ತುಮಕೂರು : ವ್ಯರ್ಥವಾಗಿ ನಿಂತಿರುವ ಸ್ಕೈವಾಕರ್‍ಗಳು..!!

  ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟ ಪ್ರದೇಶ 
ತುಮಕೂರು

ವಿಶೇಷ ವರದಿ: ರಾಕೇಶ್.ವಿ.

      ತುಮಕೂರು ನಗರವು ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಜೊತೆಗೆ ರಾಜ್ಯದ ರಾಜಧಾನಿಗೆ ಕೂಗಳತೆ ದೂರದಲ್ಲಿದ್ದು, ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರಿಗೆ ಸಾವಿರಾರು ಜನ ತೆರಳುತ್ತಾರೆ. ವಾಹನಗಳ ಓಡಾಟ ಹೆಚ್ಚಾಗಿದೆ. ಇದರಿಂದ ಸಾಮಾನ್ಯವಾಗಿ ಟ್ರಾಫಿಕ್ ಸಮಸ್ಯೆಯೂ ಹೆಚ್ಚಾಗುತ್ತಿದೆ. ಇದರ ನಡುವೆ ಹೆಚ್ಚಿನದಾಗಿ ಓಡಾಟ ಇರುವ ಪ್ರದೇಶವೆಂದು ಗುರುತಿಸಿ ಎರಡು ಕಡೆ ಸ್ಕೈವಾಕರ್‍ಗಳನ್ನು ನಿರ್ಮಾಣ ಮಾಡಲಾಗಿದ್ದು, ಅವುಗಳಿಂದು ಬಳಕೆಗೆ ಬಾರದಂತಾಗಿವೆ. 
 
     ನಗರದ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದ ಬಳಿಯ ಹೆದ್ದಾರಿಯಿಂದ  ರೈಲ್ವೇ ನಿಲ್ದಾಣಕ್ಕೆ  ತೆರಳಲು ನೇರ ರಸ್ತೆ ಹಾದುಹೋಗಿದೆ. ಜೊತೆಗೆ ಮಹಾನಗರ ಪಾಲಿಕೆಗೆ ಹೋಗಲು ಮುಖ್ಯದ್ವಾರ ಇಲ್ಲಿಯೇ ಇದ್ದು,  ಈ ಪ್ರದೇಶದಲ್ಲಿ ಪಾದಾಚಾರಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಟ್ರಾಫಿಕ್ ಹೆಚ್ಚು ಇದ್ದಂತಹ ವೇಳೆಯಲ್ಲಿ ಪಾದಚಾರಿಗಳು ರಸ್ತೆ ದಾಟಲು ಮುಂದಾಗಿ ಅಪಘಾತಗಳಿಗೆ ಒಳಗಾಗುತ್ತಾರೆ.
     ಅದೇ ರೀತಿ ತುಮಕೂರು ವಿಶ್ವವಿದ್ಯಾಲಯ ಮುಂಭಾಗದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಾದಚಾರಿಗಳು ರಸ್ತೆ ದಾಟುವಾಗ ಅನೇಕ ಬಾರಿ ಅಪಘಾತಗಳಾದ ಉದಾಹರಣೆಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ಈ ಎರಡು ಪ್ರದೇಶಗಳಲ್ಲಿ ಪಾದಚಾರಿಗಳಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ.
ಲಕ್ಷಾಂತರ ರೂಗಳ ವೆಚ್ಚದಲ್ಲಿ ನಿರ್ಮಾಣ
      ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಗರದ ಎರಡು ಕಡೆ ಸ್ಕೈವಾಕರ್‍ಗಳನ್ನು ನಿರ್ಮಾಣ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಿವಿಧ ಹಳ್ಳಿಗಳ ಬಳಿಯಲ್ಲಿ ಸ್ಕೈವಾಕರ್ ನಿರ್ಮಾಣ ಮಾಡಿದಂತೆ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟಲು ಅನುಕೂಲ ವಾಗಲೆಂದು  ಎರಡು ಸ್ಕೈವಾಕರ್‍ಗಳನ್ನು ನಿರ್ಮಿಸಿದ್ದಾರೆ. ಆದರೆ ಇದರ ನಿರ್ವಹಣೆ ಇಲ್ಲದೆ ಸೊರಗಿ ಹೋಗುತ್ತಿವೆ.
ನಿರ್ವಹಣೆಯ ಜವಾಬ್ದಾರಿ ಯಾರ ಮೇಲಿದೆ…?
       ರಾಷ್ಟ್ರೀಯ ಹೆದ್ದಾರಿ ಕಚೇರಿ ಮೂಲಗಳ ಪ್ರಕಾರ ಸ್ಕೈವಾಕರ್ ನಿರ್ಮಾಣದ ಪೂರ್ಣ ಜವಾಬ್ದಾರಿ ರಾ.ಹೆ. ಇಲಾಖೆಗೆ ಸೇರ್ಪಟ್ಟಿತ್ತು. ಅದು ಪೂರ್ಣಗೊಂಡ ನಂತರ ಅದರ ನಿರ್ವಹಣೆಯನ್ನು ಪಾಲಿಕೆಯವರು ನಡೆಸಿಕೊಂಡು ಹೋಗಲು ಮೂರು ಬಾರಿ ಪತ್ರ ಬರೆಯಲಾಗಿತ್ತು. ಈ ಹಿಂದೆ ಇದ್ದ ಪಾಲಿಕೆ ಆಯುಕ್ತರು  ನಿರ್ವಹಣೆಯ ಜವಾಬ್ದಾರಿ ಪಡೆಯಲು ಒಪ್ಪಿದ್ದರು. ಆದರೆ ಇಲ್ಲಿಯವರೆಗೆ ಅದನ್ನು ಅವರ ವ್ಯಾಪ್ತಿಗೆ ಪಡೆದಿಲ್ಲ. ಅದನ್ನು ಪಡೆಯಲು ರಸ್ತೆಯ ಸಮೇತ ನೀಡುವಂತೆ ಕೋರಿದ್ದಾರೆ. ಆದರೆ ಬೈಪಾಸ್ ರಸ್ತೆಗೆ ಸೇರಿಕೊಂಡಿದ್ದರೆ ಮಾತ್ರ ನೀಡಬಹುದು ಇಲ್ಲವಾದಲ್ಲಿ ನೀಡಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ವಿಳಂಬವಾಗುತ್ತಿರಬಹುದು. 
ಸ್ಕೈವಾಕರ್ ಕೆಳಗೆ ವಾಹನಗಳ ಪಾರ್ಕಿಂಗ್
      ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರಿಗೆ ಕೆಲಸಕ್ಕೆ ತೆರಳುವ ಅದೆಷ್ಟೋ ಮಂದಿ ತುಮಕೂರು ವಿವಿ ಮುಂಭಾಗದಲ್ಲಿರುವ ಸ್ಕೈವಾಕರ್ ಕೆಳಗೆ ತಮ್ಮ ದ್ವಿಚಕ್ರವಾಹನಗಳನ್ನು ಪಾರ್ಕ್ ಮಾಡಿ ಹೋಗುತ್ತಾರೆ. ಕೇವಲ ಅವರೊಬ್ಬರಲ್ಲದೆ ಇತರೆ ಸಾರ್ವಜನಿಕರು ಕೂಡ ದಿನನಿತ್ಯದ ಕೆಲಸಗಳಿಗೆ ತೆರಳಲು ಕೂಡ ಅಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಾರೆ. ಈ ಭಾಗದಲ್ಲಿ ಯಾವುದೇ ಸೂಚನಾ ಫಲಕಗಳಿಲ್ಲ. ನೋ ಪಾರ್ಕಿಂಗ್ ಎಂಬ ಫಲಕವೂ ಇಲ್ಲದೇ ಇರುವುದರಿಂದ ಧೈರ್ಯವಾಗಿ ಪಾರ್ಕಿಂಗ್ ಮಾಡುತ್ತಿದ್ದಾರೆ. 
ಆರಂಭವಾಗದ ಲಿಫ್ಟ್
      ಸ್ಕೈವಾಕರ್‍ನ ಎರಡು ಕಡೆಗಳಲ್ಲಿಯೂ ಲಿಫ್ಟ್‍ಗಳನ್ನು ಅಳವಡಿಸಲಾಗಿದೆ. ಹಿರಿಯರು, ವೃದ್ಧರು ಮೆಟ್ಟಿಲುಗಳನ್ನು ಹತ್ತಲು ಆಗುವುದಿಲ್ಲ ಎಂಬ ಕಾರಣಕ್ಕೆ ಹಿರಿಯರಿಗೆ, ವಿಶೇಷಚೇತನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಲಿಫ್ಟ್ ಹಾಕಿಸಲಾಯಿತಾದರೂ ಇಲ್ಲಿಯವರೆಗೆ ಒಂದು ಬಾರಿಯೂ ಅದು ಚಾಲನೆಗೊಂಡಿಲ್ಲ. ಇದರಿಂದ ಯಾರೂ ಮೆಟ್ಟಿಲು ಹತ್ತಿ ಸ್ಕೈವಾಕರ್ ಮೇಲೆ ಹೋಗುವ ಗೋಜಿಗೆ ಹೋಗುತ್ತಿಲ್ಲ. ಇದು ಒಂದು ರೀತಿಯಲ್ಲಿ ಇದ್ದು ಇಲ್ಲದಂತಾಗಿದೆ.
ಧೂಳು ಹಿಡಿದ ಸ್ಕೈವಾಕರ್
      ಸ್ಕೈವಾಕರ್‍ಗಳನ್ನು ನಿರ್ಮಾಣ ಮಾಡಲಾಯಿತಾದರೂ ಅದರ ನಿರ್ವಹಣೆಯ ಬಗ್ಗೆ ಯಾರೂ ಗಮನಹರಿಸಿಲ್ಲ. ಇದರಿಂದ ಸ್ಕೈವಾಕರ್ ಮೇಲ್ಬಾಗದಲ್ಲಿ ಧೂಳು ತುಂಬಿಕೊಂಡಿದೆ. ಯಾರಾದರೂ ರಸ್ತೆ ದಾಟುವುದು ಬೇಡ ಎಂದು ಸ್ಕೈವಾಕರ್ ಹತ್ತಲು ಹೋದರೆ ಅಲ್ಲಿನ ಧೂಳು ನೋಡಿಯೇ ವಾಪಾಸ್ಸಾಗುತ್ತಿದ್ದಾರೆ. ಇದನ್ನು ಸ್ವಚ್ಛತೆ ಮಾಡಬೇಕಾದವರಿಗೆ ಅದರ ಬಗ್ಗೆ ಗಮನವಿಲ್ಲದಂತಾಗಿದೆ. 
ಸ್ಕೈವಾಕರ್ ಇದ್ದರೂ ರಸ್ತೆ ದಾಟುವ ವಿದ್ಯಾರ್ಥಿಗಳು
    ತುಮಕೂರು ವಿವಿ ಸೇರಿದಂತೆ ವಿವಿ ಆವರಣದಲ್ಲಿರುವ ವಿವಿಧ ಕಾಲೇಜು ವಿದ್ಯಾರ್ಥಿಗಳು ಸ್ಕೈವಾಕರ್ ಇದ್ದರೂ ಅದನ್ನು ಬಳಸದೆ ರಸ್ತೆ ದಾಟುತ್ತಾರೆ. ಹಿರಿಯರಿಗೆ ಮೆಟ್ಟಿಲು ಹತ್ತಲು ಆಗುವುದಿಲ್ಲ ಎನ್ನಬಹುದು. ಆದರೆ ಯುವಕ ಯುವತಿಯರು ಮೆಟ್ಟಿಲು ಹತ್ತಿ ಸ್ಕೈವಾಕರ್ ಮೇಲೆ ಹೋಗಬಹುದು. ಆದರೆ ಅದನ್ನು ಲೆಕ್ಕಿಸದೇ ರಸ್ತೆಗೆ ನುಗ್ಗುತ್ತಾರೆ. ರಸ್ತೆ ಮೇಲೆ ಬರುವ ವಾಹನಗಳಿಗೆ ಕೈ ಅಡ್ಡ ಹಾಕಿ ರಸ್ತೆ ದಾಟುತ್ತಾರೆ.
 
    ಕೆಲವೊಮ್ಮೆ ರಭಸವಾಗಿ ಬರುವ ವಾಹನಗಳಿಂದ ಅಪಘಾತಗಳಾದ ಉದಾಹರಣೆಗಳು ಕೂಡ ಇವೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಂದು ನಿರ್ಮಾಣ ಮಾಡಲಾದ ಸ್ಕೈವಾಕರ್‍ಗಳು ಬಳಕೆಯಾಗದೆ, ವ್ಯರ್ಥವಾಗಿ ನಿಂತಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸ್ಕೈವಾಕರ್ ಬಳಸಲು ಅನುಕೂಲ ಮಾಡಿಕೊಡಬೇಕಿದೆ.
 
    ನನಗೀಗ 68 ವಯಸ್ಸು, ನಾನು ಓಡಾಡುವುದೇ ಕಷ್ಟಕರವಾಗಿದೆ. ಆದರೂ ಹೊಟ್ಟೆಪಾಡಿಗಾಗಿ ಕೆಲಸ ಮಾಡಲು ಬರುತ್ತೇನೆ. ಇಲ್ಲಿ ರಸ್ತೆ ದಾಟಲು ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಸ್ಕೈವಾಕರ್ ಹತ್ತಲು ನನ್ನಲ್ಲಿ ಶಕ್ತಿಯಿಲ್ಲ. ಲಿಫ್ಟ್ ಇದೆ ಎಂಬುದಾಗಿ ಕೆಲವರು ಹೇಳುತ್ತಾರೆ ಆದರೆ ಯಾವಾಗ ನೋಡಿದರೂ ಅದು ಬಂದ್ ಆಗಿಯೇ ಇರುತ್ತದೆ. ಇದು ನಿರ್ಮಾಣ ಮಾಡಿದರೂ ಯಾರಿಗೂ ಅನುಕೂಲವಾಗುತ್ತಿಲ್ಲ.

ನಾಗರಾಜಯ್ಯ, ವೃದ್ಧರು

    ಪ್ರತಿನಿತ್ಯ ಏಳು ಗಂಟೆಗೆ ತುಮಕೂರಿನಿಂದ ಬೆಂಗಳೂರಿಗೆ ಕೆಲಸಕ್ಕೆಂದು ತೆರಳಬೇಕು. ನಮ್ಮ ಮನೆಯಿಂದ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿ ವಾಹನವನ್ನು ನಿಲುಗಡೆ ಮಾಡಿ, ಅವರು ಕೊಡುವ ಚೀಟಿಯನ್ನು ಇಟ್ಟುಕೊಂಡು ಬರಬೇಕು. ಒಂದು ವೇಳೆ ಚೀಟಿ ಕಳೆದುಕೊಂಡರೆ ನಮ್ಮ ವಾಹನದ ದಾಖಲಾತಿಗಳನ್ನು ತೋರಿಸಿದರೂ ಕೊಡುವುದಿಲ್ಲ. ಬದಲಿಗೆ ಕಿರಿಕಿರಿ ಮಾಡುತ್ತಾರೆ. ಹಾಗಾಗಿ ತುಮಕೂರು ವಿವಿ ಮುಂಭಾಗದಲ್ಲಿನ ಸ್ಕೈವಾಕರ್ ಕೆಳಭಾಗದಲ್ಲಿ ಖಾಲಿ ಇರುವುದರಿಂದ ವಾಹನವನ್ನು ನಿಲುಗಡೆ ಮಾಡಿ ಹೋಗುತ್ತೇವೆ.

ರವೀಶಯ್ಯ, ತುಮಕೂರು

     ಕೇಂದ್ರ ಸರ್ಕಾರದ ಅನುದಾನದಲ್ಲಿ ವಿವಿಧೆಡೆ ಸ್ಕೈವಾಕರ್‍ಗಳನ್ನು ನಿರ್ಮಾಣ ಮಾಡಲಾಗಿದೆ. 2016-17 ರಲ್ಲಿಯೇ ಈ ಕಾಮಗಾರಿ ಪೂರ್ಣಗೊಂಡಿದ್ದು, ಅದರ ನಿರ್ವಹಣೆಯ ಜವಾಬ್ದಾರಿ ಪಡೆದುಕೊಳ್ಳುವಂತೆ ಪಾಲಿಕೆಗೆ ಮೂರು ಬಾರಿ ಪತ್ರ ಬರೆಯಲಾಗಿತ್ತು. ಅದಕ್ಕೆ ಪಾಲಿಕೆಯವರು ಒಪ್ಪಿದ್ದರು ಆದರೆ ಇಲ್ಲಿಯವರೆಗೆ ಅದನ್ನು ತಮ್ಮ ವಶಕ್ಕೆ ಸೇರ್ಪಡಿಸಿಕೊಂಡಿಲ್ಲ. ಹೀಗಾಗಿ ಸ್ಕೈವಾಕರ್‍ನಲ್ಲಿ ಅಳವಡಿಸಲಾದ ಲಿಫ್ಟ್‍ಗೆ ಚಾಲನೆ ನೀಡಿಲ್ಲ. ಅದರ ನಿರ್ವಹಣೆ ಪಾಲಿಕೆಯವರು ವಹಿಸಿಕೊಂಡರೆ ಇದು ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಸಂಪತ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್

      ಸ್ಕೈವಾಕರ್ ಪಾಲಿಕೆ ವಶಕ್ಕೆ ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‍ಗಳ ಜೊತೆ ಮಾತನಾಡಲಾಗಿದೆ. ಅದನ್ನು ನಾವು ವಶಕ್ಕೆ ಪಡೆಯುವ ಮುನ್ನ ಅದರ ದುರಸ್ಥಿ ಏನೇ ಇದ್ದರೂ ಅದನ್ನು ಸರಿಪಡಿಸಿ ನೀಡಬೇಕು. ಇಲ್ಲವಾದಲ್ಲಿ ತೆಗೆದುಕೊಳ್ಳಲು ಆಗುವುದಿಲ್ಲ. ಈ ಬಗ್ಗೆ ಮತ್ತೊಮ್ಮೆ ಎಂಜಿನಿರ್‍ಗಳ ಜೊತೆ ಮಾತನಾಡು ತ್ತೇನೆ. ಸ್ಕೈವಾಕರ್ ಬಳಕೆಯಾಗಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

ಟಿ.ಭೂಬಾಲನ್, ಪಾಲಿಕೆ ಆಯುಕ್ತರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap