ಬೆಳಗಾವಿ
ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಜಿಲ್ಲೆಯಲ್ಲಿಯೇ ನೀರಿಗಾಗಿ ಹಾಹಾಕಾರ ತಲೆದೋರಿದೆ. ಸಚಿವರ ಗ್ರಾಮದಲ್ಲಿಯೇ ಕುಡಿಯುವ ನೀರನ್ನು ಹಣ ಕೊಟ್ಟು ಖರೀದಿಸುವಂತಹ ದುಃಸ್ಥಿತಿ ಬಂದೊದಗಿದೆ.
ಹುಕ್ಕೇರಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನೀರಿಗಾಗಿ ಜನರು ಪರಿತಪಿಸುತ್ತಿದ್ದು, ಪ್ರತಿನಿತ್ಯ ಒಂದು ಡ್ರಮ್ ನೀರಿಗೆ 50 ರೂಪಾಯಿ ಕೊಟ್ಟು ಖರೀದಿಸುವಂತಹ ಪರಿಸ್ಥಿತಿ ಇದೆ.
ವಂಟಮೂರಿ ಗ್ರಾಮದಲ್ಲಿ ಪ್ರತಿ ದಿನ 9 ಟ‌್ಯಾಂಕರ್‌ಗಳು ನೀರು ಮಾರಾಟ ಮಾಡುತ್ತಿವೆ. ಗ್ರಾಮದಿಂದ ಮೂರು ಕಿ. ಮೀ. ಅಂತರದಲ್ಲಿ ಘಟಪ್ರಬಾ ನದಿ ಇದ್ದರೂ ಗ್ರಾಮದಲ್ಲಿ ನೀರಿನ ಅಭಾವ ಕಂಡುಬಂದಿದೆ.ಗ್ರಾಮದಲ್ಲಿರುವ ನಾಲ್ಕು ಕೊಳವೆ ಬಾವಿಗಳು ಅನುಪಯುಕ್ತವಾಗಿವೆ. ಒಂದು ಡ್ರಮ್ ನೀರಿಗೆ 50 ರೂ.ಹಣ ಕೊಟ್ಟು ನೀರು ಖರೀದಿಸುತ್ತಿರುವ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಸಚಿವರ ಕ್ಷೇತ್ರದಲ್ಲಿಯೇ ಈ ರೀತಿ ನೀರಿನ ಸಮಸ್ಯೆ ಉದ್ಭವಿಸಿದ್ದು, ಕಳೆದ 10 ವರ್ಷಗಳಿಂದ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡುವಲ್ಲಿ ಸತೀಶ್ ಜಾರಕಿಹೊಳಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಟ‌್ಯಾಂಕರ್ ಮಾಲಿಕರು ಮಾತ್ರ ಪ್ರತಿ ದಿನ 40 ಸಾವಿರ ರೂ.ವರೆಗೆ ಲಾಭ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ 9 ಟ‌್ಯಾಂಕರ್‌ಗಳು ನೀರು ಸರಬುರಾಜು ಮಾಡುತ್ತಿವೆ. ಒಂದು ದಿನ ಕೂಲಿ ಕೆಲಸ ಮಾಡಿದರೆ ಇನ್ನೂರು ರೂ. ದೊರೆಯುತ್ತದೆ. ಅದರಲ್ಲಿ ಪ್ರತಿದಿನ 50 ರೂ ನೀರಿಗೆ ತೆರಬೇಕಾದ ಪರಿಸ್ಥಿತಿ ಇದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.
ಗ್ರಾಮದಲ್ಲಿ ಸುಮಾರು 4 ಸಾವಿರದಷ್ಟು ಜನಸಂಖ್ಯೆಯಿದ್ದು, ದಿನ ನಿತ್ಯ ಜನರು ನೀರಿಗಾಗಿ ಹಪಹಪಿಸುತ್ತಿದ್ದರೆ, ಗ್ರಾಮದ ಅಭಿವೃದ್ಧಿಯನ್ನು ಪರಿಗಣಿಸಿದ ಸತೀಶ್ ಜಾರಕಿಹೊಳಿ ಸಹೋದರರು ಕೇವಲ ರಾಜಕೀಯ ಕಿತ್ತಾಟದಲ್ಲಿ ತೊಡಗಿದ್ದಾರೆ. ಜನರ ಅಭಿವೃದ್ಧಿಗಿಂತ ಅವರಿಗೆ ರಾಜಕೀಯ ಪ್ರತಿಷ್ಠೆಯೇ ಹೆಚ್ಚಾಯಿತು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.