ಬೆಂಗಳೂರು
ಎಟಿಎಂ ಕೇಂದ್ರಗಳಿಗೆ ಹಣ ಹಾಕುವ ಖಾಸಗಿ ಏಜೆನ್ಸಿ ವಾಹನದ ಚಾಲಕನೊಬ್ಬ ಸಿನಿಮೀಯ ರೀತಿಯಲ್ಲಿ ೯೯ ಲಕ್ಷ ರೂ. ನಗದು ದೋಚಿ ವಾಹನವನ್ನು ಬಿಟ್ಟು ಪರಾರಿಯಾಗಿರುವ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಫ್ತಿಯ ಹೆಚ್‌ಆರ್‌ಬಿಆರ್ ಲೇಔಟ್‌ನಲ್ಲಿ ನಡೆದಿದೆ.ಎಟಿಎಂ ಕೇಂದ್ರಗಳಿಗೆ ಹಣ ಹಾಕುವ ರೈಟಱ್ಸ್ ಏಜೆನ್ಸಿಯ ಚಾಲಕನಾಗಿದ್ದ ಮಂಡ್ಯ ಮೂಲದ ಪವನ್, ೯೯ ಲಕ್ಷ ರೂ. ನಗದು ದೋಚಿ ಇನ್ನೂ ಕೋಟ್ಯಾಂತರ ರೂ. ಗಳಿದ್ದ ಲಾಕರ್ ಅನ್ನು ತೆಗೆಯಲಾಗದೆ, ವಾಹನವನ್ನು ಬಿಟ್ಟು ಪರಾರಿಯಾಗಿದ್ದು ಆತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ರೈಟಱ್ಸ್ ಏಜೆನ್ಸಿಯ ವಾಹನದಲ್ಲಿ ಶುಕ್ರವಾರ ಮಧ್ಯಾಹ್ನ ೪.೩೦ರ ವೇಳೆ ಕಮ್ಮನಹಳ್ಳಿ ಮುಖ್ಯರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ಹಣ ಹಾಕಲು ಗನ್ ಮ್ಯಾನ್ ಸೇರಿ ಮೂವರು ಬಂದಿದ್ದರು.ಎಟಿಎಂ ಕೇಂದ್ರದಲ್ಲಿ ಹಣ ಹಾಕಲು ಒಬ್ಬರು ಹೋಗಿದ್ದು, ಇನ್ನಿಬ್ಬರು ಗನ್ ಮ್ಯಾನ್‌ಗಳು ಹೊರಗೆ ಕಾಯುತ್ತಿದ್ದಾಗ ಹೊಂಚು ಹಾಕಿದ ವಾಹನದ ಚಾಲಕ ಪವನ್, ವಾಹನದೊಂದಿಗೆ ಪರಾರಿಯಾಗಿದ್ದಾನೆ.
ವಾಹನವನ್ನು ಲಿಂಗರಾಜಪುರದ ಬಳಿಗೆ ತಂದು ಅದರಲ್ಲಿದ್ದ ೯೯ ಲಕ್ಷ ರೂ. ನಗದು ದೋಚಿ,ಕೋಟ್ಯಾಂತರ ಹಣವಿದ್ದ ಲಾಕರ್‌ಗಳನ್ನು ಒಡೆಯಲು ವಿಫಲ ಯತ್ನ ನಡೆಸಿ, ವಾಹನದಲ್ಲಿ ಜಿಪಿಎಸ್ ಇದ್ದ ಕಾರಣ ಸುಲಭವಾಗಿ ಸಿಕ್ಕಿ ಬೀಳುವ ಭಯದಿಂದ ಅಲ್ಲೇಬಿಟ್ಟು ಪರಾರಿಯಾಗಿದ್ದಾನೆ.
ಹಣದೊಂದಿಗೆ ವಾಹನದ ಚಾಲಕ ಪರಾರಿಯಾಗಿದ್ದನ್ನು ಗಮನಿಸಿದ ಗನ್ ಮ್ಯಾನ್‌ಗಳು ಬೆನ್ನಟ್ಟಿದರಾದರೂ, ಅತಿವೇಗದಲ್ಲಿ ಪವನ್ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಣಸವಾಡಿ ಪೊಲೀಸರು ಪರಿಶೀಲನೆ ನಡೆಸಿದ್ದು, ಎಟಿಎಂ ಕೇಂದ್ರ ಹಾಗೂ ವಾಹನ ಬಿಟ್ಟುಹೋದ ಸ್ಥಳಗಳಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ.
ಸುಳಿವು ಪತ್ತೆ
ಸ್ಥಳಕ್ಕೆ ಧಾವಿಸಿದ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಪುರವಾಡಾ ಅವರು ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ, ಪವನ್ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ತಂಡಗಳು ರಾತ್ರಿಯಿಂದಲೇ ಕಾರ್ಯಾಚರಣೆಗಿಳಿದಿದ್ದು, ಆರೋಪಿಯ ಸುಳಿವು ಪತ್ತೆಹಚ್ಚಿದ್ದಾರೆ.
ಆರೋಪಿ ಪವನ್‌ನ ಸುಳಿವು ದೊರೆತಿದ್ದು, ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು, ಲಾಕರ್ ಏನಾದರೂ ಒಡೆದಿದ್ದರೆ, ಕೋಟ್ಯಾಂತರ ರೂ. ಕಳವಾಗುತ್ತಿತ್ತು. ರೈಟಱ್ಸ್ ಏಜೆನ್ಸಿಯವರ ನಿರ್ಲಕ್ಷ್ಯ ಕಾಣುತ್ತಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ