ಸತ್ಯಶೋಧನೆಯಲ್ಲಿ ವೈದ್ಯರ ಸಹಕಾರ ಬಹುಮುಖ್ಯ

ದಾವಣಗೆರೆ:

     ನ್ಯಾಯ ದಾನದಲ್ಲಿ ವೈದ್ಯರ ಸಹಕಾರ ಹಾಗೂ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಕುಲಕರ್ಣಿ ಅಂಬಾದಾಸ್ ಅಭಿಪ್ರಾಯಪಟ್ಟರು.

      ನಗರದ ಎಸ್.ಎಸ್.ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಶನಿವಾರ, ವೈದ್ಯಕೀಯ ವೃತ್ತಿಯಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳ ಕುರಿತು ಏರ್ಪಡಿಸಿದ್ದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಸತ್ಯಶೋಧನೆ ನಡೆಯುತ್ತದೆ.

     ಸತ್ಯ ಹೊರಬರಬೇಕಾದರೆ ವೈದ್ಯರ ಸಹಕಾರ ಬಹುಮುಖ್ಯವಾಗಿದೆ ಎಂದು ಹೇಳಿದರು.ಅಪರಾಧಿಗಳಿಗೆ, ದುಷ್ಟರಿಗೆ ಶಿಕ್ಷೆಯಾಗಬೇಕಾದರೆ ವೈದ್ಯರು, ಪೊಲೀಸರು ಹಾಗೂ ವಕೀಲರು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ. ವೈದ್ಯರು ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದಲ್ಲಿ, ಅವು ನ್ಯಾಯಾಲಯದಲ್ಲಿನ ನ್ಯಾಯದಾನಕ್ಕೆ ಉಪಯೋಗವಾಗಲಿದೆ ಎಂದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾತನಾಡಿ, ವೈದ್ಯರ ವಿರುದ್ಧ ವೈದ್ಯಕೀಯ ಕಾರಣಕ್ಕಾಗಿ ಮಾತ್ರವಲ್ಲದೆ, ಕಾನೂನಾತ್ಮಕ ಕಾರಣಕ್ಕಾಗಿಯೂ ದೂರು ಬರುವ ಸಂಭವ ಇರುತ್ತದೆ. ಆದ್ದರಿಂದ ವೈದ್ಯರು ವೈದ್ಯಕೀಯ ವೃತ್ತಿಯ ಜೊತೆಗೆ ಕಾನೂನು ಜ್ಞಾನವನ್ನೂ ಪಡೆಯಬೇಕು. ಆಗ ಮಾತ್ರ ವೃತ್ತಿ ಜೀವನದಲ್ಲಿ ಕಾನೂನಾತ್ಮಕ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

      ರೋಗಿಗಳು ವೈದ್ಯರ ಬಳಿ ಬಂದಾಗ, ಕಾನೂನಾತ್ಮಕವಾಗಿ ಬೇಕಾದ ರೋಗಿಯಾಗಿದ್ದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಜೊತೆಗೆ ಅವರ ದಾಖಲೆಯನ್ನು ಡೈರಿಯಲ್ಲೂ ಬರೆದಿಟ್ಟುಕೊಂಡರೆ, ತನಿಖೆಗೆ ಅವಶ್ಯವಾದಾಗ ಸಹಕಾರಿಯಾಗಲಿದೆ ಎಂದರು.

     ಬಹಳಷ್ಟು ಸಂದರ್ಭಗಳಲ್ಲಿ ಜನರು ವೈದ್ಯರ ಮೇಲೆ ಆರೋಪ ಮಾಡುತ್ತಾರೆ. ಜನರು ಆರೋಪಿಸಿದ ಕೂಡಲೇ ವೈದ್ಯರ ವಿರುದ್ಧ ಪ್ರಕರಣ ದಾಖಲಾಗುವುದಿಲ್ಲ. ಸಂಬಂಧಪಟ್ಟ ಸಮಿತಿಯ ತನಿಖೆಯಿಂದ ಆರೋಪ ದೃಢಪಟ್ಟ ನಂತರವಷ್ಟೇ ವೈದ್ಯರ ಮೇಲೆ ಎಫ್‍ಐಆರ್ ದಾಖಲು ಮಾಡಲಾಗುತ್ತದೆ. ಆದ್ದರಿಂದ ವೃಥಾ ಆರೋಪಗಳಿಗೆ ವೈದ್ಯರು ಎದೆಗುಂದಬಾರದು ಎಂದು ಸಲಹೆ ನೀಡಿದರು.

     ರೋಗಿಗಳಿಗೆ ಪ್ರಾಮಾಣಿಕವಾಗಿ ಸೇವೆ ಒದಗಿಸುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ವೈದ್ಯರು ಶ್ರಮಿಸಬೇಕೆಂದು ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್.ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಎಸ್.ನಾಗಶ್ರೀ, ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎನ್.ಕೆ.ಕಾಳಪ್ಪನವರ್, ಕೆಎಂಸಿ ವೀಕ್ಷಕ ಡಾ.ಸಿ.ಎಸ್.ಸಂತೋಷ್, ವಿಭಾಗದ ಮುಖ್ಯಸ್ಥ ಡಾ.ವಿಜಯ ಕುಮಾರ್ ಜತ್ತಿ, ಪ್ರಾಧ್ಯಾಪಕರಾದ ಡಾ.ಸುನೀಲ್ ಕದಮ್, ಡಾ.ರಾಕೇಶ್ ಮರಿಗೌಡರ್, ಡಾ.ಎನ್.ಕೆ.ಪ್ರವೀಣ್ ಕುಮಾರ್, ಆರ್.ಎಲ್. ಕಾನೂನು ಕಾಲೇಜಿನ ಪ್ರೊ.ಬಿ.ಎಸ್.ರೆಡ್ಡಿ, ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap