾಜು, ರೈತ ಮುಖಂಡರುಗಳಾದ ಬಸ್ತಿಹಳ್ಳಿ ಸುರೇಶ್‍ಬಾಬು, ಮಂಜಣ್ಣ, ರವಿಕುಮಾರ್, ನಾಗರಾಜ್, ಎಂ.ಬಿ.ತಿಪ್ಪೇಸ್ವಾಮಿ, ಸಿ.ಆರ್.ತಿಮ್ಮಣ್ಣ, ಭೀಮರೆಡ್ಡಿ, ಕುರುಬರಹಳ್ಳಿ ಶಿವಣ್ಣ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು. ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap