ಹಾವೇರಿ :
ಭಾರತ ದೇಶ ಬ್ರಿಟೀಷರ ಧಾಸ್ಯದಿಂದ ಹೊರಬರಲು ಸಾವಿರಾರು ಜನರ ತ್ಯಾಗ ಬಲಿದಾನದ ಕೊಡುಗೆ ಇದ್ದು, ದೇಶಕ್ಕಾಗಿ ಮನೆ ಮಠ ಕಳೆದುಕೊಂಡವರು, ಪ್ರಾಣ ತೆತ್ತವರು ಹಲವರು. ಸ್ವಾತಂತ್ರ್ಯಾನಂತರ ದೇಶಕ್ಕಾಗಿ ಅಮರರಾದವರ ಸ್ಮರಣೆ ದೊಡ್ಡ ಮಟ್ಟದಲ್ಲಿ ನಡೆಯಿತು. ಕೆಲವರ ತ್ಯಾಗಬಲಿದಾನಕ್ಕೆ ಮನ್ನಣೆಯೂ ದೊರೆಯಿತು.
ಆದರೆ ಹಲವು ಕಾರಣಗಳಿಂದಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೆಚ್ಚೆದೆಯ ಕಲಿಗಳು ತಮ್ಮ ಜೀವ ತೆತ್ತರು ಸಹ ಅವರನ್ನು ಗುರುತಿಸದೇ ಹೋಗಿದ್ದು, ಈ ನಾಡಿನ ದುರಂತವೇ ಸರಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಬ್ರಿಟೀಷರ ವಿರುದ್ಧ ಏಕಾಂಗಿಯಾಗಿ ಹೋರಾಡಿದ, ವೀರನೀತ. ಸಾಮ್ಯಾನ ವ್ಯಕ್ತಿಯಾಗಿದ್ದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲು ಎಲ್ಲರಿಗೂ ಸ್ಫೂರ್ತಿಯಾಗಿದ್ದ. ಸಿಂಧೂರು ಲಕ್ಷ್ಮಣನ ಕುರಿತು ಮಾತನಾಡುವುದಾಗಲಿ ಬರೆಯುವುದಾಗಲಿ ಕಷ್ಟಸಾದ್ಯ.
ಕೆಲವಾರು ಪದ್ರೇಶಗಳಲ್ಲಿ ಈ ಸಿಂಧೂರು ಲಕ್ಷ್ಮಣನ ಕುರಿತು ರೋಚಕ ಸಂಗತಿಗಳನ್ನು ತಾವು ಕೇಳಿ ತಿಳಿದಿರುವಂತೆ ಹೇಳುವ ಜನರಿದ್ದಾರೆ. ಉವ್ಮರಾಣೆ, ಬಸರಗಿ, ಗೋಗಾಡ, ಬೀಳೂರ, ಬೇಡರಹಟ್ಟಿ, ಚಮಕೇರಿ, ರಡೇರಹಟ್ಟಿ, ಸಿಂಧೂರ ಮುಂತಾದ ಪದ್ರೇಶಗಳಲ್ಲಿ ಅಲೆದಾಡಿದಾಗ ಸ್ವಲ್ಪಮಟ್ಟಿಗೆ ಲಕ್ಷ್ಮಣನ ಪೂರ್ವಾರ್ಧದ ಬಗ್ಗೆ ತಿಳಿದು ಬರುತ್ತದೆ.
ಹಾಗೂ ಬಿಜಾಪುರ ಭಾಗದ ಲಾವಣಿಕಾರರ ಬಾಯಲ್ಲಿ ಇಂದಿಗೂ ಲಕ್ಷ್ಮಣನ ಹೋರಾಟಗಳು ಜೀವಂತವಾಗಿದ್ದು ಸಿಂಧೂರು ಲಕ್ಷ್ಮಣನೆಂದರೆ ಸಾಕು ಮೈಯಲಿ ಶೌರ್ಯವು ತುಂಬುವುದು ಎನ್ನುವ ಪದಗಳೇ ಸಾಕ್ಷಿ. ಎಳೆಯ ವಯಸ್ಸಿನಲ್ಲಿಯೇ ಸಮಾನ ವಯಸ್ಕ ಯುವಕರ ತಂಡವನ್ನು ಕಟ್ಟಿಕೊಂಡು ಕಾಡುಬೀಡುಗಳಲ್ಲಿ ಓಡಾಡಿ ಬ್ರಿಟಿಷರ ವಿರುದ್ಧ ಸತತ ಹದಿನೆೃದು ವರ್ಷಗಳ ಕಾಲ ಹೋರಾಟ ನಡೆಸಿದ ವೀರ ಧೀರ ಸಿಂಧೂರ ಲಕ್ಷ್ಮಣ, ಬರಗಾಲವಿದ್ದಾಗ ಬಡವರು, ಹಸಿವಿನಿಂದ ಸಾಯುವವರನ್ನು ಕಂಡು ತೀವ್ರವಾಗಿ ಮರುಗಿದ.
ವೈಯಕ್ತಿಕ ಸ್ವಾರ್ಥಕ್ಕಾಗಿ ದೇಶದ ಹಿತಬಲಿಕೊಟ್ಟು ಬ್ರಿಟಿಷರ ಆಶೀರ್ವಾದದಿಂದ ತಿಂದು ಕೊಬ್ಬಿದ ಕೆಲವರು ಅಂದು ಗೋದಾಮುಗಳಲ್ಲಿ ಜೀವನಾವಶ್ಯಕ ವಸ್ತುಗಳನ್ನು ಯಥೇಚ್ಚೆವಾಗಿ ದಾಸ್ತಾನು ಮಾಡಿಕೊಂಡಿದ್ದರು. ಇಂಥ ಶ್ರೀಮಂತರ ಪಾಲಿಗೆ ಯಮನಾಗಿ ತನ್ನ ಗೆಳಯರೊಂದಿಗೆ ಈ ಶ್ರೀಮಂತರ ಗೋದಮುಗಳನ್ನು ಲೂಟಿಮಾಡಿ ದವಸ ಧ್ಯಾನಗಳನ್ನು ಹಸಿದವರಿಗೆ, ಬಡವರಿಗೆ ಹಂಚಿದ ಸಿಂಧೂರ ಲಕ್ಷ್ಮಣ ಒಂದು ರೀತಿಯಲ್ಲಿ ಬಡವರ ಪಾಲಿನ ರಾಬಿನ್ ಹುಡ್ ಎಂದಿನಿಸಿದ.
ಅಂದು ರಾಜ್ಯದ ಭಾಗವಾಗಿದ್ದ ಈಗಿನ ಮಹಾರಾಷ್ಟ್ರದಲ್ಲಿರುವ ಜತ್ತ ಸಂಸ್ಥಾನದ ಸಿಂಧೂರಿನಲ್ಲಿ 1889 ರ ಮೇ 18 ರಂದು ಸಾಬಣ್ಣ ಹಾಗೂ ನರಸವ್ವ ದಂಪತಿಗಳ ಮೂರನೆಯ ಪುತ್ರನಾಗಿ ಸಿಂಧೂರು ಲಕ್ಷ್ಮಣ ಮೊದಲ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ನರಸವ್ವ ಮನೆ ಬೆಳಗಲು ಗಂಡು ಮಗುವಿಗಾಗಿ ಪರಿತಪ್ಪಿಸುತ್ತಿದ್ದಳು. ಆದರೆ ತಂದೆ ತಾಯಿ ಬಯಸಿದಂತೆ ಲಕ್ಷ್ಮಣ ತನ್ನ ಮನೆಯನ್ನು ಬೆಳಗದೆ ಇಡೀ ದೇಶವನ್ನೇ ಬೆಳಗುವ ಮಹಾನ ಕಲಿಯಾದ.
ದೇಶಾದ್ಯಂತ ಬ್ರಿಟಿಷ ದಾಸ್ಯದ ವಿರುದ್ಧ ಹೋರಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರು ದೇಶದಿಂದ ಬ್ರಿಟೀಷರನ್ನು ಹೇಗೆ ಓಡಿಸಬೇಕು ಎಂಬ ಮೂಲ ಮಂತ್ರವನ್ನೇ ಮರೆತಿದ್ದರು. ಬ್ರಿಟಿಷರ ಆಶ್ರಯದಲ್ಲಿ ಬೆಳೆದು ಕೆಲವರು ಸ್ವಾತಂತ್ರ್ಯ ಹೋರಾಟಗಾರರ ಮಹತ್ವದ ಮಾಹಿತಿಗಳನ್ನು ರವಾನಿಸುತ್ತಿದ್ದ ಬ್ರಿಟಿಷರ ಎಂಜಲು ತಿಂದು ತಿಂದು ಕೊಬ್ಬಿದ ದೇಶದ್ರೋಹಿಗಳಾಗಿದ್ದರು ಇಂತಹ ಶ್ರೀಮಂತರನ್ನು ಬಗ್ಗು ಬಡಿದರೆ ಬ್ರಿಟಿಷರ ಬೇರುಗಳು ದುರ್ಬಲವಾಗುತ್ತದೆ ಎಂಬ ಸಂದೇಶವನ್ನು ದೇಶಕ್ಕೆ ರವಾನಿಸಿದನು ಸಿಂಧೂರ ಲಕ್ಷ್ಮಣ.
ದುರಾದೃಷ್ಠ ಎಂದರೆ ಬ್ರಿಟಿಷರ ವಿರುದ್ಧ ಹೋರಾಡಿದ ಉತ್ತರ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಮುಂಚೂಣಿಯಲ್ಲಿದು, ಅವರ ಹೆಸರಿನಲ್ಲಿ ಪ್ರತಿಷ್ಠಾನ ಪ್ರಾಧಿಕಾರಗಳ ರಚನೆಯಾಗಿ ಅವರ ಸಾಹಸ, ಶೌರ್ಯಗಾತೆ ಪಠ್ಯ ಪುಸ್ತಕಗಳಲ್ಲಿ ದಾಖಲಾಗಿ ಮುಂದಿನ ಪೀಳಿಗೆಗೆ ಅವರ ಹೋರಾಟದ ಅರಿವು ಮೂಡಿಸಲಾಗುತ್ತಿದೆ. ಆದರೆ ಅದೇ ದಕ್ಷಿಣ ಭಾರತದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಸ್ವಾತಂತ್ರ್ಯಾಕ್ಕಾಗಿ ಮಾಡಿ ಮಡಿದ ಹೋರಾಟಗಾರರ ಹೆಸರು ನೇಪತ್ಯಕ್ಕೆ ಸರಿದಿದೆ. ಇದು ಇತಿಹಾಸಕ್ಕೆ ಬಗೆದ ಘೋರ ಅಪಚಾರವಾಗಿದೆ. ಇಂದಿಗೂ ಲಕ್ಷ್ಮಣನ ಕುಟುಂಬದವರು ಮುರುಕು ಮಣ್ಣಿನ ಮನೆಯಲ್ಲೇ ವಾಸವಾಗಿರುವುದು ಸ್ವಾತಂತ್ರ್ಯಾಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಾತ್ಮನ ಕುಟುಂಬಕ್ಕೆ ನಾವೆಷ್ಟು ಗೌರವ ಕೊಡುತ್ತಿದ್ದೇವೆ ಎಂಬುದೇ ಸಾಕ್ಷಿ.
ಮಹಾನ್ ಹೋರಾಟಗಾರ, ಗೇರಿಲ್ಲಾ ಮಾದರಿ ಯುದ್ಧ ಪರಿಚಯಿಸಿದ ಸಿಂಧೂರ ಲಕ್ಷ್ಮಣ, ಕುದರೆಗಳಿಗಿಂತಲೂ ವೇಗವಾಗಿ ಓಡುವ, ನಿಖರವಾಗಿ ಕವಣಿಯಿಂದ ಗುರಿಇಟ್ಟು ಕಲ್ಲನ್ನು ಹೊಡೆಯುವ ಸಾಮಥ್ರ್ಯ ಅವನಲ್ಲಿತ್ತು ಇಷ್ಟೇಲ್ಲ ಇದ್ದರೂ ಮೋಸ ಎಂಬುದು ಲಕ್ಷ್ಮಣನ ಜೀವನದಲ್ಲಿಯೂ ನಡೆದು ಹೋಯಿತು. 1922 ರ ಜುಲೈ 15 ರಂದು ನಾಗರಾಳ ಸೀಮೆಯ ಕಪ್ಪದ ಪಡಿಯವ್ವನ ಗುಡ್ಡದ ದೇವಸ್ಥಾನದ ಬಳಿ ಬ್ರಿಟಿಷರ ಮೋಸಕ್ಕೆ ತುತ್ತಾಗಿ ವೀರಸಾವನಪ್ಪುತ್ತಾನೆ. ಆಗ ಸಿಂಧೂರ ಲಕ್ಷ್ಮಣ ಕೇವಲ 33 ವರ್ಷ ಪ್ರಾಯದ ಯುವಕ, ಆದರೆ ಈ 33 ವರ್ಷಗಳ ಸಿಂಧೂರ ಲಕ್ಷ್ಮಣನ ಹೋರಾಟ 300 ವರ್ಷಗಳ ಹೋರಾಟಕ್ಕಿಂತಲೂ ಹೆಚ್ಚು ರೋಚಕವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
