ಶೀಘ್ರದಲ್ಲಿ ರಾಜ್ಯದಲ್ಲಿ ಪಿಪಿಇ ಕಿಟ್ ಕಾರ್ಖಾನೆ : ಅಶೋಕ್

ಬೆಂಗಳೂರು

     ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣ ಉದ್ದೇಶದಿಂದ ಪಿಪಿಇ ಕಿಟ್ ತಯಾರಿಸುವ ಕಾರ್ಖಾನೆಗಳನ್ನು ತೆರೆಯಲು ಸರ್ಕಾರ ಉದ್ದೇಶಿಸಿದೆ ಎಂದು ಕಂದಾಯ ಸಚಿವ, ಬೆಂಗಳೂರು ದಕ್ಷಿಣ ವಲಯ ಕೋವಿಡ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಆರ್.ಅಶೋಕ್ ಹೇಳಿದ್ದಾರೆ.

      ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಪರಿಕರಗಳಿಗೆ ಸಂಬಂಧಿತ ಕಾರ್ಖಾನೆಗಳನ್ನು ತೆರೆಯಲು ಅವಕಾಶ ನೀಡುವಂತೆ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ. ಅವರು ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

      ನಾಳೆ ಎರಡು ಹಂತದಲ್ಲಿ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ. ಬೆಳಿಗ್ಗೆ ಹೆಚ್ಚು ಪ್ರಕರಣಗಳು ಇರುವ, ಸಂಜೆ ಕಡಿಮೆ ಪ್ರಕರಣಗಳ ಜಿಲ್ಲೆಗಳ ಜೊತೆ ಸಮಾಲೋಚನೆ ಮಾಡಲಾಗುವುದು. ಜಿಲ್ಲಾಧಿಕಾರಿಗಳಿಂದ ಅಭಿಪ್ರಾಯ ಪಡೆದು ನಂತರ ಸೋಂಕು ತೀವ್ರವಾಗಿರುವ ಜಿಲ್ಲೆಗಳಗೆ ಲಾಕ್ ಡೌನ್ ವಿಸ್ತರಣೆ ಮಾಡಬೇಕೆ ಅಥವಾ ಬೇಡವೆ ಎನ್ನುವ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗುವುದು ಎಂದು ಹೇಳಿದರು.

     ಮಂಗಳವಾರದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ ಜಾರಿಯಾಗಲಿದ್ದು, ಮಾರ್ಗಸೂಚಿ ಬಗ್ಗೆ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಈಗಾಗಲೇ ಮಾತನಾಡಿದ್ದಾರೆ. ಸೋಮವಾರ ಮಾರ್ಗಸೂಚಿ ಬಿಡುಗಡೆ ಆಗಲಿದ್ದು, ಪಾಸಿಟಿವ್ ಕೇಸ್ ಬಂದಿರುವ ಜಿಲ್ಲೆಗಳಲ್ಲಿ ಸೀಲ್ ಡೌನ್ ಮಾಡಲು ಈಗಾಗಲೇ ಸೂಚನೆ ಕೊಡಲಾಗಿದೆ. ಹೆಚ್ಚು ಪ್ರಕರಣಗಳು ಇರುವ ಜಿಲ್ಲೆಗಳಿಗೆ, ಕಡಿಮೆ ಪ್ರಕರಣ ಇರುವ ಜಿಲ್ಲೆಗೆಳಿಗೆ ಪ್ರತ್ಯೇಕ ಪ್ರತ್ಯೇಕ ಆದೇಶ ನೀಡಲಾಗುತ್ತದೆ. ಬೆಂಗಳೂರು ಲಾಕ್ ಡೌನ್ ಅವಧಿಯಲ್ಲಿ ವೈದ್ಯಕೀಯ ಸಂಬಂಧಿತ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶ ನೀಡಲು ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದರು.

     ಕೊರೋನಾ ನಿಯಂತ್ರಣಕ್ಕೆ ಸರಪಳಿ ಕತ್ತರಿಸಲೇಬೇಕಾಗುತ್ತದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಇದ್ದು, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಈ ಕೊರತೆ ಇಲ್ಲ. ಖಾಸಗಿ ಆಸ್ಪತ್ರೆಗಳ ಬೆಡ್ ಸ್ಟ್ರೀಮ್ ಲೈನ್ ಮಾಡಿದರೆ ಬೆಂಗಳೂರಿನಲ್ಲಿ ಹಾಸಿಗೆ ಸಮಸ್ಯೆ ನೀಗುತ್ತದೆ. ಮಾನವೀಯತೆಯಿಂದ ಸಹಾಯ ಮಾಡಿ ಎಂದು ಖಾಸಗಿ ಆಸ್ಪತ್ರೆಗಳಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಬೆಂಗಳೂರು ಲಾಕ್ ಡೌನ್ ಸದ್ಯಕ್ಕೆ ಏಳು ದಿನ ಮಾತ್ರ ಘೋಷಿಸಲಾಗಿದೆ. ಸ್ಪೀಡ್ ಯಾವ ರೀತಿ ಕಡಿಮೆ ಆಗುತ್ತದೆ ಎಂಬುದನ್ನು ನೋಡಿ, ನಂತರ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎಂದು ತಜ್ಞರ ವರದಿ ಕೂಡ ಪಡೆದು ಎರಡು ದಿನ ಮೊದಲೇ ತಿಳಿಸುತ್ತೇವೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದವರು ಮನೆಯಲ್ಲೇ ಇರಬೇಕು ಎಂದು ಹೇಳಿದರು.

     ತಮ್ಮ ಊರುಗಳಿಗೆ ತೆರಳುವವರು ಸೋಮವಾರ ಮತ್ತು ಮಂಗಳವಾರ ಹೋರಡಬಹುದು. ಇದಕ್ಕಾಗಿ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link