ಹಾನಗಲ್ಲ :
ಪ್ರಪಂಚದಲ್ಲಿಯೇ ಭಾರತದ ರೇಷ್ಮೆಗೆ ಬಹು ಬಲೆ ಇರುವಾಗ, ಭಾರತಕ್ಕೆ ಸಾಲುವಷ್ಟು ರೇಷ್ಮೇ ಬೆಳೆಯುವಲ್ಲಿಯೂ ನಾವು ವಿಫಲವಾಗಿರುವುದೇ ವಿಷಾದದ ಸಂಗತಿ ಎಂದು ಭಾರತ ಸರಕಾರದ ಕೇಂದ್ರ ರೇಷ್ಮೇ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಖೇದ ವ್ಯಕ್ತಪಡಿಸಿದರು.
ರವಿವಾರ ಹಾನಗಲ್ಲಿನ ಸದಾಶಿವ ಮಂಗಲ ಭವನದಲ್ಲಿ ಜಿಲ್ಲಾ ಪಂಚಾಯತ್ ಹಾವೇರಿ, ತಾಲೂಕು ಪಂಚಾಯತ್ ಹಾನಗಲ್ಲ ಹಾಗೂ ರೇಷ್ಮೇ ಇಲಾಖೆ ಸಹಯೋಗದಲ್ಲಿ ತಾಲೂಕು ಮಟ್ಟದ ರೇಷ್ಮೆ ಬೆಳೆಗಾರರ ಕಾರ್ಯಾಗಾರ ಹಾಗೂ ರೇಷ್ಮೆ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೇಂದ್ರ ಸರಕಾರ ಈ ಬಾರಿ ರೇಷ್ಮೆ ಅಭಿವೃದ್ಧಿಗಾಗಿ 2160 ಕೋಟಿ ರೂ ಅನುದಾನ ನೀಡಿದೆ. ದೇಶದ ಎಲ್ಲ ರಾಜ್ಯಗಳಲ್ಲಿಯೂ ರೇಷ್ಮೆ ಕೃಷಿ ಇದೆ. ಹೆಚ್ಚು ಲಾಭದಾಯವಾಗಿ ಪ್ರಗತಿಪಡಿಸಿದ ಈ ಕೃಷಿಯತ್ತ ರೈತರು ಆಸಕ್ತಿ ತೋರುತ್ತಿಲ್ಲ.
ಉತ್ತಮ ಗುಣಮಟ್ಟದ ರೋಗ ಮುಕ್ತ ರೇಷ್ಮೆ ಹುಳುಗಳನ್ನು ನೀಡಿಲಾಗುತ್ತಿದೆ. ಈಗ ರೇಷ್ಮೆ ಕೃಷಿ ಅತ್ಯಂತ ಸುಲಭ ಹಾಗೂ ಸರಳೀಕರಣಗೊಂಡಿದೆ . ಆದರೆ ರೈತರಲ್ಲಿ ವಿಶ್ವಾಸ ಮೂಡುತ್ತಿಲ್ಲ. ಇಡೀ ಪ್ರಪಂಚ ಭಾರತದ ರೇಷ್ಮೆಗೆ ಬೇಡಿಕೆ ಸಲ್ಲಿಸುವಷ್ಟು ಗುಣಮಟ್ಟಣದ ರೇಷ್ಮೆ ಇಲ್ಲಿ ಬೆಳೆಯುತ್ತಿದೆ. ಆದರೆ ಹೊರ ದೇಶಗಳಿಗೆ ಪೂರೈಸುವುದಿರಲಿ ಭಾರತದ ನೇಕಾರರಿಗೆ ಸಾಕಾಗುವಷ್ಟು ರೇಷ್ಮೆ ನಮ್ಮಲ್ಲಿ ಬೆಳೆಯುತ್ತಿಲ್ಲ. ಶೇಕಡಾ 80-90 ರಷ್ಟು ಅಭಿವೃದ್ಧಿ ಅನುದಾನವನ್ನು ನೀಡಲಾಗುತ್ತಿದೆ. ಇದನ್ನು ಬಳಸಿಕೊಳ್ಳಲು ರೈತರು ಮುಂದಾಗುತ್ತಿಲ್ಲ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಎಂ.ಉದಾಸಿ, ಕರ್ನಾಟಕದಲ್ಲಿ ಈಗ ರೇಷ್ಮೆ ಕೃಷಿ ಚೇತರಿಸಿಕೊಳ್ಳುತ್ತಿದೆ. ಈ ಮೂಲಕ ಆರ್ಥಿಕ ಅಭಿವೃದ್ಧಿ ಕಾಣುತ್ತಿದೆ. ಕೃಷಿ ಕೃಷಿಕ ಈಗ ಬಹಳಷ್ಟು ಬದಲಾಗಿದ್ದಾನೆ. ಆರ್ಥಿಕ ವಿಕಾಸಕ್ಕಾಗಿ ಈಗ ರೇಷ್ಮೇ ಕೃಷಿ ಹೆಚ್ಚು ಲಾಭಕರ. ಸರಕಾರಿ ಉದ್ಯೋಗಕ್ಕಿಂತ ಈಗ ಕೃಷಿ ನೆಮ್ಮದಿ ನೀಡಬಲ್ಲದು ಎಂಬುದನ್ನು ಅರಿಯಬೇಕಾಗಿದೆ. ನಮ್ಮ ಕೃಷಿ ಭೂಮಿಯಲ್ಲಿ ನಮ್ಮ ಬದುಕು ಕಟ್ಟಿಕೊಳ್ಳಲು ನಾವು ಮುಂದಾಗಬೇಕು ಎಂದು ಕರೆ ನೀಡಿದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಭಾರತದಲ್ಲಿ 13 ಕೋಟಿ ರೈತರಿದ್ದು, ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದ ತುಂಡು ಭೂಮಿಗಳಲ್ಲಿ ರೈತ ಕೃಷಿ ಮಾಡುತ್ತಿದ್ದಾನೆ. ನಿರುದ್ದೋಗ ಸಮಸ್ಯೆ ಪರಿಹರಿಸಲು ಕೃಷಿಗೆ ಶಕ್ತಿ ಇದೆ. ಆದರೆ ಅದರ ಸರಿಯಾದ ಸದುಪಯೋಗವಾಗುತ್ತಿಲ್ಲ. ರೇಷ್ಮೆ ಕೃಷಿ ಅಭಿವೃದ್ಧಿ ಹೊಂದುತ್ತಿದ್ದು, ಇನ್ನೂ ಸರಕಾರಗಳಿಂದ ಹೆಚ್ಚು ಪ್ರೋತ್ಸಾಹ ಬೇಕಾಗಿರುವ ಬಗ್ಗೆ ಬೇಡಿಕೆಗಳಿವೆ. ಸಕಾಲದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದೊಂದಿಗೆ ಮಾತನಾಡಿ ರೇಶ್ಮೆ ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜಿಪಂ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಸದಸ್ಯರಾದ ಮಾಲತೇಶ ಸೊಪ್ಪಿನ, ರಾಘವೇಂದ್ರ ತಹಶೀಲ್ದಾರ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಉಪಾಧ್ಯಕ್ಷೆ ಸರಳಾ ಜಾಧವ, ಸದಸ್ಯ ಬಸವರಾಜ ಬೂದಿಹಾಳ, ರೇಷ್ಮೆ ಉದ್ದಿಮೆದಾರ ಶಿವರಾಜ ಸಜ್ಜನ, ಬೆಳಗಾವಿ ವಿಭಾಗದ ರೇಷ್ಮೆ ಜಂಟಿ ನಿರ್ದೇಶಕ ಟಿ.ಎಸ್.ಹುದ್ದಾರ, ಹಾವೇರಿ ಜಿಲ್ಲಾ ರೇಷ್ಮೆ ಸಹಾಯಕ ನಿರ್ದೇಶಕ ಬಿ.ಆರ್.ಅಂಗಡಿ, ರೇಷ್ಮೆ ಕೃಷಿಕರಾದ ಮರಳೂರು ಶಿವಣ್ಣ, ಆರ್.ಎಸ್.ನಾಡಿಗೇರ, ಎಸ್.ಎ.ಬಡಣ್ಣನವರ, ಮಲ್ಲೇಶ ಹುಲ್ಲಣ್ಣನವರ, ಮುತ್ತಣ್ಣ ಬಿದರಣ್ಣನವರ, ಜಿ.ಎಸ್.ದೇಶಪಾಂಡೆ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ರೈತ ಮುಖಂಡ ಎ.ಎಸ್.ಬಳ್ಳಾರಿ, ಎಂ.ಎಸ್.ನಾಗೇಂದ್ರ, ಜಿಪಂ ರೇಷ್ಮೆ ಉಪನಿರ್ದೇಶಕ ಮಾಲತೇಶ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಜಿ.ಶಶಿಧರ, ರೇಷ್ಮೆ ವಿಸ್ತರಣಾಧಿಕಾರಿಗಳಾದ ಬಿ.ಎ.ಕರಿಯಪ್ಪನವರ, ಎಚ್.ಎಸ್.ಅಗಡಿ, ನಿವೃತ್ತ ಕೃಷಿ ಅಧಿಕಾರಿ ಎಂ.ಪಿ.ಮುದ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.