ಬೆಂಗಳೂರು
ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಏಪ್ರಿಲ್ ಅಂತ್ಯದೊಳಗಾಗಿ ಭರ್ತಿ ಮಾಡುವುದಾಗಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿಧಾನಸಭೆಗಿಂದು ಭರವಸೆ ನೀಡಿದ್ದಾರೆ.ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರಾದ ಶಿವಾನಂದ ಪಾಟೀಲ್,ಡಾ.ರಂಗನಾಥ್,ಪಿ.ಟಿ.ಪರಮೇಶ್ವರ್ ನಾಯ್ಕ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು ಈ ಭರವಸೆ ನೀಡಿದರು.
ರಾಜ್ಯದ ಎಲ್ಲ ಭಾಗಗಳಲ್ಲಿ ಸಮಸ್ಯೆ ಇದೆ.ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆಯಿಂದ ಜನಪ್ರತಿನಿಧಿಗಳು ಮುಜುಗರ ಅನುಭವಿಸುವ ಸ್ಥಿತಿ ಇದೆ.ಈ ಸಮಸ್ಯೆಯನ್ನು ಶೀಘ್ರ ಗತಿಯಲ್ಲಿ ಪರಿಹರಿಸಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಹೇಳಿದ್ದೇನೆ.ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆಯನ್ನು ನೀಗಿಸುವ ಸಂಬಂಧ ಮತ್ತು ಹೊಸನೇಮಕಾತಿಗಳ ಸಂಬಂಧ ವಿವರವಾದ ವರದಿ ನೀಡುತ್ತೇವೆ ಎಂದು ಹೇಳಿದ್ದಾರೆ.ಈ ವರದಿಗೆ ಸಾರ್ವಜನಿಕರ ಆಕ್ಷೇಪ ಸ್ವೀಕರಿಸಿ ಏಪ್ರಿಲ್ ಅಂತ್ಯದೊಳಗೆ ವೈದ್ಯರ ಕೊರತೆಯನ್ನು ಬಗೆಹರಿಸುತ್ತೇವೆ ಎಂದು ನುಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ ಎಂದಾಗ ಜನಪ್ರತಿನಿಧಿಗಳು ಅನುಭವಿಸುವ ಮುಜುಗರ ಏನು?ಆ ಪ್ರಶ್ನೆ ಎದುರಾದಾಗ ನಾವು ಹೇಗೆ ತಲೆ ತಪ್ಪಿಸಿಕೊಂಡು ಬರುತ್ತೇವೆ?ಅನ್ನುವ ವಿಷಯ ನನಗೆ ಗೊತ್ತಿದೆ.ಈ ಸಮಸ್ಯೆಗೆ ಹಲವು ಕಾರಣಗಳೂ ಇವೆ.ಸದನದಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೂ,ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೂ ವೇತನ ಮತ್ತಿತರ ಸವಲತ್ತುಗಳಲ್ಲಿ ತಾರತಮ್ಯ ಇದೆ ಎಂದರು.
ವೈದ್ಯರಿಂದ ಹಿಡಿದು ಇತರ ಸಿಬ್ಬಂದಿಗಳ ತನಕ ಈ ವೇತನ ತಾರತಮ್ಯ ಇದ್ದು ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮಾಡುವ ಕೆಲಸವನ್ನೇ ನಾವೂ ಮಾಡುತ್ತೇವೆ.ಆದರೆ ಅವರಿಗಿಂತ ನಮಗೇಕೆ ವೇತನ ಕಡಿಮೆ?ಎಂದು ಇವರು ಪ್ರಶ್ನೆ ಮಾಡುತ್ತಾರೆ.
ಹೀಗಾಗಿ ವೇತನದಲ್ಲಿರುವ ತಾರತಮ್ಯ ನಿವಾರಣೆಯಾಗಬೇಕು ಎಂದು ಸಚಿವ ಬಿ.ಶ್ರೀರಾಮುಲು ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಏಪ್ರಿಲ್ ಅಂತ್ಯದ ಒಳಗಾಗಿ ವೈದ್ಯರ ನೇಮಕಾತಿ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಡಾ.ರಂಗನಾಥ್,ಪಿ.ಟಿ.ಪರಮೇಶ್ವರ ನಾಯ್ಕ್,ಶಿವಾನಂದಪಾಟೀಲ್ ಮತ್ತಿತರರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿ ಬಂದಿದೆ ಎಂದರು.
ಇದರಿಂದಾಗಿ ಅವರು ನಮ್ಮನ್ನು ಪ್ರಶ್ನಿಸುತ್ತಾರೆ.ನಾವು ಉತ್ತರ ಕೊಡಲಾಗದ ಸ್ಥಿತಿಯಲ್ಲಿ ಇದ್ದೇವೆ.ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು.ಹೊಸ ವೈದ್ಯರ ನೇಮಕಾತಿಗೆ ಇರುವ ಅಡ್ಡಿಗಳನ್ನು ನಿವಾರಿಸಬೇಕು ಎಂದು ಒತ್ತಾಯ ಮಾಡಿದರು.
ವೈದ್ಯರ ನೇಮಕಾತಿಗಾಗಿ ಕೆಪಿಎಸ್ಸಿ ಪರೀಕ್ಷೆ ಬೇಡ.ಬದಲಿಗೆ ನೇರ ನೇಮಕಾತಿಯ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಿ.ವಿಳಂಬ ಮಾಡುತ್ತಾ ಕೂತರೆ ಜನರ ಸಮಸ್ಯೆ ಹೆಚ್ಚಾಗುತ್ತದೆ ಎಂದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ.ಆದರೆ ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಕಡಿಮೆ ವೇತನ ಪಡೆಯುತ್ತಿದ್ದಾರೆ.ಇದನ್ನು ಸರಿಪಡಿಸದಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ.ಅಲ್ಲಿರುವ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ.ಈ ಕೊರತೆಯನ್ನು ನಿವಾರಿಸದಿದ್ದರೆ ಜನರ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








