ಚಿತ್ರದುರ್ಗ
ಇನ್ನೂ ಕೆಲವೇ ತಿಂಗಳಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಹಾಸ್ಟಲ್‍ಗಳು ಬಾಡಿಗೆ ಕಟ್ಟಡದಲ್ಲಿ ನಡೆಯದೇ ಸ್ವಂತ ಕಟ್ಟಡಗಳಲ್ಲಿ ನಡೆಯಲಿದೆ ಇದರಿಂದ ಸರ್ಕಾರಕ್ಕೆ ಬಾಡಿಗೆ ಹಣ ಉಳಿತಾಯವಾಗಲಿದೆ ಎಂದು ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಜಿಲ್ಲಾಪಂಚಾಯತ್ ಪಕ್ಕದಲ್ಲಿರುವ ಸರ್ಕಾರಿ ಬಾಲಕರ ಪದವಿ ಕಾಲೇಜಿನ ವಿದ್ಯಾರ್ಥಿನಿಲಯದ ಆವರಣದಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ಕೇಂದ್ರವಾಗಿರುವುದರಿಂದ ಓದುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಮಕ್ಕಳಿಗೆ ಕೊಠಡಿ ಕೊರತೆಯಾಗುತ್ತಿದೆ ಎನ್ನುವುದನ್ನು ಅರಿತು ಈ ಕಾಮಗಾರಿ ಪ್ರಾರಂಭಿಸಲಾಗಿದೆ. ಇದರಿಂದ ಕೊಠಡಿ ಕೊರತೆ ನೀಗುವ ಸಾಧ್ಯತೆಗಳಿವೆ. ಈಗಾಗಲೇ ತಾಲ್ಲೂಕಿನಲ್ಲಿ 55 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಡೆಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡರೆ ಬಹುತೇಕ ಕೊಠಡಿ ಕೊರತೆ ನಿವಾರಣೆಯಾಗಲಿದೆ. ಇದುವರೆಗೆ ಸರ್ಕಾರ ಬಾಡಿಗೆ ತೆತ್ತು ವಿದ್ಯಾರ್ಥಿನಿಲಯ ನಡೆಸುತ್ತಿತ್ತು. ಸ್ವಂತ ಕಟ್ಟಡವಾದರೆ ಬಾಡಿಗೆ ಹಣ ಉಳಿಯಲಿದೆ ಎಂದು ಶಾಸಕರು ತಿಳಿಸಿದರು.
ಈಗ ಪ್ರಾರಂಭವಾಗಿರುವ 2 ಕೋಟಿ ರೂ ವೆಚ್ಚದ ಕಾಮಗಾರಿ ಮಾಡಲಾಗುತ್ತಿದ್ದು 6 ರಿಂದ 9 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿ, ತಾಲ್ಲೂಕಿನಲ್ಲಿ ಸುಮಾರು 55 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು ಇದರಿಂದಾಗಿ ಸರ್ಕಾರಕ್ಕೆ ಬಾಡಿಗೆ ಹೊರೆ ಕಡಿಮೆಯಾಗಲಿದೆ. ಇನ್ನು ಮುಂದೆ ಸ್ವಂತ ಕಟ್ಟಡದಲ್ಲಿ ವಿದ್ಯಾರ್ಥಿಗಳು ವಾಸ ಮಾಡಬಹುದು. ಇದನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾವಂತರಾಗುವಂತೆ ತಿಪ್ಪಾರೆಡ್ಡಿ ಸಲಹೆ ನೀಡಿದರು.
ನಗರದ ವೆಂಕಟರಮಣಸ್ವಾಮಿ ದೇವಸ್ಥಾನದ ಬಳಿ ಇರುವ ರೇಷ್ಮೆ ಇಲಾಖೆ ಹಳೆ ಜಾಗದಲ್ಲಿ ಈಗಾಗಲೇ ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ ನಡೆಸಲಾಗುತ್ತಿದೆ. ಇನ್ನುಮುಂದೆ ಈ ಜಾಗದಲ್ಲಿ ಹೊಸ ವಿದ್ಯಾರ್ಥಿನಿಲಯ ಕಟ್ಟುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ರೇಷ್ಮೆ ಇಲಾಖೆ ಜಾಗವನ್ನು ನೀಡಿದರೆ ಅಲ್ಲಿಯೂ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.
ಕೇಂದ್ರೀಯ ವಿದ್ಯಾಲಯ ಮಂಜೂರಾಗಿ ಅನೇಕ ವರ್ಷವಾಗಿದೆ. ಜಾಗವನ್ನು ಗುರುತಿಸಲಾಗಿದ್ದು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲಿ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧಿಕಾರಿ ಮೂಡಲಗಿರಿಯಪ್ಪ ಹಾಗೂ ಇತರರು ಭಾಗವಹಿಸಿದ್ದರು.