ಮುದ್ದಹನುಮೆಗೌಡರು ನಾಮಪತ್ರ ಹಿಂಪಡೆಯುತ್ತಾರೆ : ಡಾ.ಜಿ.ಪರಮೇಶ್ವರ್ ವಿಶ್ವಾಸ

ತುಮಕೂರು

      ತುಮಕೂರು: ಎಸ್.ಪಿ.ಮುದ್ದಹನುಮೇಗೌಡ, ಕೆ.ಎನ್.ರಾಜಣ್ಣ ಅವರನ್ನು ನಾಮ ಪತ್ರ ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮುದ್ದಹನುಮೆಗೌಡರು ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಅವರು ನಾಮ ಪತ್ರ ಹಿಂಪಡೆಯದಿದ್ದರೆ, ನಾವು ಏನು ಮಾಡೋದಕ್ಕಾಗುವುದಿಲ್ಲ. ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ತಿಳಿಸಿದರು.

       ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಚುನಾವಣಾ ತಂತ್ರ ರೂಪಿಸುವ ಸಲುವಾಗಿ ಬುಧವಾರ ಎಸ್‍ಎಸ್‍ಐಟಿ ಕಾಲೇಜಿನಲ್ಲಿರುವ ವಿಶ್ರಾಂತಿ ಗೃಹದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರ ಜಂಟಿ ಸಭೆಗೂ ಮುನ್ನ ಮಾತನಾಡಿದ ಅವರು, ಎಸ್.ಪಿ.ಮುದ್ದಹನುಮೇಗೌಡ ಮತ್ತು ಕೆ.ಎನ್.ರಾಜಣ್ಣ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಮುದ್ದಹನುಮೇಗೌಡ ಅವರು ಸಜ್ಜನ ರಾಜಕಾರಣಿಯಾಗಿದ್ದು, ನಾಮಪತ್ರ ವಾಪಸ್ಸು ಪಡೆಯುವ ವಿಶ್ವಾಸವಿದೆ. ಅವರಿಗೆ ನಮ್ಮ ದೂರದೃಷ್ಟಿಯ ಯೋಜನೆ ಕುರಿತು ಮನವರಿಕೆ ಮಾಡಲಾಗುತ್ತದೆ. ಅವರು ನಾಮಪತ್ರ ಹಿಂದಕ್ಕೆ ಪಡೆಯಲಿದ್ದಾರೆ. ಹಿಂಪಡೆಯದಿದ್ದರೆ ನಾವು ಏನು ಮಾಡಲು ಆಗುತ್ತದೆ ಎಂದು ಪ್ರತಿಕ್ರಿಯಿಸಿದರು.

        ಬಿಜೆಪಿ ಪಕ್ಷವನ್ನು ದೇಶದ ಅಧಿಕಾರದಿಂದ ದೂರವಿಡಲು ಎಷ್ಟು ಪ್ರಯತ್ನ ಮಾಡಬೇಕೋ ಅಷ್ಟೂ ತಂತ್ರ್ರ ರೂಪಿಸಲಾಗುತ್ತಿದೆ. ದೇಶದಲ್ಲಿ ಶಾಂತಿ ನೆಲೆಸಲು ಬಯಸುತ್ತೇವೆ. ಹಾಗೂ ಜಾತ್ಯಾತೀತವಾದ ಮನಸ್ಥಿತಿ ಕಾಪಾಡಬೇಕು. ಹೀಗಾಗಿ ದೇಶದಲ್ಲಿ ಬಿಜೆಪಿ ಯಾವತ್ತೂ ಅಧಿಕಾರಕ್ಕೆ ಬರಬಾರದು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬಾರದು. ಈ ಬಗ್ಗೆ ಮುದ್ದಹನುಮೇಗೌಡ ಅವರಿಗೆ ಮನವರಿಕೆ ಮಾಡಲಾಗುತ್ತದೆ. ಇದನ್ನು ಅವರು ಅರ್ಥ ಮಾಡಿಕೊಳ್ಳುವ ಭರವಸೆ ಇದೆ ಎಂದರು.

ವಿ.ಸೋಮಣ್ಣ ವಿರುದ್ಧ ಗೌರಿ ಶಂಕರ್ ವಾಗ್ದಾಳಿ:

       ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿ ಮುಖಂಡ ವಿ.ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತುಮಕೂರು ಜಿಲ್ಲೆಗೆ ವಿ.ಸೋಮಣ್ಣನವರ ಕೊಡುಗೆಯಾದರೂ ಏನು? ಅವರು ತುಮಕೂರಿಗೆ ಬಂದಾಗಲೆಲ್ಲಾ ಕೇವಲ ಮಠಕ್ಕೆ ಹೋಗುವುದು ಬಿಟ್ಟರೆ ಮತ್ತೇನು ಗೊತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಮಾತನಾಡಬೇಕಾದ್ರೆ ಜ್ಞಾನ ಇಟ್ಟುಕೊಂಡು ಮಾತನಾಡಬೇಕು. ವಿರೋಧ ಪಕ್ಷದವರು ದೇವೇಗೌಡರು ಸ್ಪರ್ಧೆ ಮಾಡಿದ್ರೆ ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದರು.

       ದೇವೇಗೌಡ್ರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಅವರ ಗೆಲುವು ಖಚಿತವಾಗಿದೆ. ಯಾರಿಗೆ ಮತ ಹಾಕಬೇಕು ಎಂಬುದನ್ನು ಜನತೆ ನಿರ್ಧಾರ ಮಾಡಲಿದ್ದಾರೆ. ಜನರು ಮಾಜಿ ಪ್ರಧಾನಿಗೆ ಮತ ಹಾಕೋದು ನಮ್ಮ ಸೌಭಾಗ್ಯ ಎಂದೇ ಭಾವಿಸಿದ್ದಾರೆ ಎಂದರಲ್ಲದೆ, ಮೈತ್ರಿ ಪಕ್ಷದವರು ಹಣಬಲದಿಂದ ಗೆಲ್ತಾರೆ ಎಂದ ಬಿಜೆಪಿಗೆ ನಮ್ಮ ಬಳಿ ಹಣ ಇಲ್ಲ, ಐಟಿ ಬಿಟಿ ಕಂಪನಿಗಳಿಲ್ಲ ಇರೋದು ರೈತರು ಮಾತ್ರ ಎಂದು ತಿರುಗೇಟು ನೀಡಿದ್ದಾರೆ. ಇನ್ನೂ ಮುದ್ದಹನುಮೇಗೌಡರ ವಿಚಾರ ಕುರಿತು ಎಲ್ಲಾ ಬಂಡಾಯ ಶಮನವಾಗುತ್ತೆ ಎಂದು ತಿಳಿಸಿದರು.

ದೇವೇಗೌಡರನ್ನು ಸಮರ್ಥಿಸಿಕೊಂಡ ಎಂ.ಟಿ.ಕೃಷ್ಣಪ್ಪ:

        ಸಭೆಗು ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಹೇಮಾವತಿ ವಿಚಾರದಲ್ಲಿ ಬಿಜೆಪಿಯವರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ದೇವೆಗೌಡರಿಂದ ತುಮಕೂರಿಗೆ ಅನ್ಯಾಯವಾಗಿದೆ ಎಂದೆಲ್ಲಾ ಬಿಂಬಿಸುತ್ತಿದ್ದಾರೆ. ನಿಜಕ್ಕೂ ದೇವೇಗೌಡರಿಂದ ತುಮಕೂರಿಗೆ ಯಾವುದೇ ರೀತಿ ಅನ್ಯಾಯವಾಗಿಲ್ಲ. 1983ರಲ್ಲಿ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಚಿವರಾಗಿ ದೇವೇಗೌಡರು ಹೇಮಾವತಿ ಚಾನಲ್‍ಗಾಗಿ ಅನುದಾನ ಕೇಳಿದ್ದು, ಅದು ಕೊಡದೇ ಇದ್ದಾಗ ರಾಜಿನಾಮೆ ನೀಡಿದ್ದರು. ಅಂತಹ ಇತಿಹಾಸವುಳ್ಳಂತರ ರಾಜಕಾರಣಿ ಅವರಾಗಿದ್ದರು. ತುಮಕೂರಿಗೆ ಹರಿದ ಹೇಮಾವತಿ ನೀರು ಸರಿಯಾಗಿ ಹಂಚಿಕೆ ಆಗುತ್ತಿರಲಿಲ್ಲ. ಸುಖಾಸುಮ್ಮನೆ ದೇವೇಗೌಡರ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ದೇವೇಗೌಡರನ್ನು ಸಮರ್ಥಿಸಿಕೊಂಡಿದ್ದಾರೆ.

         ಹಾಸನದ ರಾಜಕಾರಣಿಗಳಿಂದ ನೀರು ನೀಡುವಲ್ಲಿ ಯಾವುದೇ ರೀತಿಯ ತೊಂದರೆ ಆಗುತ್ತಿರಲಿಲ್ಲ. ದರೆ ಜಿಲ್ಲೆಯ ಅಧಿಕಾರಿಗಳೇ ನಿರ್ಲಕ್ಷ ತೋರುತ್ತಿದ್ದರು. ಅಧಿಕಾರಿಗಳ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೆವು. ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಯಥೇಚ್ಛವಾಗಿ ಹರಿದಿದೆ. ಆದರೆ ಅದನ್ನು ತಿಳಿದುಕೊಳ್ಳದ ವಿರೋಧ ಪಕ್ಷದವರು ಸುಖಾಸುಮ್ಮನೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ದೇವೇಗೌಡರಿಗೆ ಮತ್ತೊಮ್ಮೆ ಪ್ರಧಾನಿ ಅವಕಾಶ

         ದೇವೇಗೌಡರು ಹೆಚ್ಚು ಮತಗಳ ಅಂತರದಲ್ಲಿ ಜಯಶೀಲರಾಗಿ ಕೇಂದ್ರಕ್ಕೆ ಹೋದರೆ ಅವರಿಗೆ ಮತ್ತೊಮ್ಮೆ ಪ್ರಧಾನಿಯಾಗುವ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ. ದೇವೇಗೌಡರು ದೈವಭಕ್ತರು ಹಾಗಾಗಿ ದೈವ ಸಂಕಲ್ಪದಿಂದ ಅವರಿಗೆ ಉನ್ನತ ಸ್ಥಾನಮಾನ ಸಿಗುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ತುಮಕೂರು ಜನತೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಜಯಶೀಲರನ್ನಾಗಿಸುವಂತೆ ಮನವಿ ಮಾಡಿದರು.

         ಮಧ್ಯಾಹ್ನ 1.30ರ ವೇಳೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಚಿವ ಎಸ್.ಆರ್.ಶ್ರೀನಿವಾಸ್ ನೇತೃತ್ವದಲ್ಲಿ ಪ್ರಾರಂಭವಾದ ಸಭೆಯಲ್ಲಿ ಮಾಜಿ ಶಾಸಕರಾದ ಷಫೀ ಅಹಮ್ಮದ್, ಡಾ.ಎಸ್.ರಫೀಕ್ ಅಹಮ್ಮದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ, ವಿಧಾನಪರಿಷತ್ ಸದಸ್ಯ ರಮೇಶ್‍ಬಾಬು, ಮಧುಗಿರಿ ಶಾಸಕ ಎಂ.ವೀರಭದ್ರಯ್ಯ, ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಕಾಂಗ್ರೆಸ್ ಮುಖಂಡ ನಾರಾಯಣ, ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ತಿಮ್ಮರಾಯಪ್ಪ, ಸುಧಾಕರ್‍ಲಾಲ್, ವಿಧಾನಪರಿಷತ್ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಜೆಡಿಎಸ್‍ನ ಲೋಕೇಶ್ವರ್ ಮತ್ತಿತರರು ಭಾಗಿಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬೇಕಾದ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಲಾಯಿತು.

       ಸಭೆ ಬಳಿಕ ಹೊರ ಬಂದ ಸಣ್ಣಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ಸಭೆಯಲ್ಲಿ ಪ್ರಚಾರ ನಡೆಸುವ ಬಗ್ಗೆ ಹಾಗೂ ಯಾರಿಗೆ ಯಾವ ಜವಬ್ದಾರಿ ನೀಡಬೇಕು ಎಂಬುದರ ಬಗ್ಗೆ ಚರ್ಚಿಸಲಾಗಿದೆ. ಮುಂದಿನ ತಿಂಗಳು 3-4 ರಂದು ದೇವೇಗೌಡರು ಪ್ರಚಾರಕ್ಕೆ ಬರಲಿದ್ದಾರೆ. ಈಗಾಗಲೇ ರಾಜ್ಯದ ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ತೊಡಗಲು ಸಮಯ ನಿಗಧಿ ಪಡಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಮುಂಚೆ ತುಮಕೂರಿಗೆ ಆಗಮಿಸಲಿದ್ದಾರೆ. ತುಮಕೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಿಗೂ ತೆರಳಿ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link