ಹಾನಗಲ್ಲ:
ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯಕ್ಕಾಗಿ ವಿಶೇಷ ಆಸ್ತೆ ವಹಿಸಲಾಗುತ್ತದೆ, ಆದರೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ, ರೈತರ ಸಾಲ ಮನ್ನಾ ಹಣವನ್ನು ಹೊಂದಿಸಿಕೊಳ್ಳುವ, ಸರ್ಕಾರ ಉಳಿಸಿಕೊಳ್ಳುವ ಧಾವಂತದಲ್ಲಿ ಸರ್ಕಾರ ಮುಳುಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಸರಕಾರದ ವಿರುದ್ಧ ಹರಿಹಾಯ್ದರು.
ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದಶರಥಕೊಪ್ಪ ಗ್ರಾಮದಲ್ಲಿ ರೂ.12 ಲಕ್ಷದಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿವ ನೀರಿನ ಘಟಕ, ಗುಡಗುಡಿ ಗ್ರಾಮದಲ್ಲಿ ರೂ. 20 ಲಕ್ಷದಲ್ಲಿ ನಿರ್ಮಿಸಲಾದ ನಲ್ಲಿ ನೀರು ಸರಬರಾಜು ಯೋಜನೆ ಮತ್ತು ರೂ.3.20 ಲಕ್ಷದಲ್ಲಿ ನಿರ್ಮಾಣಗೊಂಡ ಅಕ್ಷರ ದಾಸೋಹ ಕೊಠಡಿ, ಗಾಜೀಪೂರ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ, ಮುಸ್ಲಿಂ ಸಮುದಾಯ ಭವನ ಉದ್ಘಾಟಿಸಿ, ನಂತರ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ರೂ.18 ಲಕ್ಷದಲ್ಲಿ ರಾಜೀವಗಾಂಧಿ ಸೇವಾ ಕೇಂದ್ರ, ರೂ.13 ಲಕ್ಷದಲ್ಲಿ ರೈತ ಸಂಜೀವನಿ ಕೇಂದ್ರ, ಗೋದಾಮು ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ, ಉಜ್ವಲ ಯೋಜನೆ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿ ಅವರು ಮಾತನಾಡಿದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, “ಎನ್‍ಆರ್‍ಇಜಿ ಅಡಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಕಾಲವಿದು, ಶೇ80 ಯಂತ್ರ, ಪರಿಕರ ಮತ್ತು ಶೇ20 ರಷ್ಟು ಮಾನವ ಶಕ್ತಿ ಬಳಿಸಿ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿಯಮ ಮಾಡಲಾಗಿದೆ. ಇದರ ಸದ್ಬಳಕೆಯಾಗಬೇಕು ಎಂದ ಅವರು, ಕೃಷಿ ಸಂಜಯಿನಿ ಅಡಿಯಲ್ಲಿ ಹಾವೇರಿ ಜಿಲ್ಲೆಗೆ ಕೃಷಿಗೆ ರೂ.70 ಕೋಟಿ ಮತ್ತು ತೋಟಗಾರಿಕೆ ಬೆಳೆಗಳಿಗೆ ರೂ.60 ಕೋಟಿ ಅನುದಾನ ಬಿಡುಗಡೆಯಾಗಿದೆ, ಹಾವೇರಿ ಜಿಲ್ಲೆಯೊಂದರಲ್ಲಿ ಉಜ್ವಲ ಯೋಜನೆಯ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಲಾಗಿದೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಮೀಜಾಭಿ ಹಂಚಿನಮನಿ, ಮುಖಂಡರಾದ ಮಲ್ಲನಗೌಡ ವೀರನಗೌಡ್ರ, ಶಿವಾಜಿ ಸಾಳುಂಕೆ, ನಿಂಗಪ್ಪ ಗೊಬ್ಬೆರ, ಚಂದ್ರು ಉಗ್ರಣ್ಣನವರ, ಗದಿಗಯ್ಯ ಹಿರೇಮಠ, ಮುನೀರ್‍ಅಹ್ಮದ್ ಹಂಚಿನಮನಿ, ರವಿ ಪಾಟೀಲ, ಮಹೇಶ ಹಿರೇಮಠ, ಜಿಲ್ಲಾ ಪಂಚಾಯ್ತಿ ಎಂಜನಿಯರ್ ಎಂ.ಆರ್.ಸೊಪ್ಪಿಮಠ, ಪಾಂಡುರಂಗಪ್ಪ ಮೊದಲಾದವರು ಈ ಸಂದರ್ಭದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ