ಬಳ್ಳಾರಿ.
ಬಸರಕೋಡು-ಗೂಳ್ಯಂ ವೇದಾವತಿ ನದಿ ಸೇತುವೆ ಹೋರಾಟ ಸಮಿತಿಯ ವತಿಯಿಂದ ಬಸರಕೋಡು ಗುಳ್ಯಂ ನಡುವೆ ಹಗರಿ ವೇದಾವತಿ ನದಿಗೆ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿ, ಜೂನ್ 14, 2019 ನಡೆಯುವ ಪ್ರತಿಭಟನಾ ರ್ಯಾಲಿಗೆ ಪೂರಕವಾಗಿ ಬಸರಕೋಡು ಗ್ರಾಮದಲ್ಲಿ ಸಹಿ ಸಂಗ್ರಹಣೆ ಕಾರ್ಯಕ್ರಮ ಜರುಗಿತು.
ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾ.ರಾಧಾಕೃಷ್ಣ ಉಪಾಧ್ಯ ನೆರವೇರಿಸಿದರು. ಅವರು ಮಾತನಾಡುತ್ತಾ “ಬಸರಕೋಡು ಗ್ರಾಮವು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನಲ್ಲಿದೆ. ಗೂಳ್ಯಂ ಗ್ರಾಮವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಈ ಎರಡೂ ಗ್ರಾಮಗಳ ಮಧ್ಯೆ ವೇದಾವತಿ ನದಿಯು(ಹಗರಿ) ಹರಿದು ಹೋಗುತ್ತದೆÉ. ಬಸರಕೋಡಿನಿಂದ ಗೂಳ್ಯಂ ಗ್ರಾಮಕ್ಕೆ ಹೋಗುವ ವಾಹನಗಳಾಗಲೀ ಪಾದಾಚಾರಿಗಳಾಗಲೀ, ಈ ನದಿಯ ನೀರಿನಲ್ಲಿ ಒಂದು ಕಿ.ಮಿ. ಅಂತರವನ್ನು ಕ್ರಮಿಸಬೇಕಾಗುತ್ತದೆ.
ಜೊತೆಗೆ ಹಗರಿಯು ಉಸುಕಿನಿಂದ ಕೂಡಿರುವುದರಿಂದ ಈ ಒಂದು ಕಿ.ಮಿ. ಅಂತರವನ್ನು ಕಾಲ್ನಡಿಗೆಯಿಂದ ದಾಟಿ ಹೋಗಲು ಹರಸಾಹಸ ಮಾಡಬೇಕಾಗಿದೆ. ಉಸುಕಿನಲ್ಲಿ ಕಾಲುಸಿಕ್ಕಿ ಹಾಕಿಕೊಳ್ಳುತ್ತದೆ. ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಈ ಒಂದು ಕಿ.ಮಿ. ದಾಟುವುದರಲ್ಲಿ ಸುಸ್ತಾಗಿ ಹೋಗುತ್ತಾರೆ. ಪ್ರಸ್ತುತ ಎರಡೂ ಭಾಗದ ಜನರು ಈ ದಾರಿಯನ್ನೇ ಅವಲಂಭಿತವಾಗಿದ್ದು ಬಂಡಿ, ಟ್ರ್ಯಾಕ್ಟರ್ ಹಾಗೂ ದ್ವಿಚಕ್ರ ವಾಹನಗಳು ಕೂಡ ಉಸುಕಿನಲ್ಲಿ ಸಿಕ್ಕಿ ಬಿದ್ದು ಹೊರಬರಲು ಹರಸಾಹಸ ಮಾಡಬೇಕಾಗಿದೆ. ಈ ಎರಡು ಗ್ರಾಮಗಳೂ ಆಂಧ್ರ-ಕರ್ನಾಟಕದ ಗಡಿಭಾಗಗಳಾಗಿರುವುದರಿಂದ ವ್ಯಾಪಾರ-ವಹಿವಾಟು ಹಾಗೂ ಜನರಲ್ಲಿ ಪರಸ್ಪರ ಕೌಟುಂಬಿಕ
ಸಂಬಂಧಗಳಿರುವುದರಿಂದ ದಿನನಿತ್ಯ ನೂರಾರು ಜನ ನದಿಯ ಮುಖಾಂತರವೇ ಸಾಗಬೇಕಾಗಿದೆ. ಆಂಧ್ರದ ಕರ್ನೂಲು ಜಿಲ್ಲೆಯಿಂದ ಗೂಳ್ಯಂ ಮಾರ್ಗವಾಗಿ ಬಳ್ಳಾರಿಗೆ ಬರುವ ಅನೇಕ ಬಡಜನರು ಸರ್ಕಾರಿ ಆಸ್ಪತ್ರೆ ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹಗರಿಯನ್ನು ದಾಟಿ ಬರಬೇಕು. ಹಾಗೂ ಗೂಳ್ಯಂ ಈ ಭಾಗದ ಜನತೆಗೆ ಪುಣ್ಯಕ್ಷೇತ್ರವಾಗಿರುವುದರಿಂದ ವರ್ಷಕ್ಕೊಮ್ಮೆ ಜರುಗುವ ಗಾದಿಲಿಂಗಪ್ಪ ತಾತನವರ ಜಾತ್ರಾ ಸಂದರ್ಭದಲ್ಲಿ ಸಾವಿರಾರು ಜನರು ಈ ನದಿಯನ್ನು ದಾಟಿಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ಈ ನದಿಗೆ ಅಡ್ಡವಾಗಿ ಒಂದು ಸೇತುವೆಯನ್ನು ನಿರ್ಮಾಣ ಮಾಡಬೇಕೆಂಬುದು ಈ ಭಾಗದ ಜನತೆಯ ಬಹುವರ್ಷಗಳ ಬೇಡಿಕೆಯಾಗಿದೆ. ಅನೇಕ ವರ್ಷಗಳ ಹಿಂದೆಯೇ ಈ ಸೇತುವೆ ನಿರ್ಮಾಣಕ್ಕೆ ಯೋಜನೆ ಮಾಡಿದ್ದರೂ ಅದು ನೆನೆಗುದಿಗೆ ಬಿದ್ದಿದೆ” ಎಂದರು.
ಸಮಿತಿಯ ಸಂಚಾಲಕರಾದ ಈ.ಹನುಮಂತಪ್ಪ ಮಾತನಾಡುತ್ತಾ “ಈ ಯೋಜನೆಯನ್ನು ಜಾರಿಗೊಳಿಸಿ ವೇದಾವತಿ ನದಿಗೆ (ಹಗರಿ) ಶಾಶ್ವತ ಸೇತುವೆಯನ್ನು ನಿರ್ಮಾಣ ಮಾಡುವುದರ ಮೂಲಕ ಈ ಸಮಸ್ಯೆಗೆ ಅಂತ್ಯ ಹಾಡಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.
ಶಾಶ್ವತ ಸೇತುವೆ ನಿರ್ಮಾಣವಾಗುವವರೆಗೆ ತಾತ್ಕಾಲಿಕವಾಗಿ ಗರ್ಸು ಹಾಕಿ ರಸ್ತೆ ಮಾಡುವುದರಿಂದ ಇಡೀ ಬಳ್ಳಾರಿ, ಕಂಪ್ಲಿ, ಸಿರುಗುಪ್ಪ, ಕುರುಗೋಡು ತಾಲೂಕುಗಳ ಲಕ್ಷಾಂತರ ಜನರಿಗೆ ಉಪಯೋಗವಾಗುತ್ತದೆ. ಈ ಕುರಿತು ಈ ಭಾಗದ ಹಲವಾರು ಬಾರಿ ಮನವಿ ಮಾಡಿದರೂ ಉಪಯೋಗವಾಗಿಲ್ಲ. ಆದ್ದರಿಂದ ಈ ಎಲ್ಲಾ ತಾಲೂಕಿನ ಜನ ತಮ್ಮ ಹಕ್ಕೊತ್ತಾಯ ಮಂಡಿಸಲು ‘ಬಸರಕೋಡು-ಗೂಳ್ಯಂ ವೇದಾವತಿ ನದಿ ಸೇತುವೆ ಹೋರಾಟ ಸಮಿತಿ’ ಯನ್ನು ರಚಿಸಲಾಗಿದೆ. ನಮ್ಮ ಈ ಹೋರಾಟಕ್ಕೆ ಜನತೆಯು ಎಲ್ಲಾ ರೀತಿಯಿಂದ ಬೆಂಬಲ ನೀಡಿ, ಯಶಸ್ವಿಗೊಳಿಸಬೇಕೆಂದು ಮನವಿ ಮಾಡುತ್ತೇವೆ. ಹಾಗೆಯೇ ಸರ್ಕಾರವು ಜನರ ಈ ನೈಜ-ಅವಶ್ಯಕ ಬೇಡಿಕೆಯನ್ನು ಈಡೇರಿಸುವುದರ ಮೂಲಕ ಸ್ಪಂದಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ