ತುಮಕೂರು
ವಿಶೇಷ ವರದಿ : ವಿನಯ್. ಎಸ್
ಸ್ಮಾರ್ಟ್… ಸ್ಮಾಟ್…, ಸ್ಮಾರ್ಟ್ ಸಿಟಿ ಎಂಬ ಅಣೆಪಟ್ಟಿಯನ್ನು ಅಂಟಿಸಿಕೊಂಡು. ಸ್ಮಾರ್ಟ್ ಸಿಟಿಯ ಕಿರೀಟದ ಗರಿಯನ್ನು ತನ್ನ ಮುಡಿಗೇರಿಸಿಕೊಳ್ಳಲು ಶರವೇಗದಲ್ಲಿ ಸಾಗುತ್ತಿರುವ ತುಮಕೂರು ನಗರದಲ್ಲಿ ಯಾವ ಜಾಗವು ಸ್ಮಾರ್ಟ್ ಆಗಿಲ್ಲ. ಬೀದಿಬದಿಯ ವ್ಯಾಪಾರಿಗಳಿಗೆ ಯಾವುದೇ ಪ್ರತ್ಯೇಕ ಮಾರುಕಟ್ಟೆಯನ್ನು ಒದಗಿಸಿಕೊಡುವಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಅಕ್ಷರಶಃ ಸಫಲರಾಗಿಲ್ಲ.
ತುಮಕೂರಿನಿಂದ ಬೆಳಗುಂಬ ರಸ್ತೆಯಲ್ಲಿ ಕೋಟೆ ಕೊಲ್ಲಾಪುರದಮ್ಮ ದೇವಸ್ಥಾನದ ಮುಂಭಾಗದಲ್ಲಿ ಒಂದು ಮಿನಿ ಮಾರುಕಟ್ಟೆ ಸದ್ದಿಲ್ಲದೆ ಪ್ರಾರಂಭವಾಗಿದೆ. ಈ ಮಿನಿ ಮಾರುಕಟ್ಟೆಯಿಂದ ಹಲವಾರು ಸಮಸ್ಯೆಗಳು ಉದ್ಭವವಾಗಿ ರಸ್ತೆಯಲ್ಲಿ ಸಂಚರಿಸುವವರಿಗೆ ಮತ್ತು ಸಾರ್ವಜನಿಕರಿಗೆ ವಿನಾಕಾರಣ ಕಿರಿಕಿರಿಯಾಗುತ್ತಿದೆ.
ಸದ್ದಿಲ್ಲದೆ ಸೃಷ್ಟಿಯಾದ ಮಿನಿ ಮಾರ್ಕೆಟ್..!
ಹನುಮಂತಪುರದ ಕೋಟೆ ಕೊಲ್ಲಾಪುರದಮ್ಮ ದೇವಾಲಯದ ಬಳಿಯಲ್ಲಿ ಯಾವುದೇ ಅಧಿಕೃತವಾದ ತರಕಾರಿ ಮಾರುಕಟ್ಟೆಯಿಲ್ಲ ಆದರೂ ಇಲ್ಲಿ ದಿನ ನಿತ್ಯ ಸಂಜೆ 4 ರಿಂದ ರಾತ್ರಿ 8 ಗಂಟೆಯ ವರೆಗೆ ಮಿನಿ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಈ ಮಾರುಕಟ್ಟೆಯನ್ನು ಪ್ರಾರಂಭಿಸಲು ಅಧಿಕಾರಿಯಾಗಲಿ, ಪಾಲಿಕೆಯಾಗಲಿ, ಯಾವುದೇ ರೀತಿಯಲ್ಲಿಯೂ ಪರವಾನಗಿ ನೀಡದಿದ್ದರೂ ಇಲ್ಲಿ ಸಂಜೆ ಮಾರುಕಟ್ಟೆ ಪ್ರಾರಂಭವಾಗಿದೆ. ಈ ಮಾರುಕಟ್ಟೆ, ಇಲ್ಲಿಯವರೆಗೂ ಯಾವ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಒಂದು ಸೋಜಿಗದ ಸಂಗತಿಯೇ ಸರಿ.
ಪ್ರತಿ ನಿತ್ಯ ಟ್ರಾಫಿಕ್..!
ಕೊಲ್ಲಾಪುರದಮ್ಮ ದೇವಸ್ಥಾನದ ಮುಂಭಾಗದಲ್ಲಿ ಪ್ರಾರಂಭವಾಗಿರುವ ಈ ತರಕಾರಿ ಮಾರುಕಟ್ಟೆಯಿಂದ ಪ್ರತಿದಿನ ಸಂಜೆ, ಈ ಜಾಗದಲ್ಲಿ ಟ್ರಾಫಿಕ್ ಇರುತ್ತದೆ. ತುಮಕೂರು ನಗರಕ್ಕೆ ಕೆಲಸಕ್ಕೆಂದು ಬರುವ ಕಾರ್ಮಿಕರು, ಸಗಟು ವ್ಯಾಪಾರಿಗಳು, ಸರ್ಕಾರಿ ನೌಕರರು ಪುನಃ ಮನೆಗೆ ತೆರುಳುವುದು ಸಂಜೆಯೇ ಆಗುವುದರಿಂದ ಟ್ರಾಫಿಕ್ ಇರುತ್ತದೆ. ಆದರೆ ಈ ಮಿನಿ ತರಕಾರಿ ಮಾರುಕಟ್ಟೆಯಿಂದಾಗಿ ವಾಹನ ದಟ್ಟಣೆ ಸಮಸ್ಯೆ ಹೆಚ್ಚಾಗಿದ್ದು ದ್ವಿಚಕ್ರ ವಾಹನ ಸವಾರರಿಗೂ ಮತ್ತು ಕಾರು ಚಾಲಕರಿಗೆ ಈ ಟ್ರಾಫಿಕ್ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ.
ಜನ ಸಂದಣಿ..!
ಈ ಸ್ಥಳದಲ್ಲಿ ದಿನ ನಿತ್ಯ ಸಂಜೆಯ ವೇಳೆ ತರಕಾರಿ ಮಾರುಕಟ್ಟೆ ಪ್ರಾರಂಭವಾಗುವುದರಿಂದ ತರಕಾರಿಗಳನ್ನು ಕೊಳ್ಳಲು ಸಾಮಾನ್ಯವಾಗಿ ಸಾರ್ವಜನಿಕರು ಅಕ್ಕ-ಪಕ್ಕದ ಬಡಾವಣೆಯಲ್ಲಿ ವಾಸಿಸುತ್ತಿರುವವರು ಇಲ್ಲಿಗೆ ಬರುತ್ತಾರೆ. ಅದರಲ್ಲೂ ಇಲ್ಲಿ ಫ್ರೆಶ್ (ತಾಜವಾದ) ತರಕಾರಿಗಳು ಸಿಗುವುದರಿಂದ ಸಾಮಾನ್ಯವಾಗಿಯೇ ಇಲ್ಲಿಗೆ ಹೆಚ್ಚು ಜನರು ಬರುವುದರಿಂದ ಜನಸಂದಣಿ ಇರುತ್ತದೆ. ಕೊಲ್ಲಾಪುರದಮ್ಮ ದೇವಸ್ಥಾನದ ಪಕ್ಕದಲ್ಲಿ ಪಾರ್ಕ್ ಇದ್ದು ಇಲ್ಲಿಗೆ ಸಂಜೆಯ ವೇಳೆ ವಾಕಿಂಗ್ ಬರುವವರಿಗೆ ತೊಂದರೆಯಾಗುತ್ತಿz್ದ.
ರಸ್ತೆ ಬದಿಯಲ್ಲಿಯೇ ವಾಹನ ತಂಗುದಾಣ..!
ಮಿನಿ ಸಂತೆ ಮಾರುಕಟ್ಟೆಯಿಂದಾಗಿ ಇಲ್ಲಿಗೆ ತರಕಾರಿ ಕೊಳ್ಳಲು ಹೆಚ್ಚು ಜನ ಬರುತ್ತಾರೆ. ತರಕಾರಿ ಖರೀದಿಗೆ ಬರುವ ಸಾರ್ವಜನಿಕರೆಲ್ಲರು ದ್ವಿಚಕ್ರ ವಾಹನಗಳಲ್ಲೆ ಬರುತ್ತಾರೆ ಮತ್ತು ಕೋಟೆ ಕೊಲ್ಲಾಪುರದಮ್ಮ ದೇವಾಲಯಕ್ಕೆ ಭಕ್ತಾದಿಗಳು ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುತ್ತಾರೆ. ಇಲ್ಲಿಗೆ ಬರುವ ಬಹುತೇಕ ಜನರು ತಮ್ಮ ಗಾಡಿಗಳನ್ನು ಪಾರ್ಕ್ ಮಾಡಲು ಹರಸಾಹಸ ಪಡುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ರಸ್ತೆಯ ಪಕ್ಕದಲ್ಲಿ ಯಾವುದೇ ನೋ ಪಾರ್ಕಿಂಗ್ ಬೋರ್ಡ್ ಇಲ್ಲದಿರುವುದರಿಂದ ಸಾರ್ವಜನಿಕರು ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಪಕ್ಕದಲ್ಲಿನ ದಿನಸಿ ಮತ್ತು ಮೆಡಿಕಲ್ ಶಾಪ್‍ಗಳ ಮಾಲೀಕರಿಗೆ ಮತ್ತು ಗ್ರಾಹಕರಿಗೂ ತೊಂದರೆಯಾಗುತ್ತಿದೆ.
ಕುಡಿಯುವ ನೀರಿನ ಘಟಕಕ್ಕೂ ತೊಂದರೆ..!
ತುಮಕೂರಿನಿಂದ ಬೆಳಗುಂಬ ಕಡೆ ಹೋಗುವ ರಸ್ತೆಯಲ್ಲಿನ ಕೊಲ್ಲಾಪುರದಮ್ಮ ದೇವಾಲಯದ ಎಡಭಾಗದಲ್ಲಿ ಶುದ್ಧ ನೀರಿನ ಘಟಕವಿದೆ. ಈ ನೀರಿನ ಘಟಕಕ್ಕೆ ದಿನ ನಿತ್ಯ ನೂರಾರು ಮಂದಿ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಬರುತ್ತಾರೆ. ಅದರಲ್ಲೂ ಸಂಜೆಯ ವೇಳೆಯೇ ಹೆಚ್ಚು ಜನ ಇಲ್ಲಿಗೆ ಬರುವುದರಿಂದ ಅವರಿಗೂ ಈ ಮಾರುಕಟ್ಟೆ ಒಂದು ಶಾಪವಾಗಿ ಪರಿಣಮಿಸಿದೆ.
ರಸ್ತೆಯ ಬದಿಯಲ್ಲಿಯೇ ಮಾರುಕಟ್ಟೆ ಸೃಷ್ಟಿ..!
ಕೊಲ್ಲಾಪುರದಮ್ಮ ದೇವಾಯಲದ ಎಡಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಮುಂಭಾಗದ ರಸ್ತೆಯ ಎರಡು ಬದಿಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಅಂಗಡಿಗಳನ್ನು ಹಾಕಿಕೊಂಡಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವವರಿಗೆ ತೀರ ತೊಂದರೆಯಾಗುತ್ತದೆ. ಒಟ್ಟಿಗೆ ಎರಡು ಮೂರು ವಾಹನಗಳು ಮುಖಾ-ಮುಖಿಯಾಗಿ ಬಂದರೆ ಟ್ರಾಫಿಕ್ ಪ್ರಾರಂಭವಾಗುತ್ತದೆ. ಈ ಟ್ರಾಫಿಕ್ ಮತ್ತೆ ಮರಳಿ ಯಥಾಸ್ಥಿತಿಗೆ ಮರಳಲು 10-15 ನಿಮಿಷ ಬೇಕಾಗುತ್ತದೆ.
ಮೊಬೈಲ್ ಟಿಫನ್ ಸೆಂಟರ್‍ಗಳ ಹಾವಳಿ
ತುಮಕೂರಿನಿಂದ ಬೆಳಗುಂಬ ಮಾರ್ಗದ ಹನುಮಂತ ಪುರದಲ್ಲಿ ರಸ್ತೆಯ ಎರಡು ಇಕ್ಕೆಲಗಳಲ್ಲಿ ಬೆಳಗ್ಗೆ 7 ರಿಂದ 11ರ ವರೆಗೆ ಮತ್ತು ಸಂಜೆ 6 ರಿಂದ 8 ಗಂಟೆಯ ವರರೆಗೆ ಮೊಬೈಲ್ ಟಿಫನ್ ಸೆಂಟರ್‍ಗಳು ಮತ್ತು ಫಾಸ್ಟ್ ಫುಡ್ ಕಾರ್ನರ್, ಕಬಾಬ್ ಸೆಂಟರ್‍ಗಳನ್ನು ತೆರೆಯುತ್ತಾರೆ. ಇದರಿಂದ ಇಲ್ಲಿಗೆ ಹೆಚ್ಚು ಜನ ಗ್ರಾಹಕರು ಮತ್ತು ವ್ಯಾಪಾರಿಗಳು ಬರುತ್ತಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಇವುಗಳಿಂದ ರಸ್ತೆಯ ಪಕ್ಕದಲ್ಲಿನ ನೈರ್ಮಲ್ಯಕ್ಕೂ ಕೊಡಲಿ ಏಟು ಬಿದ್ದಿದೆ.
ಹನುಮಂತಪುರದಲ್ಲಿನ ಈ ಮಿನಿ ತರಕಾರಿ ಮಾರುಕಟ್ಟೆಯಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೂ ಮತ್ತು ಪಾರ್ಕ್‍ಗೆ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಪಾಲಿಕೆ ಅಧಿಕಾರಿಗಳಾಗಲಿ ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸಿ ಇಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕವಾದ ಮಾರುಕಟ್ಟೆಯನ್ನು ನಿಗದಿ ಮಾಡಿದರೆ ಇಲ್ಲಿನ ವ್ಯಾಪಾರಸ್ಥರಿಗೂ ಮತ್ತು ಜನ ಸಾಮಾನ್ಯರಿಗೂ ಹಾಗೂ ವಾಹನ ಸವಾರರಿಗೂ ಅನುಕೂಲವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿw
