ಶೋಷಿತ ವರ್ಗವನ್ನು ಮೇಲೆತ್ತಿದವರು ಮಾಚಿದೇವರು

ಚಿಕ್ಕನಾಯಕನಹಳ್ಳಿ

         ಯಾರನ್ನಾದರೂ ನಾವು ಸ್ಮರಣೆ ಮಾಡುತ್ತೇವೆ, ಹೊಗಳುತ್ತೇವೆ, ಅವರ ಆಚರಣೆ ಪಾಲಿಸಲು ಕರೆ ನೀಡುತ್ತೇವೆ ಎಂದರೆ ಅವರು ಮೌಢ್ಯಗಳ ವಿರುದ್ಧವಾಗಿ, ಬಡವರ, ಶೋಷಿತ ವರ್ಗವನ್ನು ಮೇಲೆತ್ತುವಲ್ಲಿ ಶ್ರಮಿಸಿದವರಾಗಿರಬೇಕು. ಅಂತಹವರ ಸಾಲಿನಲ್ಲಿ ಮಾಚಿದೇವರು ಶ್ರೇಷ್ಠ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

        ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲ್ಯಾಣದಲ್ಲಿ ಬಸವಣ್ಣನವರ ಜೊತೆಯಲ್ಲಿ ಬೇರೆ ಜನಾಂಗಗಕ್ಕೆ ಸೇರಿದವರು ಹಲವರಿದ್ದರು, ಅವರಲ್ಲಿ ಮಡಿವಾಳ ಮಾಚಿದೇವರು ಒಬ್ಬರು. ಬಸವಣ್ಣನವರಿಗೆ ಬಹಳ ಹತ್ತಿರವಾಗಿದ್ದ ಮಾಚಿದೇವರು ಕಾಯಕದ ಜೊತೆಗೆ ಬಹಳಷ್ಟು ವಚನಗಳನ್ನು ರಚಿಸಿದ್ದಾರೆ. ಕಲ್ಯಾಣದಲ್ಲಿ ಕ್ರಾಂತಿ ಅತಿರೇಖಕ್ಕೆ ಹೋದಾಗ ಶರಣರೆಲ್ಲಾ ಅವರ ಸ್ಥಾನವನ್ನು ಬಿಟ್ಟು ಹೋದ ಸಂದರ್ಭದಲ್ಲಿ ಶಿವಶರಣರಿಗೆ ರಕ್ಷಣೆ ಕೊಡಲು ಬಿಜ್ಜಳರ ವಿರುದ್ಧವಾಗಿ ಒಂದು ಸೈನ್ಯ ಕಟ್ಟಿದ್ದರು. ನಂತರದ ದಿನಗಳಲ್ಲಿ ಮಾಚಿದೇವರು ಬಹಳ ವ್ಯಾಪಕವಾಗಿ ಸಂಚಾರ ಮಾಡಿ ವಚನಗಳನ್ನು ರಚಿಸಿದರು ಎಂದ ಅವರು, ಮಡಿವಾಳ ಜನಾಂಗವನ್ನು ಎಸ್.ಸಿ ಜನಾಂಗಕ್ಕೆ ಸೇರಿಸುವುದು ಕೇಂದ್ರ ಸರ್ಕಾರದ ಮಟ್ಟದ್ದಾಗಿರುವುದರಿಂದ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದರು.

          ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಬಸವಣ್ಣನವರು ಕೈಗೊಳ್ಳುತ್ತಿದ್ದ ಪ್ರತಿಯೊಂದು ವಿಷಯಕ್ಕೂ ಹೆಗಲಿಗೆ ಹೆಗಲು ಕೊಟ್ಟು ಅವರ ಜೊತೆಯಾಗಿ ನಿಂತಿದ್ದವರು ಮಾಚಿದೇವರು. ಬಸವಣ್ಣನವರ ಮುಂದಾಳತ್ವದಲ್ಲಿ ಮಾಚಿದೇವರು ದೇಶಾದ್ಯಂತ ಸಂಚರಿಸಿ ಸಾಮಾಜಿಕ ಪಿಡುಗುಗಳು, ಜಾತಿ ತಾರತಮ್ಯ ಹೋಗಲಾಡಿಸಲು ಶ್ರಮಿಸಿದರು ಎಂದ ಅವರು, ಮಾಚಿದೇವರು ಹಲವು ವಚನಗಳನ್ನು ರಚಿಸುವ ಮೂಲಕ ಎಲ್ಲರಿಗೂ ಮಾರ್ಗದರ್ಶನ ನೀಡಿದ್ದಾರೆ ಎಂದರು.

         ತಾಲ್ಲೂಕು ಮಡಿವಾಳ ಜನಾಂಗದ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ, ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ರಾಜ್ಯ ಮಡಿವಾಳ ಜನಾಂಗ ಸರ್ಕಾರದ ಮಟ್ಟದಲ್ಲಿ ಒತ್ತಾಯಿಸಿದೆ. ತಾಲ್ಲೂಕಿನ ಪರವಾಗಿ ಶಾಸಕರು ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ಮಂಡಿಸಿ ನಮ್ಮ ಸಮಾಜದ ಪರವಾಗಿ ನಿಲ್ಲಬೇಕು ಎಂದರು.

        ತಹಸೀಲ್ದಾರ್ ತೇಜಸ್ವಿನಿ ಮಾತನಾಡಿ, 12ನೇ ಶತಮಾನದಲ್ಲಿ ಆದ ಕ್ರಾಂತಿಕಾರಿ ಬದಲಾವಣೆ ಸಮಯದಲ್ಲಿ ಅಸ್ಪøಶ್ಯತೆ, ಅಸಮಾನತೆ ಹೋಗಲಾಡಿಸಲು ಶ್ರಮಿಸಿದವರು ಮಾಚಿದೇವರು. ಅವರ ದಾರಿ ನಮಗೆ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ತೇಜಸ್ವಿನಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ತಾ.ಪಂ.ಸದಸ್ಯ ಕೇಶವಮೂರ್ತಿ, ಪುರಸಭಾ ಸದಸ್ಯ ಸಿ.ಬಸವರಾಜು, ಸಿ.ಬಿ.ತಿಪ್ಪೇಸ್ವಾಮಿ, ಮಾಜಿ ಪುರಸಭಾಧ್ಯಕ್ಷರಾದ ಹೆಚ್.ಬಿ.ಪ್ರಕಾಶ್, ದೊರೆಮುದ್ದಯ್ಯ, ಬಿಆರ್‍ಸಿ ಸಂಗಮೇಶ್, ರೋಟರಿ ಕ್ಲಬ್‍ನ ಮಿಲ್ಟ್ರಿಶಿವಣ್ಣ, ಬರಗೂರು ಬಸವರಾಜು, ಕಾಂಗ್ರೆಸ್ ಮುಖಂಡ ಕೆ.ಜಿ.ಕೃಷ್ಣೆಗೌಡ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ