ಸುಗಮ -ನೈತಿಕ ಮತದಾನಕ್ಕೆ ಸೂಕ್ತ ಭದ್ರತಾ ನಿಯೋಜನೆ- ಪೊಲೀಸ್ ವೀಕ್ಷಕರ ಸಲಹೆ

ಹಾವೇರಿ

          ಸುಗಮ ಹಾಗೂ ನ್ಯಾಯ ಸಮ್ಮತ ಮತದಾನಕ್ಕೆ ಅಗತ್ಯವಾದ ಭದ್ರತೆ ಹಾಗೂ ಮುಕ್ತವಾಗಿ ಜನರು ಮತದಾನ ಮಾಡಲು ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಭಾರತ ಚುನಾವಣಾ ಆಯೋಗದಿಂದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಿಯೋಜನೆಗೊಂಡಿರುವ ಕೇಂದ್ರ ಪೊಲೀಸ್ ವೀಕ್ಷಕರಾದ ಹಿರಿಯ ಐ.ಪಿ.ಎಸ್. ಅಧಿಕಾರಿ ಸಿದ್ಧಾರ್ಥ ಎಂ. ನಾರವನೆ ಅವರು ಸಲಹೆ ನೀಡಿದರು.

          ಭಾನುವಾರ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗದಗ ಮತ್ತು ಹಾವೇರಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಅವರು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಅಗತ್ಯಕ್ಕನುಸಾರವಾಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲು ಉಭಯ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.

         ದುರ್ಬಲ ಸಮುದಾಯ ವಾಸಿಸುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಆತ್ಮವಿಶ್ವಾಸದಿಂದ ನಿರ್ಭಯದಿಂದ ಮತ ಚಲಾಯಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ಕ್ರಿಟಿಕಲ್ ಹಾಗೂ ವಲ್ನೆರಬಲ್(ದುರ್ಬಲ ಜನವಾಸಿಸುವ) ಮತಗಟ್ಟೆಗಳಲ್ಲಿ ವಿಶೇಷ ಗಮನಹರಿಸಬೇಕು. ಸೂಕ್ತ ಭದ್ರತಾ ಕ್ರಮಗಳನ್ನು ವಹಿಸುವಂತೆ ಅವರು ಸೂಚಿಸಿದರು. ವಿವಿಧ ಮತಗಟ್ಟೆಗಳಿಂದ ಸ್ಟ್ರಾಂಗರೂಮ್‍ಗೆ ಮತಪೆಟ್ಟಿಗೆಗಳನ್ನು ಸಾಗಿಸುವಾಗ ವಿಶೇಷ ಪೊಲೀಸ್ ಪಡೆಯ ನಿಯೋಜನೆ, ಸೂಕ್ತ ಭದ್ರತಾ ಕ್ರಮಗಳ ಕುರಿತಂತೆ ಸಲಹೆ ನೀಡಿದರು.

          ಕೇಂದ್ರ ಸಾಮಾನ್ಯ ವೀಕ್ಷಕರಾದ ಡಾ.ಅಖ್ತರ್ ರಿಯಾಜ್ ಅವರು ಮಾತನಾಡಿ, ಕ್ಲಸ್ಟರ್ ಮತಗಟ್ಟೆಗಳಲ್ಲಿ ಆಯೋಗದ ಮಾರ್ಗಸೂಚಿಯಂತೆ ಹೆಚ್ಚಿನ ಪೊಲೀಸ್ ನಿಯೋಜಿಸಬೇಕು. ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುವ ಸಖಿ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆಗಳನ್ನು ಒದಗಿಸಬೇಕು. ಕೆಲವು ಮತಗಟ್ಟೆಗಳಲ್ಲಿ ಕೆಲ ಪ್ರಬಲ ಕೋಮಿನ ಮತದಾರರು ಹೆಚ್ಚಿರುವ ಸಂದರ್ಭದಲ್ಲಿ ಪ್ರಬಲ ಸಮುದಾಯದ ನಾಯಕರು ಇತರರ ಮೇಲೆ ಬಲವಂತವಾಗಿ ಮತದಾನ ಮಾಡುವಂತೆ ಒತ್ತಾಯ ಹೇರುವ ಸಂಭವವಿರುತ್ತದೆ. ಇಂತಹ ಸಂದರ್ಭಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಸೂಕ್ತ ಬಂದೋಬಸ್ತ್ ಒದಗಿಸಬೇಕು ಎಂದು ಸೂಚಿಸಿದರು.

           ಮತಗಟ್ಟೆಗಳ ಹೊರಗಡೆ ಆಯಾ ಮತಗಟ್ಟೆಗಳ ಸೂಕ್ಷ್ಮತೆಗನುಗುಣವಾಗಿ ಶಸ್ತ್ರ ಸಹಿತ ಪೊಲೀಸ್, ಮುಖ್ಯ ಪೇದೆ, ಕಾನ್ಸೆಟೇಬಲ್, ಹೋಮ್‍ಗಾರ್ಡ್, ಮಹಿಳಾ ಪೊಲೀಸ್ ಪೇದೆಗಳನ್ನು ನಿಯೋಜಿಸಬೇಕು. ಅಗತ್ಯಕ್ಕನುಸಾರವಾಗಿ ಕೇಂದ್ರ ಮೀಸಲು ಪಡೆ ಹಾಗೂ ಜಿಲ್ಲಾ ಶಸ್ತ್ರಪಡೆ ತಂಡಗಳನ್ನು ಬಳಸಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ಮುಸುಕು ಹಾಕಿಕೊಂಡು ನಕಲಿ ಮತದಾನಕ್ಕೆ ಯತ್ನಿಸುವ ಸಂದರ್ಭಗಳು ಎದುರಾಗಬಹುದು. ಇಂತಹ ಮತಗಟ್ಟೆಗಳನ್ನು ಗುರುತಿಸಿ ತಪಾಸಣೆಗೆ ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಸಲಹೆ ನೀಡಿದರು.

           ಕೇಂದ್ರ ವೆಚ್ಚ ವೀಕ್ಷಕರಾದ ಹಸನ್ ಅಹ್ಮದ್ ಅವರು ಮಾತನಾಡಿ, ಸೆಕ್ಟರ್ ಅಧಿಕಾರಿಗಳು ಮತದಾನದ ಹಿಂದಿನ ದಿನಗಳಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾವಹಿಸಬೇಕು. ಮತದಾರರಿಗೆ ಹಂಚಿಕೆ ಮಾಡಲು ಹಣ, ವಿವಿಧ ವಸ್ತುಗಳ ಹಂಚಿಕೆ ಚಟುವಟಿಕೆಗಳ ಮೇಲೆ ಸೆಕ್ಟರ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ತೀವ್ರ ಗಮನಹರಿಸಬೇಕು. ಪರಸ್ಪರ ಮಾಹಿತಿಯ ವಿನಿಮಯಗಳ ಮೂಲಕ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸೂಚಿಸಿದರು.

           ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ಕ್ಷೇತ್ರ ಮಟ್ಟದಲ್ಲಿ ಚುನಾವಣಾ ಅಕ್ರಮಗಳ ತಡೆಗೆ ನಿಯೋಜನೆಗೊಂಡಿರುವ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಚುರುಕಿನಿಂದ ಕಾರ್ಯನಿರ್ವಹಿಸಬೇಕು. ಕ್ಷೇತ್ರಮಟ್ಟದಲ್ಲಿ ಹೈಲರ್ಟ್ ಆಗಿರಬೇಕು.

         ಸಣ್ಣ ಘಟನೆ ನಡೆದರು ಕಂಟ್ರೋಲ್ ರೂಮ್‍ಗೆ ಮಾಹಿತಿ ರವಾನಿಸಬೇಕು. ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ತ್ವರಿತವಾಗಿ ಘಟನೆಯ ಸ್ಥಳಕ್ಕೆ ತೆರಳಿ ಕ್ರಮಕೈಗೊಳ್ಳಬೇಕು. ತ್ವರಿತ ಸ್ಪಂದನೆ, ಪರಸ್ಪರ ಸಮನ್ವಯತೆ, ಮಾಹಿತಿ ಹಂಚಿಕೆ ಮೂಲಕ ಚುನಾವಣೆ ಪ್ರಕ್ರಿಯೆಗೆ ಯಾವುದೇ ತಡೆ ಇಲ್ಲದಂತೆ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.

           ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಅವರು ಆಯಾ ಜಿಲ್ಲೆಯಲ್ಲಿರುವ ತಾಲೂಕುವಾರು ರೌಡಿಸೀಟರ್, ಕಮ್ಯೂನಿಲ್ ಗೂಂಡಾಗಳು ಹಾಗೂ ಕಳೆದ ಚುನಾಚಣೆಗಳಲ್ಲಿ ಅಪರಧ ವ್ಯಸಗಿದವರ ವಿವರ, ಬಾಂಡ್‍ಓವರ್ ಆಗಲು ಬಾಕಿ ಇರುವ ಪ್ರಕರಣಗಳು, ಚೆಕ್ ಪೋಸ್ಟ್‍ಗಳ ವಿವರ, ಸ್ಟ್ಯಾಟಿಕ್ ಸರ್ವಲೆನ್ಸ್ ಟೀಂ, ಫ್ಲೈಯಿಂಗ್ ಸ್ಕ್ವಾಡ್ ವಿವರ, ಭದ್ರತೆಗೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿಗಳು ಹಾಗೂ ಮತಗಟ್ಟೆಗಳ ಸೂಕ್ಷ್ಮತೆಗನುಗುಣವಾಗಿ ಪೊಲೀಸ್ ಸಿಬ್ಬಂದಿ, ಮಹಿಳಾ ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್, ಅಬಕಾರಿ ಗಾರ್ಡ್, ಫಾರೆಸ್ಟ್ ಗಾರ್ಡ್ ಹಾಗೂ ಕಾರಾಗೃಹ ಗಾರ್ಡ್‍ಗಳ ನಿಯೋಜನೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಮ ಅರೆ ಮಿಲಟರಿ ಪಡೆಗಳ ಆಗಮನ ಹಾಗೂ ತಾಲೂಕುವಾರು ಡಿವೈಎಸ್ ಪಿ, ಸರ್ಕಲ್ ಇನ್ಸಪೆಕ್ಟರ್, ಪೊಲೀಸ್ ಸಬ್ ಇನ್ಸಪೆಕ್ಟರ್ ನೇತೃತ್ವದಲ್ಲಿ ರಚಿಸಿರುವ ತಂಡಗಳ ವಿವರ ಹಾಗೂ ಕಾರ್ಯಯೋಜನೆ ಕುರಿತಂತೆ ವಿವರಿಸಿದರು.

            ಸಭೆಯಲ್ಲಿ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಹಾಗೂ ಎಂ.ಸಿ.ಸಿ. ನೋಡಲ್ ಅಧಿಕಾರಿ ವಾಸಣ್ಣ, ಹಾವೇರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಭಯ ಜಿಲ್ಲೆಗಳ ಪೊಲೀಸ್ ಉಪಾಧೀಕ್ಷಕರು, ವೃತ್ತ ಪೊಲೀಸ್ ನಿರೀಕ್ಷಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link